ನಮ್ಮದು ದೇವಾಲಯಗಳ ನಾಡು; ನಮ್ಮಲ್ಲಿ ದೇವಸ್ಥಾನವಿಲ್ಲದ ಹಳ್ಳಿಯಿಲ್ಲ; ಊರಿಲ್ಲ. ಕುಂದಾಪುರವು ಇದಕ್ಕೆ ಹೊರತಾದುದಲ್ಲ. ಕುಂದಾಪುರ ಎಂದೊಡನೆ ಮೊದಲು ನೆನಪಿಗೆ ಬರುವುದು ಊರಿನ ಅಧಿದೇವತೆ ಶ್ರೀ ಕುಂದೇಶ್ವರ. ಶತ-ಶತಮಾನಗಳ ಇತಿಹಾಸವುಳ್ಳ ಶ್ರೀ ಕುಂದೇಶ್ವರ ಸಹಸ್ರ – ಸಹಸ್ರ ಭಕ್ತಾದಿಗಳ ಹೃದಯದಲ್ಲಿ ನೆಲೆ ನಿಂತಿದ್ದಾನೆ. ತಲೆ-ತಲಾಂತರಗಳಿಂದ ಬಂದ ಅಭಿಪ್ರಾಯದಂತೆ ಕುಂದೇಶ್ವರನಿಂದಾಗಿ ಈ ಊರು ಕುಂದಾಪುರ ಎಂದು ಹೆಸರು ಪಡೆಯಿತು. ಹಲವಾರು ಶಾಸನ, ಪುಸ್ತಕಗಳಲ್ಲಿ ಈ ಅಂಶ ಸ್ಪಷ್ಟವಾಗಿ ದಾಖಲಾಗಿದೆ.
*ಶ್ರೀ ಕುಂದೇಶ್ವರ ದೇವಸ್ಥಾನ- ರಚನೆ.
*ಶೃಂಗೇರಿ ಧರ್ಮ ಸಂಸ್ಥಾನದ ಸಂಬಂಧ.
*ಶ್ರೀ ಕುಂದೇಶ್ವರ ಪುಷ್ಕರಿಣಿ.
*ಸಾಂಸ್ಕೃತಿಕ ಕೇಂದ್ರ.
*ಲಕ್ಷ ದೀಪೋತ್ಸವ ಮತ್ತು ರಥೋತ್ಸವ.
*ಭಕ್ತಾದಿಗಳಿಗೆ ಲಭ್ಯವಿರುವ ಸೌಕರ್ಯಗಳು.
*ಸೇವಾ ವಿವರ.
*ಸಂಪರ್ಕ.
ಶ್ರೀ ಕುಂದೇಶ್ವರ ದೇವಸ್ಥಾನ- ರಚನೆ:
ಕುಂದಾಪುರ ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ಕುಂದೇಶ್ವರವೂ ಒಂದು. ಸಮುದ್ರ ತೀರದಿಂದ ಪೂರ್ವಕ್ಕೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸಾಕಷ್ಟು ವಿಶಾಲವಾದ ಹೊರಪ್ರಾಕಾರ; ಮಹಾದ್ವಾರಕ್ಕೆ ಎದುರಾಗಿ ಬಲಿಪೀಠ; ಒಳ ಪ್ರಾಕಾರದಲ್ಲಿ ಒಂದು ನಂದಿ ಮಂಟಪ ಮತ್ತು ಪ್ರದಕ್ಷಿಣಾಪಥದ ಸುತ್ತಲೂ ಚಂದ್ರಶಾಲೆ (ಒಳಪೌಳಿ); ಒಳ ಪ್ರಾಕಾರದ ನಡುವೆ ಗರ್ಭಗೃಹ. ಇವು ದೇವಾಲಯದ ಮುಖ್ಯ ಅಂಗಗಳು. ಇಲ್ಲಿ ಧ್ವಜಸ್ತಂಭವಿಲ್ಲ. ಬಲಿಕಲ್ಲುಗಳಿದ್ದುದರಿಂದ ಈ ದೇವಾಲಯದಲ್ಲಿ ಹಿಂದಿನಿಂದಲೂ ರಥೋತ್ಸವದ ಸಂಪ್ರದಾಯವಿಲ್ಲರಲಿಲ್ಲ. ಕಳೆದ ಎರಡು ವರ್ಷಗಳಿಂದ ದಿಪೋತ್ಸವದ ಜೋತೆಗೆ ರಥೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಕಗ್ಗಲ್ಲಿನಲ್ಲಿ ಸದೃಢವಾಗಿ ನಿರ್ಮಿಸಿರುವ ವೇದಿಕೆ. ಅದರ ಮೇಲೆ ಒಂದೇ ಕೋಣೆಯ ಗರ್ಭಗೃಹ. ಚಚ್ಚೌಕದ ಈ ಗರ್ಭಗುಡಿಯ ಸುತ್ತ ಒಂದು ಕಿರಿದಾದ ಪ್ರದಕ್ಷಿಣಾ ಪಥ. ಸಾಧಾರಣ ರೀತಿಯಲ್ಲಿ ಮಾಡಿದ ಕಣಶಿಲೆಯ ಬಾಗಿಲುವಾಡ. ಕಲ್ಲು ಮತ್ತು ಮುರಕಲ್ಲುಗಳಿಂದ ಕೂಡಿದ ಗೋಡೆ.
ಗರ್ಭಗೃಹದ ಒಳಗೆ ನೆಲಕ್ಕೆ ಕಗ್ಗಲ್ಲ ಚಪ್ಪಡಿಗಳನ್ನು ಹಾಸಿ ಸದೃಢಗೊಳಿಸಲಾಗಿದೆ. ಇಲ್ಲಿ ಸ್ಥಳಾವಕಾಶ ತೀರ ಕಡಿಮೆ. ಇದರ ಕೇಂದ್ರ ಭಾಗದಲ್ಲಿ ಸರಳ ರೀತಿಯಲ್ಲಿ ಕೆತ್ತಲ್ಪಟ್ಟ ಕಲ್ಲಿನ ದೊಡ್ಡ ಪಾಣಿಪೀಠ. ತೀರ್ಥ ಹರಿದು ಹೋಗಲು ಇರುವ ಸೋಮಸೂತ್ರದ ಭಾಗವೂ ಸರಳವಾಗಿದ್ದು ನೇರವಾಗಿ ಕತ್ತರಿಸಲ್ಪಟ್ಟ ಮೂತಿಯನ್ನು ಹೊಂದಿದೆ. ಪಾಣಿಪೀಠದಲ್ಲಿ ಶ್ರೀ ಕುಂದೇಶ್ವರನ ಪ್ರತಿಷ್ಠೆ. ಈ ಶಿವಲಿಂಗವನ್ನು ರುದ್ರಾಕ್ಷ ಶಿಲೆಯಿಂದ ಮಾಡಿದ್ದು, ಇದರ ಹೊರಮೈ ತುಂಬ ದೊರಗಾಗಿದೆ. ಇದರ ಶಿರೋಭಾಗ ಅಡ್ಡಕ್ಕೆ ತುಂಡರಿಸಲ್ಪಟ್ಟ ಕಂಬದಂತೆ ಚಪ್ಪಟೆಯಾಗಿದೆ. ಹಾಗಾಗಿ ಇದೊಂದು ಅಪೂರ್ವ ಶಿವಲಿಂಗ.
ಗರ್ಭಗುಡಿ ಎದುರಿಗೆ ಪ್ರತ್ಯೇಕವಾದ ನಂದಿ ಮಂಟಪ; ಎತ್ತರವಾದ ಜಗುಲಿ; ಇದರ ಮೇಲೆ ನಾಲ್ಕು ಕಂಬಗಳು. ಇವುಗಳ ಮೇಲೆ ಮಂಟಪದ ಮಾಡು. ಕರಿಶಿಲೆಯಲ್ಲಿ ಕಡಿದಿರುವ ನಂದಿ ಚಿಕ್ಕದಾದರೂ ಸುಂದರವಾಗಿದೆ. ಹಿತ – ಮಿತವಾದ ಆಭರಣ. ಕೊರಳು ಮತ್ತು ಬೆನ್ನ ಮೇಲೆ ಗೆಜ್ಜೆ ಮತ್ತು ಗಂಟಿಯ ಹಾರಗಳು. ನಡುವಿನಲ್ಲಿ ದೇಹ ಸುತ್ತಿ ಬಳಸಿರುವ ಒಂದು ವಸ್ತ್ರದ ಪಟ್ಟಿ. ಈ ಮಂಟಪಕ್ಕೀಗ ಹೊಸ ರೂಪ ಬಂದಿದೆ.
ಗರ್ಭಗುಡಿ ಈಗ ಜೀರ್ಣೋದ್ಧಾರಗೊಂಡಿದೆ. ಆದರೆ ಅದು ಮೂಲರಚನೆಗೆ ಭಂಗ ತಂದಿಲ್ಲ. ಗೋಡೆ ಮತ್ತು ಅಲ್ಲಿರುವ ಪಿಲಾಸ್ಟರುಗಳಿಗೆ ಈಗ ಸಿಮೆಂಟಿನ ಲೇಪ. ಕೆಳಹಂತದ ಮಾಡಿಗೆ ಕಾಂಕ್ರೀಟಿನ ಭದ್ರತೆ. ಇದರ ನಾಲ್ಕು ಮೂಲೆಗೂ ನಾಲ್ಕು ಸಣ್ಣ ಗೋಪುರಗಳ ಸೇರ್ಪಡೆಯಾಗಿದೆ.
ಗರ್ಭಗುಡಿಯ ಮೇಲೊಂದು ಸಣ್ಣ ಗೋಪುರ. ಇದರ ಕೇಂದ್ರಭಾಗದಲ್ಲಿ ಕಲಶಸ್ಥಾಪನೆ; ಗೋಪುರದ ಮಾಡು ಮರದ್ದು. ತಾಮ್ರದ ತಗಡುಗಳನ್ನು ಹಾಸಿ, ಇದನ್ನು ರಕ್ಷಿಸಲಾಗಿದೆ. ಮಾಡು ನಾಲ್ಕು ಭಾಗಗಳಲ್ಲಿ ಇಳಿಜಾರಾಗಿದ್ದು, ೪೫ ಡಿಗ್ರಿ ಕೋನದಲ್ಲಿದೆ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇದು ಮುಳಿಹುಲ್ಲಿನ ಮಾಡಾಗಿತ್ತು.
ಪರಿವಾರ ದೇವತೆಗಳು:
ಗರ್ಭಗೃಹದ ಪಾಣಿಪೀಠದ ಬಳಿ ಪ್ರತಿಷ್ಠಾಪಿತವಾಗಿದ್ದ ಕರಿಶಿಲೆಯ ಎರಡು ತುಣುಕುಗಳನ್ನು ಪಾರ್ವತೀ ಮತ್ತು ಗಣಪತಿ ಎಂದು ಗುರುತಿಸಲಾಗಿದ್ದು, ಇದೀಗ ಈ ಪರಿವಾರ ದೇವತೆಗಳಿಗೆ ಗರ್ಭಗೃಹದ ಹೊರಬಾಗಿಲ ಇಕ್ಕೆಲಗಳಲ್ಲಿ ಪ್ರತ್ಯೇಕ ಮಂಟಪಗಳನ್ನು ರಚಿಸಿ ಸುಂದರ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಹೊರಭಾಗದ ಪಾಗಾರದ ಬಳಿ ಇದ್ದ ನಾಗದೇವರಿಗೆ ದೇವಸ್ಥಾನದ ಹೊರಸುತ್ತಿನ ಕಟ್ಟಡದ ಎಡಭಾಗದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅದಕ್ಕೆ ಸಮಾನಾಂತರದಲ್ಲಿ ಶಾಸ್ತಾರ (ಅಯ್ಯಪ್ಪ ಸ್ವಾಮಿ)ನಿಗೆ ಪುಟ್ಟ ಗುಡಿಯೊಂದನ್ನು ನಿರ್ಮಿಸಿ ಕರಿಶಿಲೆಯ ಸುಂದರ ವಿಗ್ರಹವನ್ನು ಆಗಮೋಕ್ತವಾಗಿ ಪ್ರತಿಷ್ಠಾಪಿಸಿದೆ.
ಶೃಂಗೇರಿ ಧರ್ಮ ಸಂಸ್ಥಾನದ ಸಂಬಂಧ:
ಕುಂದೇಶ್ವರ ದೇವಾಲಯಕ್ಕೂ ಶೃಂಗೇರಿ ಜಗದ್ಗುರು ಮಹಾಸಂಸ್ಥಾನಕ್ಕೂ ಇರುವ ಸಂಬಂಧ ಬಹಳ ಪ್ರಾಚೀನವಾದುದು. ಕುಂದಾಪುರದ ವಡೇರ ಹೋಬಳಿಯ ಶಾಸನವೊಂದು (ಕಾಲ : ಕ್ರಿ.ಶ. ೧೪೦೬) ಇದನ್ನು ಉಲ್ಲೇಖಿಸಿದೆ. ಒಮ್ಮೆ ವರ್ಷಂಪ್ರತಿ ಅರುವತ್ತು ಹಾನೆ ಅಕ್ಕಿ ದೊರೆಯುವ ಭೂಮಿಯನ್ನು ಹಂಗರು ಅಧಿವಾಸದ ಇಬ್ಬರು ಭಟ್ಟರೂ ಕೂಡಿ ಶೃಂಗೇರಿ ಜಗದ್ಗುರು ಶ್ರೀ ನರಸಿಂಹ ಭಾರತಿ ವೊಡೆಯರಿಗೆ ಮೂಲಕ್ರಯ ದಾನ ಮಾಡಿದರು. ಶೃಂಗೇರಿ ಮಠದ ಪಾರುಪತ್ತೆಗೆ ಬಂದ ವಿಸ್ತಾರವಾದ ಈ ಭೂಮಿ ಬ್ರಹ್ಮಾದಾಯದ ಭೂಮಿಯಾದ್ದರಿಂದ ಸ್ವಲ್ಪ ಸಮಯದ ನಂತರ ದಾನಿಗಳು ಮೂಲಕ್ರಯ ಕೊಟ್ಟು ಶೃಂಗೇರಿ ಮಠದಿಂದ ತಮ್ಮ ಸ್ವಾಧೀನ ಪಡೆದರು. ಅನಂತರ ಶೃಂಗೇರಿ ಧರ್ಮಸಂಸ್ಥಾನಕ್ಕೇನೆಯೇ ಈ ಭೂಮಿಯನ್ನು ಕುಂದೇಶ್ವರ ದೇವಾಲಯದ ವಿನಿಯೋಗಾರ್ಥ ದಾನ ಮಾಡಿದರು. ಈ ಭೂಮಿಯನ್ನು ಸರ್ವಮಾನ್ಯ (ತೆರಿಗೆ ರಹಿತ) ಎಂದು ಘೋಷಿಸಲಾಯಿತು. ಈ ದಾನಕ್ಕೆ ಸಾಕ್ಷಿ ಬೆಟ್ಟದ ದೇವರು ಅಂದರೆ ಶೃಂಗೇರಿಯ ಶ್ರೀ ಮಲ್ಲಿಕಾರ್ಜುನ ಬೆಟ್ಟದ ಶ್ರೀಮಲಹಾನಿಕರೇಶ್ವರ ದೇವರು – ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಶೃಂಗೇರಿ ಶ್ರೀಶಾರದಾಪೀಠದ ಶ್ರೀಶ್ರೀ ನರಸಿಂಹ ಭಾರತಿ ವೊಡೆಯರಿಗೆ ಸಂಬಂಧಿಸಿದ ಈ ಭೂಮಿ ಮುಂದೆ ವಡೇರ ಹೋಬಳಿ ಎಂದೇ ಪ್ರಸಿದ್ಧಿ ಪಡೆಯಿತು – ಎಂದು ಈ ಶಾಸನ ಸಾರುತ್ತದೆ.
ಲಕ್ಷ್ಮಣ ಶಾಸ್ತ್ರಿ ವಿರಚಿತ ಗುರುವಂಶ ಕಾವ್ಯ ಮತ್ತು ಕೆಳದಿ ಅರಸರಿಗೆ ಸಂಬಂಧಿಸಿದ ಕೆಳದಿ ನೃಪವಿಜಯ ಮೊದಲಾದ ಗ್ರಂಥಗಳಲ್ಲಿ ಶೃಂಗೇರಿ ಧರ್ಮಸಂಸ್ಥಾನದ ಜಗದ್ಗುರುಗಳಿಗೂ ಕುಂದಾಪುರಕ್ಕೂ ಇದ್ದ ನಿಕಟ ಸಂಪರ್ಕ ಉಲ್ಲೇಖಗೊಂಡಿದೆ. ಕೆಳದಿ ಅರಸರು ಕೊಲ್ಲೂರು, ಗೋಕರ್ಣ ಮೊದಲಾದ ಕಡೆಗೆ ಯಾತ್ರೆ ಹೋಗುವಾಗಲೆಲ್ಲ ಶೃಂಗೇರಿ ಜಗದ್ಗುರುಗಳವರನ್ನು ಗೌರವ ಪೂರ್ವಕವಾಗಿ ಪಲ್ಲಕ್ಕಿಯಲ್ಲಿ ಮುಂದಿರಿಸಿಕೊಂಡು ಈ ಮಾರ್ಗವಾಗಿ ಹೊಗುತ್ತಿದ್ದ ಉಲ್ಲೇಖವಿದೆ. ಹಾಲಾಡಿ, ಕೋಟೇಶ್ವರ, ಬಸ್ರೂರು, ಕುಂದಾಪುರ ಮುಂತಾದ ಕಡೆ ಅವರು ಮೊಕ್ಕಾಂ ಮಾಡುತ್ತಿದ್ದ ಮತ್ತು ಆ ಸಂದರ್ಭದಲ್ಲಿ ಕೋಟೇಶ್ವರದ ಕೋಟಿಲಿಂಗೇಶ್ವರ, ಕುಂದಾಪುರದ ಕುಂದೇಶ್ವರ, ಬಸ್ರೂರಿನ ಮಹಾಲಿಂಗೇಶ್ವರ ಮೊದಲಾದ ದೇವರನ್ನು ಪೂಜಿಸುತ್ತಿದ್ದ ನಿದರ್ಶನಗಳಿವೆ. ಇತ್ತೀಚಿನ ವರ್ಷಗಳಲ್ಲಂತೂ ಶೃಂಗೇರಿ ಧರ್ಮ ಸಂಸ್ಥಾನಕ್ಕೂ ಕುಂದೇಶ್ವರ ದೇವಾಲಯಕ್ಕೂ ಬಹಳ ನಿಕಟ ಸಂಬಂಧ. ಜಗದ್ಗುರುಗಳವರು ಆಗಾಗ ಈ ದೇವಾಲಯದಲ್ಲೇ ಮೊಕ್ಕಾಂ ಮಾಡುತ್ತಾರೆ; ಬ್ರಹ್ಮಕಲಶೋತ್ಸವ, ಅಷ್ಟಬಂಧ, ಪ್ರತಿಷ್ಠೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮ ದಿವ್ಯ ಉಪಸ್ಥಿತಿ ನೀಡಿ ಅನುಗ್ರಹಿಸುತ್ತಿದ್ದಾರೆ. ತಮ್ಮ ಸಂಸ್ಥಾನದ ವತಿಯಿಂದ ಹಾಲುಗಲ್ಲಿನ ಶಂಕರಾಚಾರ್ಯರ ಸುಂದರ ವಿಗ್ರಹವನ್ನು ನೀಡಿ, ಪ್ರತಿಷ್ಠಾಪಿಸಿ ಅನುಗ್ರಹಿಸಿದ್ದಾರೆ. ೨೦೦೮ರಲ್ಲಿ ೫ ದಿನಗಳ ಕಾಲ ವೇದ ಸಮ್ಮೇಳನ, ಪ್ರವಚನ, ಪೂಜೆ – ಉತ್ಸವಗಳೊಂದಿಗೆ ಶ್ರೀ ಶಂಕರ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಈ ದೇವಾಲಯದ ಜೀರ್ಣೋದ್ಧಾರ ಮೊದಲಾದ ಕಾರ್ಯಕ್ರಮಗಳು ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಹೊಸ ಸೃಷ್ಟಿಕಾರ್ಯವೇ ನಡೆದಿದ್ದು, ಇಡೀ ದೇವಸ್ಥಾನ ಮರುಹುಟ್ಟು ಪಡೆದಿದೆ. ಗರ್ಭಗುಡಿ, ಗಣಪತಿ – ಅಮ್ಮನವರು – ನಾಗದೇವರು – ಅಯ್ಯಪ್ಪ ಸ್ವಾಮಿಯ ಗುಡಿಗಳು, ಒಳಪೌಳಿ ಮತ್ತು ಚಂದ್ರಶಾಲೆಗಳು, ನೈವೇದ್ಯದ ಮನೆ, ನಂದಿಮಂಟಪ, ಬಲಿ ಶಿಲೆಗಳು, ಪ್ರದಕ್ಷಿಣ ಪಥ ಇವೆಲ್ಲ ಹೊಸ ರೂಪ ಪಡೆದಿವೆ. ಹೊರಭಾಗದಲ್ಲಿ ಅಷ್ಟ ದಿಕ್ಪಾಲಕ ವಿಗ್ರಹಗಳಿಂದ ಕಂಗೊಳಿಸುವ ಮತ್ತು ಕಿರುಗೋಪುರಗಳಿಂದ ಶೋಭಿಸುವ ಹೆಬ್ಬಾಗಿಲು, ಶಿಲೆಯ ಬಾಗಿಲುದಾರಂದ, ದ್ವಾರಪಾಲರ ವಿಗ್ರಹಗಳು – ಇವೆಲ್ಲ ಹೊಸ ಸೃಷ್ಟಿ.
ಹೊರಪೌಳಿಯನ್ನು ಸಂಪೂರ್ಣವಾಗಿ ಮಾರ್ಪಡಿಸಿ, ಅದರ ಮೇಲಂತಸ್ತಿನಲ್ಲಿ ಸಭೆ – ಸಮಾರಂಭ – ಮದುವೆ – ಮುಂಜಿ ಇತ್ಯಾದಿಗಳಿಗೆ ಅವಕಾಶ ಕಲ್ಪಿಸುವ ವಿಶಾಲವಾದ ಕುಂದೇಶ್ವರ ಕಲಾಮಂಟಪವನ್ನು ರಚಿಸಲಾಗಿದೆ. ಸುಮಾರು ಅರುವತ್ತು ಅಡಿ ಎತ್ತರದ, ಸುಂದರ ವಿಗ್ರಹಗಳಿಂದ ರಾರಾಜಿಸುವ ರಾಜಗೋಪುರ ಎಲ್ಲರ ಕಣ್ಮನ ಸೆಳೆಯುತ್ತದೆ. ಹೊರಗಿನ ಶಿಲಾಮಯ ಹೆಬ್ಬಾಗಿಲು, ಆದಿಶಂಕರರ ಅಮೃತ ಶಿಲೆಯ ವಿಗ್ರಹ, ಬಯಲು ರಂಗಮಂಟಪ, ದೇವಸ್ಥಾನಕ್ಕೆ ಭದ್ರತೆಯೊದಗಿಸುವ ಪಾಗಾರ, ಸಾಲುಮರಗಳಿಂದ ಶೋಭಿಸುವ ಟಾರು ರಸ್ತೆ, ನವೀಕೃತ ಅಶ್ವತ್ಥ ಕಟ್ಟೆ. ನಗರದ ಮುಖ್ಯರಸ್ತೆಗೆ ತಾಗಿ ಇರುವ ಪ್ರವೇಶ ಗೋಪುರ – ಹೀಗೆ ಇಡೀ ದೇವಸ್ಥಾನದ ಇಂಚು – ಇಂಚು ಜಾಗವೂ ಹೊಸತು – ಹೊಸತಾಗಿ ಶೋಭಿಸುತ್ತದೆ.
ಶ್ರೀ ಕುಂದೇಶ್ವರ ಪುಷ್ಕರಿಣಿ:
ಇದೀಗ ತೀರ ದುಸ್ಥಿತಿಯಲ್ಲಿದ್ದ ಕುಂದೇಶ್ವರ ಕೆರೆಯನ್ನು ವೈಜ್ಞಾನಿಕ ರೀತಿಯಲ್ಲಿ ನವೀಕರಿಸಲಾಗಿದೆ. ಕೆರೆಯ ಹೂಳೆತ್ತಿ, ಹಳೆ ನೀರನ್ನೆಲ್ಲ ತೆಗೆದು ಶುದ್ಧೀಕರಿಸಲಾಗಿದೆ. ಕೆರೆಯ ಪ್ರವೇಶ ದ್ವಾರದಲ್ಲಿ ಅಲಂಕೃತ ಗೋಪುರ, ಸದೃಢ ಗೇಟು ಮತ್ತು ಪಾಗಾರ ರಚಿಸಲಾಗಿದ್ದು, ಕೆರೆಗೆ ಪ್ರದಕ್ಷಿಣೆ ಬರಲು ಮತ್ತು ಕೆರೆಯಲ್ಲಿ ನಡೆಯುವ ತೆಪ್ಪೋತ್ಸವ ಮತ್ತಿತರ ಉತ್ಸವಗಳನ್ನು ವೀಕ್ಷಿಸಲು ಮೀಸಲಾಗಿರಿಸಿದ್ದ ಸುಮಾರು ಹತ್ತು – ಹನ್ನೆರಡು ಅಡಿಗಳಷ್ಟು ವಿಸ್ತೀರ್ಣದ ನಾಲ್ಕೂ ದಿಕ್ಕಿನ ಪ್ರದಕ್ಷಿಣ ಪಥವನ್ನು ಸುಸ್ಥಿತಿಗೆ ತಂದು ಅದಕ್ಕೆ ಪಾಗಾರ ನಿರ್ಮಿಸಲಾಗಿದೆ. ಹೃಷಿಕೇಶ ಮಾದರಿಯ ಧ್ಯಾನಸ್ಥ ಶಿವನ ಗಂಗಾವತರಣ ವಿಗ್ರಹ ಸ್ಥಾಪಿಸಿ, ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ.
ಸಾಂಸ್ಕೃತಿಕ ಕೇಂದ್ರ:
ಕುಂದೇಶ್ವರ ದೇವಸ್ಥಾನದಲ್ಲಿ ವರ್ಷದ ಹೆಚ್ಚಿನ ದಿನಗಳಲ್ಲಿ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಶ್ರಾವಣ ಮಾಸವಿಡೀ ಸೋಣೆ ಆರತಿ; ನಂತರ ನಾಲ್ಕು ದಿನಗಳ ಗಣೇಶೋತ್ಸವ; ಅನಂತವ್ರತ, ಲಕ್ಷದೀಪೋತ್ಸವ, ಶಂಕರಜಯಂತಿ, ಶಿವರಾತ್ರಿ – ಇವೆಲ್ಲ ಒಂದು ಕಡೆಯಾದರೆ, ಮತ್ತೊಂದು ಕಡೆ ಸಂಗೀತ, ನೃತ್ಯ, ಯಕ್ಷಗಾನ, ನಾಟಕ ಇವೆಲ್ಲ ನಡೆಯುತ್ತಲೇ ಇರುತ್ತವೆ. ಯೋಗ ಶಿಬಿರ, ಗ್ರಾಯತ್ರೀ ಧ್ಯಾನ ಸಪ್ತಾಹ, ಧಾರ್ಮಿಕ ಉಪನ್ಯಾಸಗಳು, ಸಂಗೀತ ಮತ್ತು ನೃತ್ಯ ತರಗತಿಗಳು, ಭಜನೆ – ಇವೆಲ್ಲ ಇಲ್ಲಿ ನಡೆಯುವ ಕೆಲವು ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು.
ಲಕ್ಷ ದೀಪೋತ್ಸವ ಮತ್ತು ರಥೋತ್ಸವ:
ಕಾರ್ತಿಕ ಬಹುಳ ಅಮಾವಾಸ್ಯೆಯಂದು ನಡೆಯುವ ಈ ದೀಪಾರಾಧನೆಯನ್ನು ಊರ ಜನ ಸಂಭ್ರಮದಿಂದ ಇದಿರು ನೋಡುತ್ತಿರುತ್ತಾರೆ. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವ. ಈ ಹಬ್ಬಕ್ಕೆ ಒಂದು ವಾರವಿರುವಾಗಲೇ ನಗರದ ಬೀದಿಗಳ ಬದಿಯಲ್ಲಿ ಸಂಚಾರೀ ಅಂಗಡಿಗಳವರು ಸಾಲುಗಟ್ಟಿ ಬೀಡು ಬಿಡುತ್ತಾರೆ. ದೇವಾಲಯದಲ್ಲಿ ದೀಪಾಲಂಕಾರ ಮತ್ತಿತರ ಸಿದ್ಧತೆಗಳು ಆರಂಭವಾಗುತ್ತವೆ.
ಅಂದು ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಗೀತವೋ, ನೃತ್ಯವೋ, ಯಕ್ಷಗಾನವೋ, ನಾಟಕವೋ – ಒಂದಲ್ಲ ಒಂದು ಸದಭಿರುಚಿಯ ಮನೋರಂಜನೆ. ಜತೆಗೆ ಭಕ್ತಾದಿಗಳಿಂದ ಶ್ರೀ ದೇವರ ನಾಮ ಸಂಕೀರ್ತನೆ. ನಂತರ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದು ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರಬರುತ್ತದೆ. ಈ ಸಂದರ್ಭದಲ್ಲಿ ರಥೋತ್ಸವದ ಮಾದರಿಯಲ್ಲೇ ಹಳಗ – ಜಾಗಟೆ ಮೊದಲಾದ ವಾದ್ಯೋಪಕರಣಗಳ ನಿನಾದ; ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಒಳಗೆ ಮೂರು ಸುತ್ತು ಮತ್ತು ಹೊರಾಂಗಣದಲ್ಲಿ ಮೂರು ಸುತ್ತು – ಹೀಗೆ ಬಲಿಗಲ್ಲುಗಳ ಬಳಿ ಬಲಿ ಸಮರ್ಪಣೆ. ಕೊನೆಯ ಸುತ್ತಿನಲ್ಲಿ ಶ್ರೀ ದೇವರು ಪಾಲಕಿಯನ್ನೇರಿ ಕ್ರಮಿಸುವುದು ಇಲ್ಲಿನ ವಿಶೇಷ.
ನಂತರ ಪುರಮೆರವಣಿಗೆಯ ಆರಂಭ. ಅದು ಮುಗಿಯುವುದು ಬೆಳಗಿನ ಜಾವ ಐದರ ನಂತರ. ವೈಭವದ ಈ ಪುರಮೆರವಣಿಗೆಯಲ್ಲಿ ಪ್ರತಿವರ್ಷವೂ ಬಗೆ-ಬಗೆಯ ಆಕರ್ಷಣೆಗಳು. ನಾಗಸ್ವರವಾದನ, ಸಾಂಪ್ರದಾಯಿಕ ವಾದ್ಯ, ಜಾನಪದ ನೃತ್ಯಗಳು, ತಟ್ಟಿರಾಯ, ಬೆಂಕಿ ಆಟ, ಲಾಟಿ ತಾಲೀಮು, ಡೊಳ್ಳು ವಾದನ, ಚಂಡೆವಾದನ, ಕೀಲು ಕುದುರೆ, ಗೊಂಬೆ ಕುಣಿತ, ವೀರಗಾಸೆ, ಪಟ್ಟದ ಕುಣಿತ, ನಾಸಿಕ್ ಡೋಲು – ಹೀಗೆ ವರ್ಷದಿಂದ ವರ್ಷಕ್ಕೆ ವೈವಿಧ್ಯ; ವಿಶೇಷ ಆಕರ್ಷಣೆ. ಶ್ರೀ ದೇವರ ಉತ್ಸವ ದೇವಾಲಯದಿಂದ ಹೊರಟು, ಹೊಸ ಬಸ್‌ಸ್ಟಾಂಡ್ ಬಳಿ ತಿರುಗಿ, ನಗರ ಸಭೆಯ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಂಗ್ಳೂರು ಗೆಳೆಯರ ಬಳಗದ ವರೆಗೂ ಹೋಗಿ, ನಂತರ ಬೆಳಗಿನ ಜಾವ ದೇವಾಲಯದ ರಥಬೀದಿಯ ಕಡೆಗೆ ಆಗಮಿಸುತ್ತದೆ. ಇಡೀ ನಗರದಲ್ಲಿ ಸಂಚರಿಸುವ ಇಷ್ಟೊಂದು ದೂರವ್ಯಾಪಿ ಉತ್ಸವ ಕುಂದಾಪುರದಲ್ಲಿ ಮತ್ತೊಂದಿಲ್ಲ.
ಕಟ್ಟೆಪೂಜೆ- ಭಕ್ತಾದಿಗಳು ಉತ್ಸವ ಕ್ರಮಿಸುವ ಮಾರ್ಗದಲ್ಲಿ ಅಲ್ಲಲ್ಲಿ ಆಕರ್ಷಕ ವೇದಿಕೆಗಳನ್ನು ನಿರ್ಮಿಸಿ, ಅಲ್ಲಿಗೆ ಶ್ರೀ ದೇವರನ್ನು ಆಹ್ವಾನಿಸಿ, ಪೂಜೆ ನೆರವೇರಿಸುತ್ತಾರೆ. ಭಕ್ತಿ ಶ್ರದ್ಧೆಯಿಂದ ಬೀಳ್ಕೊಡುತ್ತಾರೆ. ಸುಮಾರು ೨೦ ನಿಮಿಷ ಅವಧಿಯ ಈ ಕಟ್ಟೆಪೂಜೆಯಲ್ಲಿ ಭಕ್ತಾದಿಗಳಿಗೆಲ್ಲ ಪಂಚಕಜ್ಜಾಯ ಪ್ರಸಾದ ವಿತರಣೆ ನಡೆಯುತ್ತದೆ. ಹೀಗೆ ಸುಮಾರು ಹದಿನಾರು ಕೇಂದ್ರಗಳಲ್ಲಿ ಕುಂದೇಶ್ವರನಿಗೆ ಕಟ್ಟೆಪೂಜೆ ನಡೆಯುತ್ತದೆ.
ತೆಪ್ಪೋತ್ಸವ- ಕುಂದೇಶ್ವರ ಕೆರೆಯಲ್ಲಿ ಎರಡು ದೋಣಿಗಳನ್ನು ಸೇರಿಸಿ ಮಾಡಿದ ವಿಶೇಷ ತೆಪ್ಪದಲ್ಲಿ ಶ್ರೀ ದೇವರು ತಂತ್ರಿಗಳು, ಅರ್ಚಕರು ಮತ್ತು ದೀವಟಿಗೆಯವರೊಡನೆ ಮೂರು ಸುತ್ತು ಬರುವ ಆ ಸಂಭ್ರಮ ಭಕ್ತಾದಿಗಳ ಮನಸ್ಸಿಗೆ ಮುದ ಕೊಡುತ್ತದೆ. ಕೆರೆಯ ಸುತ್ತಲೂ ಹಚ್ಚುವ ಹಣತೆ ದೀಪದ ಬೆಳಕು ಕೆರೆಯಲ್ಲಿ ಪ್ರತಿಫಲನಗೊಂಡು ಒಂದು ಹೊಸ ಬೆಳಕಿನ ಲೋಕವನ್ನೇ ಸೃಷ್ಟಿಸುತ್ತದೆ.
ನಂತರ ದೇವಾಲಯದ ಅಶ್ವತ್ಥಕಟ್ಟೆಯಲ್ಲೊಂದು ಪೂಜೆ; ಅಷ್ಟಾವಧಾನ ಸೇವೆ. ದೇವಾಲಯದ ಹೊರ ಸುತ್ತಿನಲ್ಲಿ ಮತ್ತೊಂದು ಕಟ್ಟೆಪೂಜೆ. ಪ್ರದಕ್ಷಿಣ ಪಥದಲ್ಲಿರುವ ಈಡುಗಲ್ಲಿಗೆ ಸಂಪ್ರದಾಯದಂತೆ ತೆಂಗಿನ ಕಾಯಿಗಳನ್ನು ಕುಟ್ಟಿ ಒಡೆಯುವುದು; ಅದನ್ನು ಮಡಿವಾಳ ಕುಟುಂಬದವರು ಪ್ರಸಾದವೆಂದು ಶ್ರದ್ಧೆಯಿಂದ ಹೆಕ್ಕಿಕೊಳ್ಳುವುದು – ಇವೆಲ್ಲ ಈ ದೀಪೋತ್ಸವದ ಕಟ್ಟುಕಟ್ಟಳೆಗಳು; ವಿಧಿ – ವಿಧಾನಗಳು.
ಇದನ್ನೆಲ್ಲ ಮುಗಿಸಿ, ಹೊರಪ್ರಾಕಾರದಲ್ಲಿ ಒಂದು ಪ್ರದಕ್ಷಿಣೆ ಬಂದು ಶ್ರೀದೇವರ ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ. ನಂತರ ಮಂಗಳಾರತಿ; ಮಂತ್ರಾಕ್ಷತೆ; ತಂತ್ರಿಗಳಿಂದ ರಾಷ್ಟ್ರಾಶೀರ್ವಾದ; ಪ್ರಸಾದ ವಿತರಣೆ; ಉತ್ಸವದಲ್ಲಿ ಸೇವೆಸಲ್ಲಿಸಿದವರಿಗೆ ಶ್ರೀದೇವರ ಅನುಗ್ರಹರೂಪದ ಸಂಭಾವನೆ. ಇದು ಈ ಲಕ್ಷ ದೀಪೋತ್ಸವದ ವಿಧಿ – ವಿಧಾನ.
ಶಿವರಾತ್ರಿ ಆಚರಣೆ:
ಮಹಾಶಿವರಾತ್ರಿಯಂದು ಊರ – ಪರವೂರ ಶಿವಭಕ್ತರೆಲ್ಲ ಕುಂದೇಶ್ವರಕ್ಕೆ ಶ್ರದ್ಧೆಯಿಂದ ಬರುತ್ತಾರೆ. ಅಂದು ಬೆಳಗ್ಗೆ ಅರುಣೋದಯದ ಹೊತ್ತಿಗೇ ಭಕ್ತರು ಒಬ್ಬೊಬ್ಬರಾಗಿ ಬರಲು ಆರಂಭಿಸಿ, ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ – ಸಂಜೆ ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ಮಾಡಿಸುತ್ತಾರೆ. ದೇವರ ದೀಪಕ್ಕೆ ಎಣ್ಣೆ ತಂದವರು ಅದನ್ನು ಉರಿಯುತ್ತಿರುವ ದೀಪದ ಪಕ್ಕದಲ್ಲಿ ಇಟ್ಟ ಪಾತ್ರೆಯಲ್ಲಿ ಸುರಿಯುತ್ತಾರೆ. ಹೂವು, ಹಣ್ಣು, ಪತ್ರೆ, ಕರ್ಪೂರ, ಊದುಕಡ್ಡಿ – ಇತ್ಯಾದಿ ತಂದವರು ದೇವರಿಗೆ ಸಮರ್ಪಿಸುತ್ತಾರೆ. ಅಂದು ಪ್ರದೋಷ ಕಾಲದ ಹೊತ್ತಿಗಂತೂ ಜನಜಂಗುಳಿ. ಅದೇ ಹೊತ್ತಿಗೆ ದೇವಾಲಯದ ಬಯಲು ರಂಗಮಂಟಪದಲ್ಲಿ ಶಿವನ ಕುರಿತಾದ ತಾಂಡವ ನೃತ್ಯ, ಯಕ್ಷಗಾನ, ಸಮೂಹ ಗಾಯನ, ಗೊಂಬೆಯಾಟ, ತಾಳಮದ್ದಳೆ – ಇತ್ಯಾದಿ ಒಂದಲ್ಲ ಒಂದು ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುತ್ತದೆ. ಭಕ್ತಾದಿಗಳಿಂದ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಅರ್ಘ್ಯಪ್ರದಾನ, ಗರ್ಭಗೃಹದ ಸುತ್ತ – ಮುತ್ತ ಮತ್ತು ದೇವಾಲಯದ ಒಳಾಂಗಣದಲ್ಲಿ ಹಣತೆ ದೀಪಹಚ್ಚುವ ಸೇವೆ ನಡೆಯುತ್ತಿರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ಕೂಡಲೆ ರಾತ್ರಿ ಕಾಲದಲ್ಲಿ ಕುಂದೇಶ್ವರನ ಸನ್ನಿಧಿಯಲ್ಲಿ ನಡೆಯುವ ರಂಗಪೂಜೆ ಮತ್ತು ಮಹಾಮಂಗಳಾರತಿಯಲ್ಲಿ ಭಕ್ತಾದಿಗಳೆಲ್ಲ ಭಾಗವಹಿಸಿ, ಮಂತ್ರ ಪುಷ್ಪ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಅರ್ಚಕರಿಂದ ತೀರ್ಥ-ಪ್ರಸಾದ ಪಡೆದು ಮನೆಯ ಕಡೆಗೆ ತೆರಳುತ್ತಾರೆ.
ಹೀಗೆ ಮಹಾಶಿವರಾತ್ರಿ ಕುಂದೇಶ್ವರದ ಪ್ರಮುಖ ಉತ್ಸವಗಳಲ್ಲಿ ಒಂದಾಗಿ ಸುತ್ತ -ಮುತ್ತಲಿನ ಎಲ್ಲ ಭಕ್ತರನ್ನು ಆಕರ್ಷಿಸುತ್ತದೆ. ಅಂದು ನಗರದ ಮುಖ್ಯ ಬೀದಿಯಲ್ಲಿ ತಾತ್ಕಾಲಿಕವಾಗಿ ಸಣ್ಣಪುಣ್ಣ ಅಂಗಡಿಗಳು ಡೇರೆ ಹಾಕಿ, ಬಗೆ – ಬಗೆಯ ಆಕರ್ಷಕ ವಸ್ತುಗಳ ವ್ಯಾಪಾರದಿಂದ ಎಲ್ಲರ ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಅಭಿಷೇಕ ಪ್ರಿಯನೂ, ಆಶುತೋಷನೂ ಆದ ಶ್ರೀ ಕುಂದೇಶ್ವರನ ಅನುಗ್ರಹ ಪಡೆಯಲು ಮಹಾಶಿವರಾತ್ರಿ ಒಂದು ವಿಶೇಷ ಸಂದರ್ಭ.
ಸೋಣೆ ಆರತಿ:
ಸಿಂಹ ಸಂಕ್ರಮಣದಿಂದ ಕನ್ಯಾ ಸಂಕ್ರಮಣದವರೆಗಿನ ಒಂದು ತಿಂಗಳ ಅವಧಿಯನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸೋಣೆ ತಿಂಗಳು ಎಂದು ಕರೆಯುತ್ತಾರೆ. ಈ ಸೋಣೆ ತಿಂಗಳಿನ ಉದ್ದಕ್ಕೂ ಊರಿನ ದೇವಾಲಯಗಳಲ್ಲಿ ಪುರಾಣ ಪ್ರವಚನ, ಹರಿಕಥೆ, ಶಾಸ್ತ್ರಾರ್ಥ ಚಿಂತನೆ ಇತ್ಯಾದಿಗಳ ಜೊತೆಗೆ ಸೋಣೆ ಆರತಿ ಮಾಡಿ ಭಕ್ತ ಜನರು ಸಂಭ್ರಮಿಸುತ್ತಾರೆ.
ಕುಂದೇಶ್ವರ ದೇವಸ್ಥಾನದಲ್ಲಿ ಬಹಳ ಹಿಂದಿನಿಂದಲೂ ಸೇವಾರೂಪದಲ್ಲಿ ಸೋಣೆಯಾರತಿ ನಡೆಯುತ್ತ ಬರುತ್ತಿದೆ. ಭಕ್ತರು ಒಂದು ತಿಂಗಳು ಮೊದಲೇ ತಮ್ಮ ಹೆಸರನ್ನು ದೇವಾಲಯದ ಕಛೇರಿಯಲ್ಲಿ ನೊಂದಾಯಿಸಿಕೊಂಡು, ತಮ್ಮ ಸೋಣೆ ಆರತಿ ಸೇವೆಯ ದಿನ ಹಣ್ಣು ಕಾಯಿ, ಹೂ-ಪತ್ರೆ, ದೀಪದ ಎಣ್ಣೆ – ಮೊದಲಾದ ಪೂಜಾಸಾಮಗ್ರಿಗಳೊಡನೆ ಬರುತ್ತಾರೆ. ಅರ್ಚಕರು ಅವರಿಂದ ಸಂಕಲ್ಪಮಾಡಿಸಿ, ದೇವರಿಗೆ ಆರತಿ ಬೆಳಗಿ, ಆರಾಧಿಸುತ್ತಾರೆ. ದೇವಾಲಯದ ಆವರಣದಲ್ಲಿ ಪಂಚವಾದ್ಯ, ಜಾಗಟೆ, ನಗಾರಿ- ಮೊದಲಾದ ವಿವಿಧ ವಾದ್ಯಗಳ ಘೋಷ ಮೊಳಗುತ್ತದೆ. ನಂತರ ಸೇವಾಕರ್ತರಿಂದ ಪ್ರಾರ್ಥನೆ, ಪೂಜಾ ಸಮರ್ಪಣೆ, ಪ್ರಸಾದ ಸ್ವೀಕಾರ ಇತ್ಯಾದಿ ನಡೆಯುತ್ತದೆ. ಬಂದ ಭಕ್ತರಿಗೆಲ್ಲ ಪಂಚಕಜ್ಜಾಯ ಪ್ರಸಾದ ವಿತರಣೆಯಾಗುತ್ತದೆ. ವೈಯಕ್ತಿಕವಾಗಿ ಅಥವಾ ಕೌಟುಂಬಿಕವಾಗಿ ಮಾತ್ರವಲ್ಲದೆ, ಕೆಲವು ಸಂಸ್ಥೆಗಳವರೂ ಸಹ ಶ್ರದ್ಧೆಯಿಂದ ಸೋಣೆ ಆರತಿ ಸೇವೆ ಮಾಡಿಸುತ್ತಾರೆ.
ಹೀಗೆ ಸೋಣೆ ಆರತಿ ಕುಂದೇಶ್ಚರದಲ್ಲಿ ನಡೆಯುವ ಒಂದು ಪ್ರಮುಖ ವಿಶೇಷ ಆರಾಧನೆ.
ಭಕ್ತಾದಿಗಳಿಗೆ ಲಭ್ಯವಿರುವ ಸೌಕರ್ಯಗಳು:
ಶಾಶ್ವತ ನಿತ್ಯಪೂಜೆ:
ಭಕ್ತಾದಿಗಳು ತಮ್ಮ ಜನ್ಮದಿನ, ವಿವಾಹದ ದಿನ ಅಥವಾ ತಮ್ಮ ಹಿರಿಯರ ಪುಣ್ಯತಿಥಿಯಂದು ಶ್ರೀ ದೇವರಿಗೆ ಅವರ ಹೆಸರಿನಲ್ಲಿ ಪ್ರತಿವರ್ಷ ಶಾಶ್ವತವಾಗಿ ಪೂಜೆ ಸಲ್ಲಿಸಬಹುದು. ತಮ್ಮ ಹೆಸರು, ವಿಳಾಸ, ಗೋತ್ರ, ರಾಶಿ, ನಕ್ಷತ್ರ ಮತ್ತು ಪ್ರತಿವರ್ಷ ಪೂಜೆ ಸಲ್ಲಿಸಬೇಕಾದ ದಿನ – ಇತ್ಯಾದಿ ವಿವರಗಳೊಂದಿಗೆ ಶಾಶ್ವತ ನಿತ್ಯ ಪೂಜಾನಿಧಿಗೆ ರೂ. ೫೦೧/= ಪಾಪ್ತಿಮಾಡಿ, ರಶೀದಿ ಪಡೆಯಬಹುದು. ಸೇವೆ ನಡೆಸಿದ ಬಳಿಕ ಪ್ರಸಾದ ಕಳುಹಿಕೊಡಲಾಗುವುದು.
ಜೀಣೋದ್ಧಾರ ನಿಧಿ:
ದೇವಸ್ಥಾನದಲ್ಲಿ ಈಗಾಗಲೇ ಸುಮಾರು ಒಂದು ಕೋಟಿಯಷ್ಟು ವೆಚ್ಚದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರತಿವರ್ಷ ಒಂದಲ್ಲ ಒಂದು ಜೀರ್ಣೋದ್ಧಾರ ಕಾರ್ಯ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಸುಮಾರು ಹತ್ತು ಲಕ್ಷ ವೆಚ್ಚದಲ್ಲಿ ಕುಂದೇಶ್ವರ ಕೆರೆಯ ಸಮಗ್ರ ನವೀಕರಣ ಕಾರ್ಯ ನಡೆದಿದೆ. ಭಕ್ತಾದಿಗಳು ಜೀರ್ಣೋದ್ಧಾರ ನಿಧಿಗೆ ದೇವಾಲಯದ ಕಚೇರಿಯಲ್ಲಿ ಯಥಾಶಕ್ತಿ ದೇಣಿಗೆ ಸಲ್ಲಿಸಿ ರಶೀದಿ ಪಡೆಯಬಹುದು; ದೇವಾಲಯದ ಕಡೆ ಬಂದಾಗ ಜೀರ್ಣೋದ್ಧಾರಕ್ಕಾಗಿಯೇ ಪ್ರತ್ಯೇಕ ಇರಿಸಲಾದ ಕಾಣಿಕೆ ಡಬ್ಬದಲ್ಲಿ ಕಾಣಿಕೆ ಹಾಕಬಹುದು.
ಆದಾಯ ತೆರಿಗೆ ವಿನಾಯ್ತಿ:
ಶ್ರೀ ಕುಂದೇಶ್ವರ ದೇವಾಲಯಕ್ಕೆ ನೀಡುವ ಎಲ್ಲ ದೇಣಿಗೆಗಳಿಗೆ ಕೇಂದ್ರ ಸರಕಾರ ೮೦(ಜಿ) ನಂ. ೫೬೬೩, ಎಫ್. ೧೭೬/೭೯-೮೨-೧೧(೦೧) ತಾ. ೨೫-೪-೧೯೮೪ರ ಆದೇಶದ ಪ್ರಕಾರ ತೆರಿಗೆ ವಿನಾಯ್ತಿ ನೀಡಿದೆ. ತೆರಿಗೆ ಕಟ್ಟುವವರು ದೇವರಿಗೆ ದೇಣಿಗೆ ನೀಡಿ ಉಪಕೃತರಾಗಬಹುದು. ಇದರಿಂದ ಏಕಕಾಲದಲ್ಲಿ ಸ್ವಕಾರ್ಯ – ಸ್ವಾಮಿಕಾರ್ಯ ಎರಡೂ ಆಗುತ್ತದೆ.
ಕುಂದೇಶ್ವರ ಸಭಾಗೃಹ:
ಭಕ್ತಾದಿಗಳಿಗೆ ಸಭಾಗೃಹ ಸೌಕರ್ಯವನ್ನು ಒದಗಿಸಲಾಗುತ್ತಿದೆ. ಮದುವೆಗಳಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಒದಗಿಸುವುದಲ್ಲದೆ, ಅಪೇಕ್ಷೆ ಪಟ್ಟಲ್ಲಿ ಸಂತರ್ಪಣೆಯ ಏರ್ಪಾಡನ್ನೂ ಮಾಡಲಾಗುವುದು. ಆಸಕ್ತರು ದೇವಾಲಯದ ಕಛೇರಿಯಲ್ಲಿ ವಿಚಾರಿಸಿ, ಮುಂಚಿತವಾಗಿ ಸಭಾಗೃಹವನ್ನು ಕಾದಿರಿಸಬಹುದು.
ಶ್ರಾದ್ಧಗೃಹ:
ಶ್ರದ್ಧಾಳುಗಳಿಗೆ ಪಿತೃಕಾರ್ಯಗಳನ್ನು ನಡೆಸಲು ಅನುಕೂಲ ಕಲ್ಪಿಸುವ ಶ್ರಾದ್ಧ ಗೃಹ ಒಂದನ್ನು ನಿರ್ಮಿಸಲಾಗಿದೆ. ಶ್ರಾದ್ಧ, ವೈಕುಂಠ ಸಮಾರಾಧನೆ ಇತ್ಯಾದಿಗಳಿಗೆ ಬೇಕಾಗುವ ಸಕಲ ಸೌಕರ್ಯಗಳು ಇಲ್ಲಿ ಸದಾಕಾಲ ಲಭ್ಯವಿರುತ್ತವೆ. ಆಸಕ್ತರು ಮುಂಚಿತವಾಗಿ ತಿಳಿಸಬೇಕಾಗುತ್ತದೆ.
ಜೀವನಮೌಲ್ಯ ಶಿಕ್ಷಣ ಶಿಬಿರ:
ಭಂಡಾರ್‌ಕಾರ್ಸ್ ಕಾಲೇಜಿನ ಸಹಭಾಗಿತ್ವದೊಂದಿಗೆ ಪ್ರತಿವರ್ಷ ಎರಡು ದಿನಗಳ ಕಾಲ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಜೀವನಮೌಲ್ಯ ಶಿಕ್ಷಣ ಶಿಬಿರವನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ತಜ್ಞರಿಂದ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ – ಇತ್ಯಾದಿ ಭಾರತೀಯ ಸಂಸ್ಕೃತಿ – ಪರಂಪರೆಗಳಿಗೆ ಸಂಬಂಧಿಸಿದ ಉಪನ್ಯಾಸ, ಪ್ರವಚನ, ಚರ್ಚೆ, ಪ್ರಶ್ನೋತ್ತರ, ಸಾಮೂಹಿಕ ಪ್ರಾರ್ಥನೆ ಇತ್ಯಾದಿಗಳು ಈ ಶಿಬಿರದ ಚಟುವಟಿಕೆಗಳು, ಆಸಕ್ತ ಭಕ್ತಾದಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದು.
ಧ್ಯಾನ ಮಂದಿರ:
ದೇವಾಲಯದ ಶ್ರೀ ಭಾರತೀ ತೀರ್ಥ ಕೃಪಾ ಕಟ್ಟಡ ಸಮುಚ್ಚಯದ ಒಂದು ಭಾಗವಾದ ಧ್ಯಾನ ಮಂದಿರ ಯೋಗ, ಧ್ಯಾನ, ಪ್ರಾಣಾಯಾಮ ಮೊದಲಾದ ಆಧ್ಯಾತ್ಮ ಸಾಧನೆಗೆ ಮೀಸಲಾದ ಒಂದು ಭವನ. ಇಲ್ಲಿ ಆಗಾಗ ಶ್ರೀ ರವಿಶಂಕರ ಗುರೂಜಿಯವರು ಪ್ರವರ್ತಿಸಿರುವ ಸುದರ್ಶನ ಕ್ರಿಯಾಯೋಗ ಶಿಬಿರ, ಪ್ರಾಣಾಯಾಮ ಮತ್ತು ಧ್ಯಾನ ತರಬೇತಿ ಮೊದಲಾದ ಅಧ್ಯಾತ್ಮಪರ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.
ಗುರು ನಿವಾಸ:
ಶ್ರೀ ಕುಂದೇಶ್ವರ ದೇವಾಲಯ ಅಥವಾ ಕುಂದಾಪುರಕ್ಕೆ ಬರುವ ಸನಾತನ ಧರ್ಮಾವಲಂಬಿಗಳಾದ ಸಾಧು-ಸಂತರು, ಗುರುಗಳು, ಮಠಾಧೀಶರು ಮತ್ತು ಪೀಠಾಧಿಪತಿಗಳ ನಿವಾಸಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನೊಳಗೊಂಡ ಗುರುನಿವಾಸ ತೀರಾ ವಿಶಿಷ್ಟವಾದ ಕಟ್ಟಡ. ಪುಟ್ಟದೊಂದು ಅಡುಗೆಮನೆ, ಅನುಷ್ಠಾನ ಮಂದಿರ, ವಿಶ್ರಾಂತಿ ಗೃಹ, ಭಕ್ತಾದಿಗಳ ಸಂದರ್ಶನಕ್ಕೆ ಮತ್ತು ತಮ್ಮ ಆರಾಧ್ಯ ದೇವರ ಪೂಜೆಗೆ ಬೇಕಾದ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ. ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳವರು ಇಲ್ಲಿ ಅನೇಕ ಬಾರಿ ಮೊಕ್ಕಾಂ ಮಾಡಿ, ತಮ್ಮ ಆರಾಧ್ಯ ದೇವರಾದ ಶ್ರೀ ಶಾರದಾ ಚಂದ್ರಮೌಳೀಶ್ವರರ ಪೂಜೆ ನೆರವೇರಿಸಿದ್ದಾರೆ.
ಬಯಲು ರಂಗ ಮಂಟಪ:
ದೇವಾಲಯದಲ್ಲಿ ನಡೆಯುವ ಯಕ್ಷಗಾನ, ನಾಟಕ, ಹರಿಕತೆ, ಧಾರ್ಮಿಕ ಸಭೆ – ಇತ್ಯಾದಿಗಳಿಗೆ ಅನುಕೂಲ ಕಲ್ಪಿಸುವ ಬಯಲು ರಂಗಮಂಟಪವೊಂದನ್ನು ನಿರ್ಮಿಸಲಾಗಿದೆ. ದೀಪೋತ್ಸವ, ಶಿವರಾತ್ರಿ ಮೊದಲಾದ ಸಂದರ್ಭದಲ್ಲಿ ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಸೇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಪ್ರತಿನಿತ್ಯ ಬೆಳಗ್ಗೆ ೫.೩೦ ರಿಂದ ಸಾಮೂಹಿಕ ಯೋಗ ತರಬೇತಿ ನಡೆಯುತ್ತಿದೆ.
ಇತರ ಸೌಕರ್ಯಗಳು:
ಜಿಲ್ಲೆಯ ಇತರ ದೇವಾಲಯಗಳ ಯಕ್ಷಗಾನ ದಶಾವತಾರ ಮೇಳಗಳು ಕುಂದಾಪುರ ನಗರಕ್ಕೆ ಬಯಲಾಟಕ್ಕೆ ಬಂದಾಗ, ಅವರು ಅಪೇಕ್ಷೆಪಟ್ಟಲ್ಲಿ ವಸತಿ ಸೌಕರ್ಯ ಒದಗಿಸಲಾಗುವುದು. ದೇವಾಲಯದ ಆಶಯಗಳಿಗೆ ಪೂರಕವಾದ ಹರಿಕತೆ, ಧಾರ್ಮಿಕಪ್ರವಚನ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯೋಗಶಿಬಿರ, ಧ್ಯಾನಕೂಟ, ಸಾಹಿತ್ಯ ಚಟುವಟಿಕೆಗಳು – ಇತ್ಯಾದಿಗಳಿಗೆ ಇತರ ಹಿಂದೂ ಸಂಘ – ಸಂಸ್ಥೆಗಳವರು ಸ್ಥಳಾವಕಾಶ ಒದಗಿಸುವುದು.
ಸಂಪರ್ಕ:
ಆಡಳಿತ ಧರ್ಮದರ್ಶಿ
ಶ್ರೀ ಕುಂದೇಶ್ವರ ದೇವಸ್ಥಾನ
ಕುಂದಪುರ – 576 201
ಉಡುಪಿ ಜಿಲ್ಲೆ, ಕರ್ನಾಟಕ
ಫೋನ್: +91(0)-8254-232256
ಮಾಹಿತಿ ಮತ್ತು ಗ್ರಂಥ ಋಣ:
*ಡಾ| ಎಚ್. ವಿ. ನರಸಿಂಹ ಮೂರ್ತಿ, ಧರ್ಮದರ್ಶಿಗಳು.
*ಕುಂದ ದರ್ಶನ- ಕುಂದಾಪುರ ಪರಿಸರ ಅಧ್ಯಯನ ಗ್ರಂಥ.
*ಕುಂದನಾಡು,
*ಕುಂದಾಪುರ ತಾಲೂಕು ದರ್ಶನ.
*ತುಳುನಾಡಿನ ಇತಿಹಾಸ.
*ದೇವಾಲಯ ಭೇಟಿ.
*ಪ್ರಕಟಣೆಗಳು