ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿಯ ತ್ರಾಸಿ ಬೀಚ್ ಕ್ರಿಕೆಟರ್ಸ್ ಆಶ್ರಯದಲ್ಲಿ ಇಲ್ಲಿನ ಬೀಚ್ ಪರಿಸರದಲ್ಲಿ ನಡೆದ ೩೦ ಗಜಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಲಿಷ್ಠ ಡೆಕ್ಕನ್ ಕ್ರಿಕೆಟರ್ಸ್ ಬೆಂಗಳೂರು ತಂಡವು ಅಂತಿಮ ಪಂದ್ಯದಲ್ಲಿ ಪ್ರತಿಸ್ಪರ್ಧಿ ಬೀಚ್ ಬಾಯ್ಸ್ ನಾವುಂದ ತಂಡವನ್ನು ಮಣಿಸಿ ದಿ. ರಿಚರ್ಡ್ ಡಿ ಅಲ್ಮೇಡಾ ಅವರ ಸ್ಮರಣಾರ್ಥ ತ್ರಾಸಿ ಬೀಚ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಗೆದ್ದುಕೊಂಡಿದೆ.
ಸಂಜೆ ಜರಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಯುವಕರು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರದ ಕ್ರೀಡಾ ಪ್ರತಿಭೆಗಳನ್ನು ಹೊರತರುವ ಕಾರ್ಯ ಸಂಘಸಂಸ್ಥೆಗಳಿಂದ ಆಗಬೇಕು ಎಂದರು.
ಮುಖ್ಯ ಅತಿಥಿ ತ್ರಾಸಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಖಾರ್ವಿ, ದಿ. ರಿಚರ್ಡ್ ಡಿ ಅಲ್ಮೇಡಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಟ್ರೀಜಾ ಡಿಸಿಲ್ವ, ಗ್ರಾ. ಪಂ. ಮಾಜಿ. ಸದಸ್ಯ ರಾಜು ಮೆಂಡನ್, ಉದ್ಯಮಿ ಮಂಜುನಾಥ ಸಾಲಿಯಾನ್, ನಿವೃತ್ತ ಶಿಕ್ಷಕ ರಾಬರ್ಟ್ ಒಲಿವೇರಾ, ತ್ರಾಸಿ ಬೀಚ್ ಕ್ರಿಕೆಟರ‍್ಸ್ ಅಧ್ಯಕ್ಷ ಆಂಟನಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ರಾಯನ್ ಒಲಿವೇರಾ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.