ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟೂರಿನ ಋಣ ದೊಡ್ಡದೆನಿಸಿಕೊಳ್ಳುತ್ತದೆ. ಬದುಕು, ಉದ್ಯೋಗಕ್ಕಾಗಿ ಎಲ್ಲಿಗೇ ತೆರಳಿದರೂ ತನ್ನೂರಿನ ಮಣ್ಣಿನ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು. ಉಪ್ಪುಂದ ಚಂದ್ರಶೇಖರ ಹೊಳ್ಳರಲ್ಲಿ ಈ ಗುಣವಿದ್ದುದರಿಂದಲೇ ಇಂದು ರಾಜ್ಯದ ಭೂಪಟದಲ್ಲಿ ಉಪ್ಪಂದ ಎಂಬ ಊರನ್ನು ಗುರುತಿಸುವಂತಾಗಿದೆ ಎಂದು ಸಿರಿ ಮೊಗೇರಿ ಸಂಸ್ಥಾಪಕ, ಬೆಂಗಳೂರು ಮಾಧ್ಯಮ ಭಾರತಿ ನಿರ್ದೇಶಕ ಜಯರಾಮ ಅಡಿಗ ಹೇಳಿದರು.
ಉಪ್ಪುಂದದ ಕುಂದ ಅಧ್ಯಯನ ಕೇಂದ್ರವು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಪೂರ್ವದಲ್ಲಿ ‘ಸಹೃದಯ ಸಂವಹನ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹುಟ್ಟೂರಿನ ಮೇಲಿನ ಅಭಿಮಾನದಿಂದ ತಮ್ಮ ವೃತ್ತಿಯನ್ನು ತ್ಯಜಿಸಿ ಉಪ್ಪಂದಕ್ಕೆ ಬಂದ ನೆಲೆಸಿದ್ದ ಹೊಳ್ಳರು, ಸಾಹಿತ್ಯ ರಚನೆ, ಸಂಘಟನೆ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಈ ಪರಿಸರವನ್ನು ಸಾಂಸ್ಕೃತಿಕ, ಸಾಹಿತ್ತಿಕ ಕೇಂದ್ರವಾಗಿ ಬೆಳೆಸಿದವರು. ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೊಳ್ಳರ ಸಾಧನೆ ಅನನ್ಯವಾದ್ದು ಎಂದು ಹೇಳಿದರು.
ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗ್ರಂಥ ಸಂಪಾದಕ ಡಾ. ಕನರಾಡಿ ವಾದಿರಾಜ ಭಟ್, ಭಗವದ್ಗೀತಾ ಜಯಂತಿ ಸಮಿತಿ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್, ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಗಣಪತಿ ಹೋಬಳಿದಾರ್, ಬಾಲಕೃಷ್ಣ ವೈದ್ಯ, ಉಸಿರು ಕೋಟದ ನರೇಂದ್ರ ಕುಮಾರ್ ಕೋಟ, ಯು. ಚಂದ್ರಶೇಖರ ಹೊಳ್ಳ ಹಾಗೂ ವರಮಹಾಲಕ್ಷ್ಮಿ ಹೊಳ್ಳ ದಂಪತಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ, ಯು. ಸಂದೇಶ ಭಟ್ ವಂದಿಸಿದರು. ಗಣೇಶಪ್ರಸನ್ನ ಮಯ್ಯ ನಿರೂಪಿಸಿದರು.