ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಂಗ್ಲ ಭಾಷೆಯ ಹಿಂದೆ ಬಿದ್ದಿರುವ ಪೋಷಕರು ಇಂದಿನ ಮಕ್ಕಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಮಾತೃಭಾಷೆಗೆ ಕುತ್ತು ಬಂದೊದಗಿದೆ. ಮನೆಯಲ್ಲಿಯೂ ಇಂಗ್ಲಿಷ್ ಭಾಷೆ ಬಳಕೆಯಾಗುತ್ತಿದ್ದು ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬೇರು ಮರೆಯಾಗುತ್ತಿದೆ ಎಂದು ಲೇಖಕಿ ಮಾಧುರಿ ಕೃಷ್ಣ ವಿಷಾದ ವ್ಯಕ್ತಪಡಿಸಿದರು.
ಅವರು ಕುಂದಾಪುರ ಬೋರ್ಡ್ ಹೈಸ್ಕೂಲು ಶ್ರೀ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಕುಂದಪ್ರಭ ಆಶ್ರಯದಲ್ಲಿ ಜರುಗಿದ ಬರಹಗಾರರ ಅಕ್ಷರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅನ್ಯಭಾಷಿಗರನ್ನೂ ಕನ್ನಡದತ್ತ ಸೆಳೆಯುವ ಕೆಲಸ ಆಗದಿದ್ದರೆ ಕನ್ನಡ ಭಾಷೆಗೆ ಅಪಾಯ ತಪ್ಪಿದ್ದಲ್ಲ. ಸಾಹಿತ್ಯ ಕ್ಷೇತ್ರ ಶ್ರೀಮಂತ ಹಾಗೂ ಸದೃಢವಾಗಿ ಬೆಳೆಸಲು ಯುವ ಸಮುದಾಯ ಪಣತೊಡಬೇಕಿದೆ ಎಂದ ಅವರು, ಇಂದಿನ ದಿನಮಾನದಲ್ಲಿ ಸಾಹಿತ್ಯ ಕ್ಷೇತ್ರವೂ ವೇಗವನ್ನು ಕಂಡುಕೊಂಡಿದ್ದು ಸ್ವಲ್ಪ ನಿಧಾನಿಸಿದರೂ ನಮ್ಮನ್ನು ಬೇರೊಬ್ಬರು ಹಿಂದಕ್ಕಿಕ್ಕಿ ಮುಂದೆ ಸಾಗುತ್ತಾರೆ. ಗಟ್ಟಿಯಾದ ಕನಸುಗಳ ಕಟ್ಟಿ ಅದನ್ನು ಸಾಕಾರ ಮಾಡುವ ಪ್ರಯತ್ನ ಮಾಡಿದರೆ ಸಾಹಿತ್ಯ ಕೇತ್ರದಲ್ಲಿ ಒಂದೊಂದೇ ಮೆಟ್ಟಿಲೇರಲು ಸಾಧ್ಯ ಎಂದರು.
ಜಾನಪದ ಸಂಶೋಧಕ ಪ್ರೊ.ಎ.ವಿ. ನಾವಡ ದಿಕ್ಸೂಚಿ ಭಾಷಣ ಮಾಡಿ ಕುಂದಾಪುರ ಕನ್ನಡ ಅಕಾಡೆಮಿಯನ್ನು ಸರಕಾರ ಸ್ಥಾಪಿಸಿ, ಭಾಷೆ ಬಗ್ಗೆ ಇನ್ನಷ್ಟು ಅಧ್ಯಯನ ಕೈಗೊಳ್ಳಬೇಕಿದೆ. ಕೋಟ ಕನ್ನಡ ಅಥವಾ ಕುಂದಗನ್ನಡದ ಭಾಷಾ ಬಳಕೆ ಕಡಿಮೆಯಾಗುತ್ತಿದ್ದು, ಬಳಕೆ ಮತ್ತು ಬರವಣಿಗೆಯ ಮಾತ್ರ ಜೀವಂತಿಕೆಯಿಂಡಲು ಸಾಧ್ಯವಿದೆ. ಹಿಂದಿನಂತೆ ಶಾಲಾ ಕಾಲೇಜುಗಳಲ್ಲಿ ನಾಟಕ, ಯಕ್ಷಗಾನದಲ್ಲಿ ಕುಂದಗನ್ನಡವನ್ನು ಹೆಚ್ಚು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹನಿಗವಿ, ಹಿರಿಯ ಸಾಹಿತಿ ಎಚ್. ಡುಂಡಿರಾಜ್ ಮಾತನಾಡಿ ಕುಂದಗನ್ನಡ ಭಾಷೆಯ ಬಳಕೆಯ ಬಗೆಗಿರುವ ಮುಜುಗರದ ಭಾವನೆ ದೂರವಾಗಿ ಅಭಿಮಾನ ಮೂಡುವರೆಗೆ ಅಕಾಡೆಮಿ ಸ್ಥಾಪನೆಯಾದರೂ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ಆದರೆ ಅಕಾಡೆಮಿಗಳು ಭಾಷೆಯ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸುತ್ತವೆ. ಅಕಾಡೆಮಿಯ ಜೊತೆಗೆ ಭಾಷಾಪ್ರೇಮವೂ ಮೂಡಿದಾಗ ಮಾತ್ರ ಕುಂದಗನ್ನಡ ಬೆಳೆಯಲು ಸಾಧ್ಯವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಕುಂದಾಪುರ ಐಎಂಎ ಅಧ್ಯಕ್ಷೆ ಭವಾನಿ ರಾವ್, ಮಂಗಳೂರು ಡಾ.ಆಣ್ಣಯ್ಯ ಕುಲಾಲ್ ಇದ್ದರು, ಜಾದೂಗಾರ ಓಂಗಣೇಶ್ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು. ಕುಂದ್ರಪ್ರಭ ಟ್ರಸ್ಟ್ ಪ್ರವರ್ತಕ ಯು.ಎಸ್.ಶೆಣೈ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಕೋ.ಶಿವಾನಂದ ಕಾರಂತ್ ಪ್ರಾಸ್ತಾವನೆಗೈದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಪ್ರಾರ್ಥಿಸಿದರು. ಕುಂದಾಪುರ ಪದವಿಪೂರ್ವ ಕಾಲೇಜ್ ಕನ್ನಡ ಉಪನ್ಯಾಸಕ ವಿಶ್ವನಾಥ ಕರಬ ಮತ್ತು ಇಂಗ್ಲಿಷ್ ಉಪನ್ಯಾಸಕ ರಾಜೀವ ನಾಯ್ಕ್ ನಿರೂಪಿಸಿದರು. ಜಯವಂತ ಪೈ ವಂದಿಸಿದರು.