Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೊಂಡಿ ಕಳಚಿತು…
    ಅಂಕಣ ಬರಹ

    ಕೊಂಡಿ ಕಳಚಿತು…

    Updated:21/09/2025No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕೈ ನಡುಗುತ್ತಿದೆ!.. ಪದಗಳು ಜಾರುತ್ತಿವೆ!.. ಭಾವ ಯಾವುದರದೋ ಬೆನ್ನೇರಿ ಸಾಗಿದಂತಿದೆ!.. ಮಾತುಗಳು ಮೌನತೆ ಪಡೆದಿವೆ!.. ಕಾರಣವಿಷ್ಟೇ ಮನೆಯ ಹಿರಿಯ ಕೊಂಡಿಯೊಂದು ಕಳಚಿದೆ!!. ಮನೆಯವರಾದ ಮಾಮನ ಉಸಿರು ನಿಂತಿದೆ. ಕಳೆದ 85 ವರ್ಷಗಳಿಂದಲೂ ಸದಾ ಒಂದಿಲ್ಲೊಂದು ವಿಚಾರದಲ್ಲಿ ಚಲನೆ ಕಂಡಿದ್ದ ಮನೆತನದ ಹಿರಿಯ ಕೊಂಡಿ ಇಹಲೋಕ ತ್ಯಜಿಸಿ ದೂರ ಸಾಗಿದೆ. ಅಂದು ಮಧ್ಯಾಹ್ನ ಮನೆಯಿಂದ ಫೋನ್ ಬಂದು ವಿಷಯ ತಿಳಿದಾಗ, ಸರಿಸುಮಾರು ಜೀವಮಾನದ 25ವರ್ಷಗಳ ಇಂದಿನ ಬದುಕಿನವರೆಗೆ ಸಂಬಂಧಿಗಳ ಪೈಕಿ ತೀರಾ ಹತ್ತಿರವಾದವರನ್ನು ಮೊದಲ ಬಾರಿಗೆ ಶಾಶ್ವತ ಉಪಸ್ಥಿತಿಯಿಂದ ಕಳೆದುಕೊಂಡ ಶಾಕ್ ನನಗೆ!..

    Click Here

    Call us

    Click Here

    ಹಿಂದಿನ ಬದುಕಲ್ಲಿ ಸ್ನೇಹಿತನ ಮನೆಯಲ್ಲೋ, ಪಕ್ಕದ ಮನೆಯಲ್ಲೋ ಅಥವಾ ಹಳ್ಳಿಯ ಇನ್ಯಾರದ್ದೋ ಮನೆಗಳಲ್ಲಿ ಈ ಥರದ ಅಗಲಿಕೆಯನ್ನು ಕಂಡಾಗ ಮನಸ್ಸಿಗೆ ನೋವಾಗುತ್ತಿದ್ದರೂ, ತದ ನಂತರ ಅದರ ಕಾಡುವಿಕೆ ವಿರಳವಾಗಿರುತಿತ್ತು. ಆದರೆ ನನ್ನವರೇ ಆದ ಮಾಮನ ಸಾವು ಅವೆಲ್ಲದರ ಔಚಿತ್ಯದಂತಾಗಲಿಲ್ಲ. ಮಾಮ ನನ್ನ ಬೆಳವಣಿಗೆಯ ಜೊತೆಯಲ್ಲಿ ಒಬ್ಬರಾಗಿ ಇದ್ದ ವ್ಯಕ್ತಿಯಾದ್ದರಿಂದ, ಮನೆಯಿಂದ ಮಸಣತಲುಪಿ, ವಿಧಿವಿಧಾನ ಜರುಗಿ ಇಷ್ಟು ದಿನವಾದರೂ ಕಾಡುತ್ತಿದ್ದಾರೆ. ಭಾವನಾತೀತ ನೆನಪುಗಳು ಪಕ್ಕದಲ್ಲೇ ಗಿರಕಿ ಹೊಡೆದು ಕಳೆದ ದಿನಗಳನ್ನು ನೆನಪಿಸುತ್ತಿದೆ.

    ನನ್ನಮ್ಮನಿಗೆ ಅವರು ಅಣ್ಣ, ನನಗೆ ಮಾವ. ನಾ ಕರೆಯುತ್ತಿದ್ದುಮಾಮ. ವಯಸ್ಸು 80 ಕ್ಕಿಂತ ಜಾಸ್ತಿ, ಉದ್ದನೆಯ ದೇಹ, ಇಳಿವಯಸ್ಸಲ್ಲೂ ಕಟ್ಟು ಮಸ್ತಾದ ಶರೀರ, ಅಲ್ಪಸ್ವಲ್ಪ ಗಡ್ಡ, ಬಿಳಿಕೂದಲಿನ ತಲೆ, ವಯಸ್ಸಿನನುಸಾರ ಮುಖದ ನೆರಿಗೆ, ಬಾಯಲ್ಲಿ ಒಂದೆರಡು ಹಲ್ಲು, ದಪ್ಪ ಕೈ, ಸದಾ ನಗುಮೊಗದಿಂದಿರುವ ಮನೆಯ ಹಿರಿಯವ, ನಮ್ಮ ಜೊತೆ ಇದ್ದ ಅಷ್ಟು ದಿನಗಳು ನಮಗಾಗೇ ಬದುಕಿದ ತ್ಯಾಗಮಯಿ…

    ನನಗೀಗಲೂ ನೆನಪಿದೆ. ಅವರು ನನ್ನ ಮನೆಗೆ ಬಂದು ನೆಲೆಯಾಗಿದ್ದು ನಾನು ೩ನೇ ತರಗತಿ ಓದುತ್ತಿದ್ದಾಗ. ಮದುವೆಯಾಗಿ ಮಕ್ಕಳಾದ ಒಂದಿಷ್ಟು ವರ್ಷದ ಬಳಿಕ ಹೆಂಡತಿ ಮಕ್ಕಳಿಂದ ಯಾವುದೋ ಕಾರಣಕ್ಕೆ ಬೇರಾಗಿ ಅನಾಥರಾದ ಮಾಮ ಮತ್ತೆ ಮನೆಗೆ ಹಿಂತಿರುಗದೇ ಸ್ವಾಭಿಮಾನಿಯಾಗಿ ಸಾಯೋವರೆಗೂ ಯಾರಿಂದಲೂ ಏನನ್ನು ಕೇಳದೇ ಬದುಕಿದ ನಿಸ್ವಾರ್ಥಿ. ಅಂದು ಮನೆ ಬಿಟ್ಟವರು ನೇರ ಬಂದಿದ್ದೇ ತಂಗಿಯಾದ ನನ್ನಮ್ಮನ ಮನೆಗೆ. ಅದಾಗಲೇ ಅಪ್ಪ ಅಮ್ಮ ತೀರಿಕೊಂಡಿದ್ದರಿಂದ ಅಣ್ಣನ ಪೂರ್ಣ ಜವಾಬ್ಧಾರಿಯೂ ಅಮ್ಮನ ಹೆಗಲ ಮೇಲೆಯೇ ಬಿದ್ದಿತ್ತು. ಸಾಯೋ ಕೊನೆಕ್ಷಣದವರೆಗೂ ಅಮ್ಮ ಅಣ್ಣನನ್ನು ಸಾಕಿದ್ದು ತನ್ನ ಮಗನಂತೆಯೇ!..

    ಅವರಿಗೆ ಅವರೇ ಸಾಟಿ!, ತೀರಾ ಚಿಕ್ಕಂದಿನಿಂದಲೂ ಗದ್ದೆ, ತೋಟ, ಮನೆ ಹೀಗೆ ಎಲ್ಲದರಲ್ಲೂ ಮುಂದಿದ್ದ ಮಾಮ ಏನೇ ಕೆಲಸಕ್ಕೆ ಕೈ ಹಾಕಿದರೂ, ಅದು ಶಿಸ್ತು ಮತ್ತು ಪರಿಪೂರ್ಣ ಎನ್ನುವ ಮಾತು ಇಡೀ ಊರಿನವರ ಬಾಯಲ್ಲೇ ಕೇಳಿಬರುತ್ತಿತ್ತು. ಇದಕ್ಕಾಗಿ ಅವರೆಂದು ಬೀಗಿದವರಲ್ಲ! ’ಒಂದು ಕೆಲಸವನ್ನು ಮಾಡಿದರೆ ಅಂದವಾಗಿ, ಪೂರ್ಣವಾಗಿ ಮಾಡಬೇಕು’ ಎಂದು ಆಗಾಗ ಬೇರೆಯವರಿಗೆ ಹೇಳುತ್ತಿದ್ದ ಮಾತುಗಳು ನನ್ನ ಕಿವಿಗೂ ಬಿದ್ದಿದ್ದು ನೆನಪಿದೆ. ಆಗೆಲ್ಲಾ ಬಸ್ಸುಗಳ ಸಂಚಾರ ನಮ್ಮ ಊರಲ್ಲಿರಲಿಲ್ಲ. ಸುಮಾರು ೧೫ ರಿಂದ ೨೦ ಕಿ.ಮೀ ಅಂತರದ ನಡಿಗೆಯಲ್ಲಿ ಸಿಗುವ ಸಿಟಿಗೆ ಹೋಗಿ ಸಾಮಾನು ಸರಂಜಾಮುಗಳ ವಹಿವಾಟು ನಡೆಸಬೇಕಿತ್ತು. ಅಲ್ಲಿ ಒಂದೆರಡು ಅಂಗಡಿ ಮುಂಗಟ್ಟುಗಳಿದ್ದವು. ಹುಷಾರಿಲ್ಲದೇ ಖಾಯಿಲೆ ಇದ್ದರೂ ಅಲ್ಲಿಯೇ ಜೌಷಧಿ ಮಾಡಿಕೊಂಡು ಬರಬೇಕಿತ್ತು, ಮನೆಗೆ ಬೇಕಾದ ಸಾಮಾನುಗಳ ಅವಶ್ಯಕತೆ ಇದ್ದರೆ ಅಲ್ಲಿಂದಲೇ ತಲೆ ಮೇಲೆ ಹೊತ್ತು ವಾಪಾಸ್ಸಾಗಬೇಕಿತ್ತು. ಕಾಲು ನಡಿಗೆ ಇಲ್ಲವೆಂದರೆ ಎತ್ತಿನಗಾಡಿಯ ಸೌಲಭ್ಯ ಅಲ್ಪ-ಸ್ವಲ್ಪ ಇತ್ತು. ಇಡೀ ಊರಲ್ಲೇ ನಮ್ಮದು ದೊಡ್ಡದಾದ ಮನೆತನದ ಮನೆಯಾದ್ದರಿಂದ ಸ್ವಲ್ಪ ಶ್ರೀಮಂತಿಕೆ ಎಂಬಂತೆ ಎತ್ತಿನ ಗಾಡಿಯನ್ನು ನಮ್ಮ ಹಿರಿಯಜ್ಜನೇ ಹೊಂದಿದ್ದರು ಅಲ್ಲದೇ ಬಹಳ ಚಿಕ್ಕವಯಸ್ಸಿನಲ್ಲೇ ಅದರ ಪೂರ್ತಿ ಜವಾಬ್ಧಾರಿಯನ್ನು ಮಾಮನ ಹೊಗಲಿಗೆ ಹೇರಿದ್ದು ಅವರೇ ನನಗೆ ಎಷ್ಟೋ ಬಾರಿ ಹೇಳಿದ್ದು ಕೇಳಿಸಿಕೊಂಡಿದ್ದೆ. ಎತ್ತಿನ ಗಾಡಿಯನ್ನು ಓಡಿಸುವುದರಲ್ಲಿ ಈಗಲೂ ನಂಬರ್ ಒನ್ ಎನ್ನುವ ಹೆಗ್ಗಳಿಕೆ ಅವರ ಪಾಲಿಗೆ ಹಾಗೇ ಉಳಿದಿದೆ. ನಾನು ಆಗೊಮ್ಮೆ-ಈಗೊಮ್ಮೆ ಊರಿಗೆ ಹೋದಾಗ ಗಾಡಿ ಎತ್ತುಗಳ ಕತೆ ಹೇಳುವ ಮಾಮ ಅಂದು ನಿರ್ವಹಿಸುತ್ತಿದ್ದ ಕೆಲಸಗಳನ್ನು ಎಣಿಸಿದರೆ ಇಂದು ಮಾಡುತ್ತಿರುವುದು ಏನೂ ಅಲ್ಲ ಎನಿಸುತ್ತದೆ. ಅಂದೆಲ್ಲಾ ಅವರಿಗೆ ದಿನಕ್ಕಿಂತಿಷ್ಟು ಕೆಲಸ ಮಾಡಲೇಬೇಕೆಂಬ ಮನೆಯ ಹಿರಿಯರ ಆಜ್ಞೆ ಇತ್ತಂತೆ. ಇಲ್ಲವಾದರೆ ಸಂಜೆ ಊಟಕ್ಕೆ ಮನೆಗೆ ಬರುವ ಹಾಗಿರಲಿಲ್ಲವಂತೆ!…

    Click here

    Click here

    Click here

    Call us

    Call us

    ನಮ್ಮ ಜೀವನದಲ್ಲಿ ಕಳೆದಿರುವ ದಿನಗಳೆಲ್ಲವನ್ನು ನಾನು ಇತಿಹಾಸವೇ ಎಂದು ಕರೆಯಲು ಇಷ್ಟ ಪಡುತ್ತೇನೆ. ಕಾರಣ ಪ್ರತಿಯೊಬ್ಬ ಮನುಷ್ಯನ ಜೀವಿತದ ಹಳೆಯ ದಿನಗಳನ್ನು ಎಣಿಸಿದರೆ ಅಲ್ಲೊಂದು ಇತಿಹಾಸವಾಗಬಹುದಾದ ನೆನಪುಗಳ ಮಾಲೆ ಇದ್ದೆ ಇರುತ್ತದೆ. ಅಂತೆಯೇ ಇವರ ಜೀವನದ ಗಾಥೆಯೂ ಹಾಗೆ ಇದೆ. ಎಲ್ಲರೂ ಕೈ ಬಿಟ್ಟಾಗ ನಮ್ಮನೆ ಸೇರಿದ್ದ ಮಾಮ, ಪ್ರಾರಂಭದಲ್ಲಿ ನನಗೂ ಅಪರಿಚಿತರಾಗಿದ್ದರು. ಮೊದಲ ಬಾರಿ ಅವರನ್ನು ನೋಡಿದ್ದಾಗ ಅಮ್ಮನ ಬಳಿ ಅವರ‍್ಯಾರೆಂದು ಕೇಳಿದ್ದೆ!., ಅವಳಂದು ನನ್ನಣ್ಣ ಅಂದಿದ್ದಳು. ಹಾಗಾದರೆ ನನಗೇನಾಗುತ್ತಾರೆನ್ನುವ ಮರು ಪ್ರಶ್ನೆಗೆ ನೀ ’ಮೊಮ್ಮ’ ಎಂದು ಕರೆ ಎಂದಿದ್ದಳು. ’ಮೊಮ್ಮ’ ಪದ ಹೇಳಲು ಕಷ್ಟವಾದ್ದರಿಂದ, ಚಿಕ್ಕಂದಿನ ಚಿಕ್ಕಬದಲಾವಣೆ ಎಂಬಂತೆ ಮೊಮ್ಮ ನನಗೆ ’ಮಾಮ’ನಾಗಿಯೇ ಉಳಿದರು.

    ನಿಮಗೆ ಗೊತ್ತಾ!?, ಮಾಮ, ಇತ್ತೀಚಿನ ದಿನಗಳಲ್ಲಿ ನನ್ನ ಹಿರಿಯಣ್ಣನ ಮಗಳು ‘ಸ್ವಾತಿ’ಗೆ ಹೋರಿ ಅಜ್ಜನಾಗಿ, ಕಿರಿಯಣ್ಣನ ಮಗ ‘ಶ್ರಜ್ಜು’ಗೆ ‘ಅಂಗಡಿ ಅಜ್ಜ’ನಾಗಿಯೂ ಬದಲಾಗಿದ್ದು ಇನ್ನೊಂದು ಥರದ ವಿಶೇಷ!. ಅವರಿಗೆ ಮನೆಯ ಧನಕರುಗಳಿಗಿಂತ ಗದ್ದೆ ಹೂಳುವ ಕೋಣ(ಹೋರಿ)ಗಳೆಂದರೆ ಇಷ್ಟ. ತೀರಾ ಇತ್ತೀಚಿನವರೆಗೂ ತನ್ನ ಮಕ್ಕಳಂತೆ ಸಾಕುತ್ತಿದ್ದ ಕೋಣಗಳ ದೆಸೆಯಿಂದ ’ಸ್ವಾತಿ’ಗೆ ಅವರು ’ಹೋರಿಅಜ್ಜ’ ಎಂದೆ ಪರಿಚಿತರಾಗಿದ್ದರು. ಒಂದೆರಡು ವರ್ಷಗಳಿಗಿಂತ ಈಚೆ ’ನನಗೂ ವಯಸ್ಸಾಯಿತು ಇನ್ನೂ ಪ್ರಾಣಿಗಳನ್ನು ಸಾಕಲು ಆಗೋದಿಲ್ಲ’ ಎಂದು ಅರಿತು ಮನೆಯಿಂದ ಸ್ವಲ್ಪವೇ ಹತ್ತಿರವಿದ್ದ ಅಂಗಡಿಯೊಂದನ್ನು ಬಾಡಿಗೆ ಪಡೆದು ಸ್ವಾವಲಂಭಿಯಾಗಿ ವ್ಯಾಪಾರ ನಡೆಸುತ್ತಿದ್ದದ್ದನ್ನು ನೋಡಿದರೆ ಪ್ರತಿಯೊಬ್ಬನೂ ಅವರಿಗೆ ಶಭಾಷ್ ಎನ್ನಲೇಬೇಕು. ದಿನಾ ಅವರ ಅಂಗಡಿ ಪಯಣ ನೋಡಿದ್ದ ಚಿಕ್ಕ ವಯಸ್ಸಿನ ’ಶ್ರಜ್ಜು’ ಅವರಿಗೆ ’ಅಂಗಡಿಅಜ್ಜ’ ಎಂದು ಹೆಸರಿಟ್ಟಿದ್ದು ಆ ಕಾಣಕ್ಕಾಗಿ ಅಷ್ಟೆ.

    ಮೊದಲಿನಿಂದಲೂ ಅವರಿಗೆ ಮನೆಯಲ್ಲಿ ಹಿರಿತಲೆಯೆಂದು ಸ್ವಲ್ಪ ಬೇರೆಯದೇ ಮರ್ಯಾದೆ ಇತ್ತಾದರೂ, ಯಾವುದೊಂದನ್ನು ನನಗೆ ಬೇಕು ಎಂದು ಹವಣಿಸಿದ್ದು ನಾನೆಂದು ಕಂಡಿರಲಿಲ್ಲ. ಸದಾ ತಮ್ಮದೇ ಕೆಲಸದಲ್ಲಿ ಮಗ್ನರಾಗಿರುತ್ತಿದ್ದ ಮಾಮ ದೇವರಿಗಿಂತಲೂ ದೈವದ ಕೆಲಸಗಳಲ್ಲಿ ವಿಶೇಷ ಆಸಕ್ತಿ, ಭಯ, ಶ್ರದ್ಧೆ, ಅನುಕಂಪದ ಕ್ಷೋಭೆಯಾಗಿದ್ದರು. ಮನೆಯಲ್ಲಿ ಏನೇ ದೈವದ, ದೇವರ ಕೆಲಸವಿದ್ದರೂ, ಅವರೇ ಅದಕ್ಕೆ ಮುಂದಾಳು. ಅವರ ರೂಢಿಯಂತೆ ಎಲ್ಲವೂ ಎತಾವತ್ತಾಗಿ ನಡೆಯುತ್ತಿತ್ತು. ತಪ್ಪಾದರೆ ಕ್ಷಮಿಸುತ್ತಿರಲಿಲ್ಲ. ದೊಡ್ಡ ಬೈಗುಳವನ್ನೇ ಕಾರುತಿದ್ದರು.

    ನಾನಾಗ 5ನೇ ತರಗತಿ ಓದುತ್ತಿದ್ದೆ… ಅಂದು ನಮ್ಮೂರಿನ ಮನೆಗಳೆಲ್ಲ ಇಂದಿನಂತೆ ಕರೆಂಟ್ ಸೌಲಭ್ಯ ಕಂಡಿರಲಿಲ್ಲ. ನಮ್ಮ ರಾತ್ರಿ ಓದೆಲ್ಲವೂ ನೆಡೆಯುತ್ತಿದ್ದದ್ದು ಸೀಮೆ ಎಣ್ಣೆಯ ಚಿಮಣಿ ದೀಪದಡಿ. ಬರೆಯೋಕೆ ಒಂದು ಮಂಚವೂ ಇರಲಿಲ್ಲ. ಖಾಲಿ ನೆಲದ ಮೇಲೆ ಉದ್ದಕ್ಕೆ ಮಲಗಿ, ಮುಂಗೈ ಊರಿ ಅಥವಾ ಕಾಲುಗಳನ್ನು ಮಡಚಿ, ಬರೆಯುದೋ!, ಓದುವುದೋ!! ಮಾಡುತ್ತಿದ್ದೆ. ಆ ಸಮಯದಲ್ಲಿ ನನಗೆ ನಿದ್ದೆ ಬಂದಂತಾಗಿ ಕಣ್ಣು ಮುಚ್ಚಿ ಒಮ್ಮೊಮ್ಮೆ ದೀಪದ ಮೇಲೆ ಬೀಳುವುದು ಮಾಮೂಲಿಯಾಗಿತ್ತು. ಅಲ್ಲದೇ ಸೀಮೆ ಎಣ್ಣೆ ಕೆಳಕ್ಕೆ ಸೋರಿ ಬೆಂಕಿ ಹತ್ತುವ, ಹತ್ತು-ಹಲವು ಸನ್ನಿವೇಶಗಳು ನಡೆದದ್ದು ಮಾಮನೂ ನೋಡಿದ್ದರು. ಅಂದಿನ ನನ್ನ ಕಷ್ಟವನ್ನರಿತಿದ್ದ ಮಾಮ ದೂರದೂರಿಗೆ ಹೋಗಿ ಹಿತ್ತಾಳೆಯ ಮಣಭಾರದ ಒಂದು ದೀಪದ ಲ್ಯಾಂಪನ್ನು ತಂದು ನನಗೆ ಉಡುಗೊರೆ ನೀಡಿದ್ದರು. ಅದು ಇವತ್ತಿಗೂ ನನ್ನ ಬಳಿ ಜೋಪಾನವಾಗಿದೆ. ’ನಮ್ಮ ಕಾಲದಲ್ಲಿ ನಮಗೆ ಓದಲಾಗಿಲ್ಲ!, ನಮ್ಮನೇ ಮಕ್ಕಳಾದರೂ ಚೆನ್ನಾಗಿ ಓದಲಿ’ ಎನ್ನುವ ಅವರ ಆಶಾಭಾವ ಆ ಉಡುಗೊರೆ ನನಗೆ ಸಿಗುವಂತೆ ಮಾಡಿತ್ತೆಂದು ನನಗಂದೇ ಅನಿಸಿತ್ತು. ಅವುಗಳು ಕೂಡ ಇಂದು ಮಾಮನ ನೆನೆಪನ್ನು ಮತ್ತೆ ಮತ್ತೆ ಭಿತ್ತುತ್ತಿವೆ… ನಾನೇಗೆ ಮರೆಯಲಿ ನೀವೇ ಹೇಳಿ!.

    ಅವರಿಗೆ ನನ್ನ ಹಾಗೂ ನನ್ನಣ್ಣಂದಿರ ಮೇಲಿನ ಕಾಳಜಿಯೇ ಒಂಥರಾ ವಿಶೇಷತೆಯಿಂದ ಕೂಡಿತ್ತು. ಕೇವಲ ನಮ್ಮನ್ನಷ್ಟೇ ಅಲ್ಲದೇ ಮನೆಯಲ್ಲಿ ಮುದ್ದಿಂದ ಸಾಕಿದ್ದ ನಾಯಿ ಮರಿ ಮೇಲೆಯೂ ಪ್ರೀತಿ ಅಗಾಧವಾಗಿತ್ತು. ತಟ್ಟೆಗೆ ಐದು ಇಡ್ಲಿ ಹಾಕಿಕೊಂಡರೆ ಅದರಲ್ಲಿ ಒಂದು ನಾಯಿಮರಿಗೆ, ಒಂದು ಕೋಳಿ ಹುಂಜನಿಗೆ, ಇನ್ನೆರಡು ಮುದ್ದಿನ ಕೋಣಗಳಿಗೆ ದಿನವೂ ನೀಡಿ ಅವರು ತಿನ್ನುತ್ತಿದ್ದದ್ದು ಕೇವಲ ಉಳಿದ ಒಂದು ಇಡ್ಲಿಯನ್ನು ಮಾತ್ರಾ!.

    ಅಷ್ಟೇ ಯಾಕೆ!?, ಮಾಮನಿಗೆ ಶಿಕಾರಿಯೆಂದರೆ ಹುಚ್ಚು. ಪ್ರತಿ ಮಳೆಗಾಲ ಸನ್ನಿಹಿತವಾಯಿತೆಂದರೆ ಮಾಮನಿಗೆ ವಿಶೇಷವಾದ ಖುಷಿ. ಯಾಕೆಂದರೆ ಶಿಕಾರಿ ಅಥವಾ ಕಾಡು ಪ್ರಾಣಿಗಳ ಬೇಟೆಯಾಡಲು ಮಳೆಗಾಲ ಸೂಕ್ತ ಎನ್ನುವ ನಿಲುವು ಅವರದ್ದು. ಇಡೀ ನಮ್ಮ ಊರಿಗೆ ಒಂದು ಕಾಲಕ್ಕೆ ಬಹುದೊಡ್ಡ ಬೇಟೆಗಾರರಾಗಿದ್ದ ಅವರು ಇತ್ತೀಚಿಗೆ ಕಣ್ಣು ಕಾಣಿಸುವುದಿಲ್ಲ ಎನ್ನುವ ನೆಲೆಯಿಂದ ಅದಕ್ಕೂ ಪೂರ್ಣ ವಿರಾಮ ನೀಡಿದ್ದರು. ಹುಲಿ, ಹಂದಿ, ಮಿಗ, ಮುಳ್ಳುಹಂದಿ, ಮೊಲ ಹೀಗೆ ಅನೇಕ ಬಗೆಯ ಪ್ರಾಣಿಗಳನ್ನು ಬೇಟೆಯಾಡಲು ನಿಂತರೆಂದರೆ ಅವುಗಳ ಪ್ರಾಣವನ್ನು ಯಾರಿಂದಲೂ ತಡೆಯಲಾಗುತ್ತಿರಲಿಲ್ಲ. ಆಗೆಲ್ಲಾ ಕಾಡು ಭೇಟೆ ಅಥವಾ ಶಿಕಾರಿಗೆ ವಿಶೇಷ ಪ್ರಾಮುಖ್ಯವಿತ್ತು ಮತ್ತು ಪ್ರಾಣಿ ಭಯಗಳನ್ನು ಕೋವಿಯಿಂದಲೇ ನೀಗಿಸಿಕೊಳ್ಳಬೇಕಾದ ಅನಿರ್ವಾಯತೆ ಕೂಡ ಅಂದಿನ ಜನರ ಜೀವನವನ್ನು ಶಿಖಾರಿಗೆ ದೂಡುತ್ತಿತ್ತು.

    ಎಷ್ಟೋ ಬಾರಿ ಅಕ್ಕ ಪಕ್ಕದವರ ಮೇಲೆ ಅವರು ರೇಗಾಡಿದ್ದನ್ನು ನಾ ನೋಡಿದ್ದೆ ಆದರೆ ಅದೆಲ್ಲವೂ ನಡೆಯುತ್ತಿದ್ದ ತಪ್ಪುಗಳನ್ನು ತಿದ್ದಲೋಸುಗವಾಗಿಯೇ ಹೊರತು ಬೇರೆ ಯಾವ ಉದ್ದೇ ಅವರಲ್ಲಿರಲಿಲ್ಲ. ಕಬ್ಬುಗಳನ್ನು ಗಾಣಕ್ಕೆ ಕಟ್ಟಿ ಬೆಲ್ಲ ಸಿದ್ಧಪಡಿಸುತ್ತಿದ್ದ ’ಆಲಿಮನೆ’ಯಲ್ಲೂ ಅನೇಕ ವರ್ಷ ದುಡಿದಿದ್ದ ಅವರು ಸಾಯೋ ಮುಂಚಿನ ಪ್ರತಿ ದಿನವೂ ಕೆಲಸ ಮಾಡುತ್ತಲೇ ಕೊನೆಕಂಡವರು.

    ಮಾಮ.., ನಿಂತಿರುವುದು ನಿಮ್ಮ ಉಸಿರು ಮಾತ್ರಾ. ನಿಮ್ಮ ನೆನಪು ಸದಾ ನಮಗೆ ಹಸಿರಾಗೆ ಇದೆ. ನಿಮ್ಮ ಜೊತೆ ಆಡಿಕೊಂಡು ಬೆಳೆದಿದ್ದ ಪರಿಸರವೆಲ್ಲಾ ನೀವಿಲ್ಲದೇ ಬಡವಾದಂತಿದೆ, ಮೊನ್ನೆ ಮೊನ್ನೆ ನೀವು ನನ್ನ ಕ್ಯಾಮರಾಕ್ಕೆ ಕೊಟ್ಟ ಫೋಸ್ ಕೂಡ ಕಣ್ಣಂಚಲಿ ಹನಿ ಬರುವಂತೆ ಮಾಡುತ್ತಿದೆ, ಫೋಟೋಗಳು ಮರುಗಿಸುತ್ತಿವೆ. ದೈವದ ಮನೆಗಳು ಹೂವಿಲ್ಲದೇ ಬಾಡಿದೆ. ಧನಕರುಗಳು ಗೋಗೆರೆಯುತ್ತಿವೆ, ದಿನಾ ಮಲಗುತ್ತಿದ್ದ ನಿಮ್ಮ ಕೋಣೆ ಬಿಕೋ ಎನ್ನುತ್ತಿದೆ, ಸುತ್ತಣ ಪರಿಸರ ಮೌವಹಿಸಿದೆ, ಪ್ರೀತಿಸುತ್ತಿದ್ದ ಕೆಲಸಗಳೆಲ್ಲ ಪ್ರಣಯರಾಜನಿಲ್ಲದೇ ಕಂಗೆಟ್ಟಿದೆ, ಮನೆ ಮಠದ ಸುತ್ತ ಗಲೀಜುಗಳು ಮತ್ತೆ ಎದ್ದಿದೆ, ಮನೆಗೆ ಬಂದ ನೆಂಟರೆಲ್ಲಾ ನೀವಿಲ್ವಾ ಎಂದು ಕೇಳಿಯೇ ಹೊರ ನಡೆಯುತ್ತಿದ್ದಾರೆ, ನಡೆದೆ ಸವೆಸುತ್ತಿದ್ದ ದಾರಿಗಳೆಲ್ಲ ನಿಮ್ಮ ಬರುವಿಕೆಗೆ ಕಾದು ಸೋತು ಹೊಸ ಹುಲ್ಲುಗಳನ್ನು ಆವರಿಸಿಕೊಂಡಿವೆ. ನನ್ನ ಭಾವನಾಲಹರಿಯ ಮೇಳ ನೀವಿಲ್ಲದೇ ಇರುವ ನಿಜಸ್ಥಿತಿ ಅರಿತು, ಮತ್ತೆ ಮತ್ತೆ ನೋವು, ಸಂಕಟಗಳನ್ನು ತಂದಿಕ್ಕಿ ಹೃದಯ ಭಾರವಾಗಿಸುತ್ತಿದೆ. ಅಮ್ಮ ಅಳುತ್ತಿದ್ದಾಳೆ!..

    Like this:

    Like Loading...

    Related

    Sandeep Shetty Heggadde
    Share. Facebook Twitter Pinterest LinkedIn Tumblr Telegram Email
    ಕಚಗುಳಿ
    • Website
    • Facebook

    ಕುಂದಾಪುರ ತಾಲೂಕಿನ ಹೊಸೂರು ಹೆಗ್ಗದ್ದೆಯವರಾದ ಸಂದೀಪ್ ಬಿ.ಕಾಂ ಪದವೀಧರರು. ಪ್ರಸ್ತುತ ಬೆಂಗಳೂರಿನ ಸಿರಿ ಸೌಂದರ್ಯ ಮಾಸ ಪತ್ರಿಕೆಯ ಉಪಸಂಪಾದಕರಾಗಿರುವ ಕಾರ್ಯನಿರ್ವಹಿಸುತ್ತಿದ್ದು ಕವಿ-ಲೇಖಕರಾಗಿ ಗುರುತಿಸಿಕೊಂಡಿದ್ದಾರೆ ಜೊತೆಗೆ ಹಾಡುಗಾರಿಕೆಯಲ್ಲಿ ಸೈ ಏನಿಸಿಕೊಂಡಿದ್ದಾರೆ. ಅವರ 'ಮಡಿಕೆ ಮಾರುವ ಹುಡುಗ' ಕವನ ಸಂಕಲನವು ಇತ್ತಿಚಿಗೆ ಬಿಡುಗಡೆಗೊಂಡಿತ್ತು. ಸಂದೀಪ್ ಈವರೆಗೆ 2-3 ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ನಲ್ಲಿ ಕಜಗುಳಿ ಅಂಕಣದ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ.

    Related Posts

    ಕೋಟ: ಕೆ. ವಾಸುದೇವ ನಾಯಕ್ ಸ್ಮರಣಾರ್ಥ ತಂಗುದಾಣ ಲೋಕಾರ್ಪಣೆ

    27/02/2025

    ಗಂಗೊಳ್ಳಿ: ಮಕ್ಕಳ ಹಬ್ಬ, ಪ್ರತಿಭಾ ಪುರಸ್ಕಾರ

    20/02/2019

    ಹೌಸ್ ಆಫ್ ಕಾಮನ್ಸ್‌ನಿಂದ ಹೈದ್ರಾಬಾದ್ ತನಕ ಹಕ್ಕುಚ್ಯುತಿ ಹೋರಾಟ

    12/05/2018

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d