ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವಾಲಿಬಾಲ್ ಪಟು, ಕರ್ನಾಟಕದ ರಾಜ್ಯ ವಾಲಿಬಾಲ್ ತಂಡದ ಸದಸ್ಯ ಕುಂದಾಪುರದ ಅನುಪ್ ಡಿ’ಕೋಸ್ಟಾ 2015ನೇ ಸಾಲಿನ ರಾಜ್ಯ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇಶದ ಭರವಸೆಯ ವಾಲಿಬಾಲ್ ಕ್ರೀಡಾಪಟುವೆಂದೇ ಗುರುತಿಸಿಕೊಂಡಿರುವ ಅನೂಪ್ ಅವರಿಗೆ ಕರ್ನಾಟಕದ ಏಕಲವ್ಯ ಪ್ರಶಸ್ತಿ ದೊರೆತಿರುವುದು ಸಾಧನೆಯ ಮುಕುಟಕ್ಕೊಂದು ಗರಿ ಮೂಡಿದಂತಾಗಿದೆ. ಕುಂದಾಪುರ ಹಂಗಳೂರಿನ ಅಂತೋನಿ ಡಿ’ಕೋಸ್ಟಾ ಹಾಗೂ ಗೀತಾ ಡಿಕೋಸ್ಟಾ ದಂಪತಿಗಳ ಪುತ್ರರಾದ ಅನೂಪ್ ಡಿಕೋಸ್ಟಾ, ಹೊಸನಗರ ಹೋಲಿ ರೆಡಿಮೇರ್ ಸ್ಕೂಲಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ; ಕುಂದಾಪುರದ ಸೈಂಟ್ ಮೇರಿಸ್ ಪ್ರೌಡಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಪಡೆದು ಬೆಂಗಳೂರಿನ ಅಲ್ ಅಮೀನ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಬಿಎಂ ಪದವಿ ಪಡೆದಿದ್ದಾರೆ. ಪ್ರಸ್ತುತ ಹೈದರಬಾದ್ ಆದಾಯ ತೆರಿಗೆ ಇಲಾಯಲ್ಲಿ ಉದ್ಯೋಗಿಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ.
ಶಾಲಾ ದಿನಗಳಿಂದಲೇ ಅನೂಪ್ ಕ್ರೀಡೆಯತ್ತ ಅತೀವ ಆಸಕ್ತಿ ಹೊಂದಿದ್ದರು. ಸ್ವತಃ ಕ್ರೀಡಾಪಟುವಾಗಿದ್ದ ತಂದೆ ಅಂತೋನಿ ಡಿ’ಕೋಸ್ಟಾ ಮಗನ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸುತ್ತಲೇ ಬಂದಿದ್ದರು. ಪ್ರೌಡಶಾಲೆಯಲ್ಲಿರುವಾಗ ಕುಂದಾಪುರ ಖಾರ್ವಿಕೇರಿಯ ಅಶೋಕ ಯುತ್ ಕ್ಲಬ್ ಹಾಗೂ ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್‌ನ ಸಾಂಗತ್ಯ ಅನೂಪ್ ಕ್ರೀಡಾ ಉತ್ಸುಕತೆ ನೀರೆರೆದಿತ್ತು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಐದು ವರ್ಷಗಳ ಕಾಲ ವಾಲಿಬಾಲ್ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆತದ್ದು ಅನೂಪ್ ಅವರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ತೊಡಗಿಸಿಕೊಳ್ಳಲು ದಾರಿಮಾಡಿಕೊಟ್ಟುದಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಯಿತು. ಕುಂದಾಪ್ರ ಡಾಟ್ ಕಾಂ.
ಏಷ್ಯದ ಅತ್ಯಂತ ಎತ್ತರದ ನೆಗೆತಗಾರ:
ವಾಲಿಬಾಲ್ ದಂತಕತೆ ಜಿಮ್ಮಿ ಜಾರ್ಜ್ ಅವರನ್ನು ನೆನಪಿಸುವ ರೀತಿಯಲ್ಲಿ ತನ್ನ ಕ್ರೀಡಾಕೌಶಲ್ಯ ಪ್ರದರ್ಶಿಸುತ್ತಿರುವ ಅನೂಪ್ ವಾಲಿಬಾಲ್‌ನಲ್ಲಿ ಏಷ್ಯದ ಅತ್ಯಂತ ಎತ್ತರಕ್ಕೆ ನೆಗೆತಗಾರ (ಅಪ್ರೋಚ್ ಜಂಪ್) ಎಂಬ ಖ್ಯಾತಿಗೆ ಪಾತ್ರರಾದವರು. ಅಪ್ರೋಚ್ ಜಂಪ್‌ನಲ್ಲಿ ಸರಾಸರಿ ೩೬೫ ಸೆ.ಮೀ ಎತ್ತರಕ್ಕೆ ಜಿಗಿಯುವ ಅನೂಪ್, ಆಲ್‌ರೌಂಡರ್ ಕೂಡ ಆಗಿದ್ದು ಎನಿಸಿಕೊಂಡು ಬ್ಲಾಕ್, ಡಿಫೆನ್ಸ್ ಹಾಗೂ ಸ್ಮ್ಯಾಷ್ ಎಲ್ಲಾ ವಿಭಾಗದಲ್ಲಿಯೂ ತನ್ನ ಛಾಪು ಮೂಡಿಸಿದ್ದಾರೆ.
2010ರಲ್ಲಿ ರಾಜ್ಯ ವಾಲಿಬಾಲ್ ಹಿರಿಯರ ತಂಡಕ್ಕೆ ಆಯ್ಕೆಯಾಗಿ ಇರಾನ್‌ನಲ್ಲಿ ನಡೆದ ಏಷ್ಯನ್ ಬಾಲಕರ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಲ್ಲದೇ, ಅದೇ ವರ್ಷ ಇರಾನಿನಲ್ಲಿ ನಡೆದ ಜ್ಯೂನಿಯಲ್ ಏಷ್ಯನ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಬೆಸ್ಟ್ ಸ್ಕೋರರ್ ಇನ್ ಏಷ್ಯನ್ ಯುತ್ ಪ್ರಶಸ್ತಿಗೆ ಭಾಜನರಾಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
2013ರಲ್ಲಿ ಕಿರಿಯರ ಏಷ್ಯನ್ ಚಾಂಪಿಯನ್‌ಶಿಷ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಮಿಂಚಿದ್ದ ಅನೂಪ್, ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಗೌರವಕ್ಕೂ ಪಾತ್ರರಾಗಿದ್ದರು. 2015ರಲ್ಲಿ ನಡೆದ ಫೆಡರೇಷನ್ ಕಪ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಹಿರಿಯರ ತಂಡವನ್ನು ಪ್ರತಿನಿಧಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ಭಾರತದ ವಾಲಿಬಾಲ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡದ್ದು, ವಿದೇಶಿ ಕ್ಲಬ್ ತಂಡಗಳಲ್ಲಿಯೂ ಆಟವಾಡಿದ್ದು ಅನೂಪ್ ಅವರ ಹೆಚ್ಚುಗಾರಿಕೆ.
ಏಕಲವ್ಯ ಪ್ರಶಸ್ತಿಯು 2ಲಕ್ಷ ರೂ. ನಗದು ಕಂಚಿನ ಪ್ರತಿಮೆ, ಸಮವಸ್ತ್ರ, ಸ್ಕ್ರೋಲ್‌ನ್ನು ಒಳಗೊಂಡಿರುತ್ತದೆ. ಅ.7ರಂದು ಮೈಸೂರಿನ ಜಿ.ಕೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅನೂಪ್ ಡಿಕೋಸ್ಟಾ ಸೇರಿದಂತೆ ರಾಜ್ಯದ ೧೬ಕ್ರೀಡಾ ಪಟುಗಳು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. © ಕುಂದಾಪ್ರ ಡಾಟ್ ಕಾಂ.