ಹದಿಮೂರು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ನವೆಂಬರ್ 18, 19 ಮತ್ತು 20ರಂದು ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಜರುಗಲಿದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Call us

Click Here

ಮೂರು ದಿನಗಳ ಕಾಲ ಜರಗುವ ಈ ಸಮ್ಮೇಳನದಲ್ಲಿ ಕನ್ನಡನಾಡಿನ ಖ್ಯಾತ ಕವಿಗಳು, ಸಂಶೋಧಕರು, ವಿಮರ್ಶಕರರು, ಕಲಾವಿದರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ದಿನಾಂಕ 18ರಂದು ಬೆಳಗ್ಗೆ 9.30ಕ್ಕೆ ಸಮ್ಮೇಳನದ ಉದ್ಘಾಟನ ಸಮಾರಂಭ ನಡೆಯಲಿದ್ದು ದಿನಾಂಕ 20ರಂದು ಸಂಜೆ ಸಮಾರೋಪ ಸಮಾರಂಭವು ಜರುಗಲಿದೆ. ಈ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ 13 ಮಂದಿ ಸಾಧಕರನ್ನು ‘ಆಳ್ವಾಸ್ ನುಡಿಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರರಣಿಕೆಗಳನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪುರಸ್ಕೃತರು :

1. ಡಾ. ಗಿರಡ್ಡಿ ಗೋವಿಂದರಾಜ
ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಅಬ್ಬಗೇರಿಯವರಾದ ಡಾ. ಗಿರಡ್ಡಿ ಗೋವಿಂದರಾಜರು ಸಾಹಿತಿಯಾಗಿ, ವಿಮರ್ಶಕರಾಗಿ ಪ್ರಸಿದ್ಧರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಇಂಗ್ಲೆಂಡಿನ ಲ್ಯಾಂಕಸ್ಟರ್ ವಿಶ್ವವಿದ್ಯಾನಿಲಯದಿಂದ ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶೈಲಿಶಾಸ್ತ್ರದ ಮೇಲೆ ನಡೆಸಿದ ಸಂಶೋಧನೆಗೆ ಡಾಕ್ಟರೇಟ್ ಪದವಿ ಇವರಿಗೆ ದೊರೆಕಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ರೀಡರ್, ಪ್ರೊಫೆಸರ್, ವಿಭಾಗಮುಖ್ಯಸ್ಥರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ನಿವೃತ್ತರು. ಶಾರದಾಲಹರಿ, ರಸವಂತಿ, ಮರ್ಲಿನ್ ಮನ್ರೊ ಇವರ ಕವನ ಸಂಕಲನಗಳು. ಆಮುಖಾ-ಈಮುಖಾ, ಹಂಗು ಮತ್ತು ಇತರ ಕಥೆಗಳು, ಒಂದು ಬೇವಿನಮರದ ಕಥೆ, ಮಣ್ಣು ಇವರ ಕಥಾ ಸಂಕಲನಗಳು. ಸಣ್ಣಕಥೆಯ ಹೊಸ ಒಲವು, ನವ್ಯ ವಿಮರ್ಶೆಯೇ ಮೊದಲಾದ 14 ವಿಮರ್ಶಾ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ. ಲಲಿತಪ್ರಬಂಧ, ವ್ಯಕ್ತಿಚಿತ್ರ, ಪ್ರಸಂಗ, ಅನುವಾದ, ಸಂಪಾದನಾ ಕ್ಷೇತ್ರಗಳಲ್ಲೂ ಇವರು ಕೈಯ್ಯಾಡಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಗೌರವ, ನಾಟಕ ಅಕಾಡೆಮಿ ಪ್ರಶಸ್ತಿಯೇ ಮೊದಲಾದ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

2. ಸುಬ್ರಾಯ ಚೊಕ್ಕಾಡಿ
ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯವರು. ಶಿಕ್ಷಕ ವೃತ್ತಿಯ ಚೊಕ್ಕಾಡಿಯವರು ಸುಳ್ಯ, ಪೈಲೂರು, ಕುಕ್ಕುಜಡ್ಕವೇ ಮೊದಲಾದ ಶಾಲೆಗಳಲ್ಲಿ 39 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದವರು. ಮೈಸೂರು ವಿ.ವಿ.ಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದವರು. ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ, ಹಾಡಿನ ಲೋಕ, ಬಂಗಾರದ ಹಕ್ಕಿ – ಇವುಗಳು ಇವರ ಕವನಸಂಕಲನಗಳು. ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು ಇವರ ವಿಮರ್ಶಾ ಕೃತಿಗಳು. ಸಂತೆಮನೆ ಇವರ ಪ್ರಸಿದ್ಧ ಕಾದಂಬರಿ. ಧ್ವನಿಸುರುಳಿಗಳ ಮೂಲಕ ಅಪಾರ ಜನಮನ್ನಣೆ ಪಡೆದ ಶ್ರೀಯುತರಿಗೆ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ.ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಗೌರವಗಳು ಸಂದಿವೆ. ಇವರ ಹಿರಿಮೆಗೆ ‘ಮುಕ್ತ ಹಂಸ’ ಗೌರವ ಗ್ರಂಥ ಸಮರ್ಪಣೆಯಾಗಿದೆ.

Click here

Click here

Click here

Click Here

Call us

Call us

3. ಡಾ. ಚೆನ್ನಣ್ಣ ವಾಲೀಕಾರ
ಕವಿ, ಕಾದಂಬರಿಕಾರ, ನಾಟಕಕಾರ, ಸಂಶೋಧಕ, ಹೋರಾಟಗಾರ ಡಾ.ಚೆನ್ನಣ್ಣ ವಾಲೀಕಾರರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಿಂದ ಕನ್ನಡ ಎಂ.ಎ.ಪದವಿಯನ್ನು ಪಡೆದವರು. ‘ಹೈದರಾಬಾದ್ ಕರ್ನಾಟಕದ ಗ್ರಾಮ ದೇವತೆಗಳ ಜಾನಪದೀಯ ಅಧ್ಯಯನ’ಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಪ್ರೌಢಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಕಾಲೇಜು ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ವ್ಯೋಮಾವ್ಯೋಮಾ, ಸುನೀತಂಗಳ ಸುಕಾವ್ಯಾಮೃತ, ಸುನೀತಂಗಳ ಸುದಿವ್ಯಾಮೃತ, ಬೌದ್ಧತ್ವದ ಮಹಾ ಬ್ರಹ್ಮಾಂಡಾಮೃತಗಳು ಇವರ ಮಹಾಕಾವ್ಯಗಳು. ಮರದ ನೀರಿನ ಗಾಳಿ, ಬಂಡೆದ್ದ ದಲಿತ ಬೀದಿ ಹಾಡುಗಳು ಮೊದಲಾದ 11 ಕವನ ಸಂಕಲನಗಳು, ಕಪ್ಪುಕಥೆಗಳು, ಹೆಪ್ಪುಗಟ್ಟಿದ ಸಮುದ್ರವೇ ಮೊದಲಾದ 4 ಕಥಾ ಸಂಕಲನಗಳು, ಟೊಂಕದ ಕೆಳಗಿನ ಜನ, ಅಗ್ನಿರಾಜ ಮೊದಲಾದ 12 ನಾಟಕಗಳು, ಬೆಳ್ಯ, ಕೋಟೆಬಾಗಿಲು ಮೊದಲಾದ 5 ಕಾದಂಬರಿಗಳು, 11 ಡಪ್ಪಿನಾಟಗಳು ಇವರ ಲೇಖನಿಯಿಂದ ಮೂಡಿ ಬಂದಿವೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

4. ಡಾ.ಕೆ.ಆರ್.ಸಂಧ್ಯಾ ರೆಡ್ಡಿ
ಜಾನಪದ, ಕಾವ್ಯ, ಸಣ್ಣಕಥೆ, ಅಂಕಣಬರಹ, ಜೀವನ ಚರಿತ್ರೆ, ಭಾಷಾಂತರ ಮತ್ತು ಸಂಪಾದನೆ ಮೊದಲಾದ ಪ್ರಕಾರಗಳಲ್ಲಿ ಅರುವತ್ತಕ್ಕೂ ಹೆಚ್ಚು ಕೃತಿಗಳನ್ನು ಡಾ.ಕೆ.ಆರ್.ಸಂಧ್ಯಾ ರೆಡ್ಡಿಯವರು ರಚಿಸಿದ್ದಾರೆ. ಇವರ ಕಥೆ-ಕವಿತೆಗಳು ಹಿಂದಿ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.

ಕನ್ನಡ ಜನಪದ ಕಥೆಗಳನ್ನು ಕುರಿತ ಸಂಶೋಧನೆಗಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ.ಪದವಿ ಪಡೆದ ಇವರು ದಕ್ಷಿಣ ಭಾರತೀಯ ಜಾನಪದ ಸಂಘದ ಜಾನಪದ ಅಧ್ಯಯನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತೊಡಗಿಸಿಕೊಂಡವರು. ಜಿ.ಶಂ.ಪರಮಶಿವಯ್ಯ ಜಾನಪದ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ, ದೇ.ಜ.ಗೌ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳೊಂದಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯತ್ವ, ಕರ್ನಾಟಕ ಲೇಖಕಿಯರ ಸಂಘ ಅಧ್ಯಕ್ಷತೆ, ಹಲವು ನಿಘಂಟು ಯೋಜನೆಗಳ ಹೊಣೆಗಾರಿಕೆಯನ್ನು ನಿರ್ವಹಿಸದವರು.

5. ಜಿ.ಎನ್.ರಂಗನಾಥ ರಾವ್
ಪತ್ರಿಕಾ ಸಂಪಾದಕರಾಗಿ, ಬರಹಗಾರರಾಗಿ ಪ್ರಸಿದ್ಧರಾದ ಶ್ರೀ ಜಿ.ಎನ್.ರಂಗನಾಥ ರಾವ್‍ರವರು ಬೆಂಗಳೂರಿನ ಹಾರೋಹಳ್ಳಿಯವರು. ‘ತಾಯಿ ನಾಡು’ ಕನ್ನಡ ದಿನಪತ್ರಿಕೆಯಲ್ಲಿ ಅಧೀನ ಸಂಪಾದಕರಾಗಿ (Sub ಇಜiಣoಡಿ) ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ದುಡಿದು 1967ರಲ್ಲಿ ಪ್ರಜಾವಾಣಿ ದಿನಪತ್ರಿಕೆಯ ಸಹಸಂಪಾದಕರಾಗಿ ಸೇರಿಕೊಂಡರು. 33 ವರ್ಷಗಳಿಂದ ಪ್ರಜಾವಾಣಿ ಬಳಗದ ಪ್ರಮುಖ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದವರು. ಕನ್ನಡದ ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ಶ್ರೀಯುತರು ಕನ್ನಡ ಪತ್ರಿಕಾವಲಯದ ಪರಿವರ್ತನೆಗೆ ಕಾರಣರಾದವರು. ವಾಣಿಜ್ಯ ಪುರವಣಿ, ಕ್ರೀಡಾ ಪುರವಣಿ ಕರ್ನಾಟಕದರ್ಶನವೇ ಮೊದಲಾದ ಪುರವಣಿಗಳ ಮೂಲಕ ಪ್ರಜಾವಾಣಿ ಪತ್ರಿಕೆಯು ಇವರ ಮಾರ್ಗದರ್ಶನದಲ್ಲಿ ಹೊಸತನವನ್ನು ಕಾಣುವಂತಾಯಿತು ಹಾಗೂ ಜಿಲ್ಲಾ ಆವೃತ್ತಿಗಳನ್ನು ಹೊರತರುವಲ್ಲಿಯೂ ಇವರು ಯಶಸ್ವಿಯಾದರು. ಸುಧಾ ಮತ್ತು ಮಯೂರ ಪತ್ರಿಕೆಗಳ ಸಹಸಂಪಾದಕರಾಗಿ, ಕಸ್ತೂರಿ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿ ಪತ್ರಿಕೆಗಳ ಹೊಸತನಕ್ಕೆ ಕಾರಣರಾಗಿದ್ದಾರೆ.

6. ಅಕ್ಷರ ಕೆ.ವಿ.
ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಶ್ರೀ ಕೆ.ವಿ.ಅಕ್ಷರರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗಶಿಕ್ಷಣ ಪಡೆದು, ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾನಿಲಯದಿಂದ ರಂಗಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದವರು. ಹೆಗ್ಗೋಡಿನ ನಿನಾಸಂ ರಂಗಶಿಕ್ಷಣ ತರಬೇತಿಕೇಂದ್ರದ ನಿರ್ದೇಶಕರಾಗಿ, ತರಬೇತುದಾರರಾಗಿ ಹಾಗೂ ನಾಟಕ ನಿರ್ದೇಶಕರಾಗಿ ಪ್ರಖ್ಯಾತರು. ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯ ಮೂಲಕ ಕನ್ನಡ ಭಾಷೆಯ ಮೌಲಿಕ ಕೃತಿಗಳ ಪ್ರಕಟಣೆಯೂ ಇತರ ಆಸಕ್ತಿಗಳಲ್ಲಿ ಪ್ರಮುಖವಾದುದು. ನಾಟಕಕಾರರಾದ ಇವರ ಲೇಖನಿಯಿಂದ 5 ನಾಟಕ ಕೃತಿಗಳು ಮೂಡಿಬಂದಿವೆ. 50ಕ್ಕಿಂತಲೂ ಹೆಚ್ಚು ನಾಟಕಗಳನ್ನು ಇವರು ನಿರ್ದೇಶಿಸಿದ್ದಾರೆ. ರಂಗಭೂಮಿಗೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿರುವ ಇವರು ರಾಜ್ಯ, ದೇಶ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ್ದಾರೆ ಹಾಗೂ ಪ್ರಬಂಧ ಮಂಡಿಸಿದ್ದಾರೆ. ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಸ್ಕøತಿಗೆ ಸಂಬಂಧಿಸಿದ 30ಕ್ಕಿಂತಲೂ ಹೆಚ್ಚು ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

7. ಹರಿಣಿ
ಕನ್ನಡ ಬೆಳ್ಳಿ ತೆರೆಯ ಕಲಾಲೋಕದಲ್ಲಿ ತಮ್ಮ ಭಾವಪೂರ್ಣ ಅಭಿನಯದಿಂದ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದವರು. ಕನ್ನಡ ಚಲನಚಿತ್ರ ‘ಜಗನ್ಮೋಹಿನಿ’ಯಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಪ್ರಥಮ ನಟಿ ಎಂಬುದಾಗಿ ಗುರುತಿಸಿಕೊಂಡವರು. ಮೂಲತ: ಉಡುಪಿಯ ಪಣಿಯಾಡಿಯವರಾದ ಇವರು 30ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಂಗಳಗೌರಿ, ಕನ್ಯಾದಾನ, ಧರ್ಮವಿಜಯ, ರತ್ನಮಂಜರಿ, ನಂದಾದೀಪ, ಸತಿ ಸುಕನ್ಯಾ ಮುಂತಾದ ಸಿನಿಮಾಗಳಲ್ಲಿ ಇವರು ಮನಮೋಹಕವಾಗಿ ನಟಿಸಿ ಸಿನಿಮಾಸಕ್ತರ ಮನಸ್ಸಿನಲ್ಲಿ ಮನೆಮಾಡಿದವರು ಇವರು. ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡ ಹರಿಣಿಯವರು ನಿರ್ಮಿಸಿದ ‘ನಾಂದಿ’ ಚಿತ್ರವು ರಾಷ್ಟ್ರಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. ‘ನಮ್ಮ ಮಕ್ಕಳು’ ಚಿತ್ರಕ್ಕೆ ಫಿಲ್ಮ್‍ಫೇರ್ ಪ್ರಶಸ್ತಿಯೂ ಲಭಿಸಿದೆ.

8. ಶ್ರೀನಿವಾಸ ಕಪ್ಪಣ್ಣ
ಎಳವೆಯಲ್ಲೇ ರಂಗಕಲಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಜಾನಪದ ಹಾಗೂ ಶಾಸ್ತ್ರೀಯ ಪ್ರಕಾರಗಳೆರಡರಲ್ಲೂ ಸಮಾನ ಸಾಧನೆ ಮಾಡಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನೇರಿದವರು. ಬಿ.ವಿ.ಕಾರಂತ, ಚಂದ್ರಶೇಖರ ಕಂಬಾರ ಮೊದಲಾದವರೊಂದಿಗೆ ಸಹನಿರ್ದೇಶಕರಾಗಿ ಗುರುತಿಸಿ ಕೊಂಡವರು ಮಾತ್ರವಲ್ಲ 2000ಕ್ಕಿಂತಲೂ ಅಧಿಕ ಪ್ರದರ್ಶನಗಳಿಗೆ ರಂಗ ಬೆಳಕಿನ ವಿನ್ಯಾಸ ಮಾಡಿದ ಸಾಧಕರು. ಕಿರುತೆರೆಯ ನಟರಾಗಿ ನಾಡಿನಾದ್ಯಂತ ಪರಿಚಿತರಾಗಿರುವ ಕಪ್ಪಣ್ಣರು ಕನ್ನಡದ ಮನೆಮಾತಾಗಿದ್ದ ‘ಮುಕ್ತ,’ ಮುಕ್ತ-ಮುಕ್ತ, ಸಾಮವೇಧ ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯರಾದವರು. ‘ಜಾನಪದ ಜಾತ್ರೆ’ ಎಂಬ 5,800 ಕಲಾವಿದರನ್ನೊಳಗೊಂಡ ಅಪೂರ್ವ ಜಾನಪದ ಕಲಾ ಪ್ರದರ್ಶನವನ್ನು ಸಂಯೋಜಿಸಿ 7 ಲಕ್ಷಕ್ಕೂ ಅಧಿಕ ಪ್ರೇಕ್ಷಕರಿಗೆ ತಲುಪಿಸಿದ ಖ್ಯಾತಿ ಇವರದು. ಮೊದಲ ವಿಶ್ವಕನ್ನಡ ಸಮ್ಮೇಳನ (1965, ಮೈಸೂರು) ದ ಸಂಯೋಜನೆಯಲ್ಲಿಯೂ ಮಹತ್ವದ ಪಾತ್ರನಿರ್ವಹಿಸಿದವರು

9. ಸಂಪಾಜೆ ಶೀನಪ್ಪ ರೈ
ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಸಂಪಾಜೆ ಶೀನಪ್ಪ ರೈಯವರು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ತಂದೆಯ ಸಹಕಾರದೊಂದಿಗೆ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿ ಬಣ್ಣದ ಪ್ರಪಂಚಕ್ಕೆ ಹೊಸ ಮೆರುಗನ್ನು ಕೊಟ್ಟವರು. ಭರತನಾಟ್ಯ ಹಾಗೂ ಯಕ್ಷಗಾನ ನಾಟ್ಯದ ಪ್ರಾವೀಣ್ಯತೆಯೊಂದಿಗೆ ಸೋಮನಾಥೇಶ್ವರ, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಎಡನೀರು ಹಾಗೂ ಹೊಸನಗರ ಮೇಳಗಳಲ್ಲಿ ಒಟ್ಟು 59 ವರ್ಷಗಳ ಕಲಾಸೇವೆ ಗೈದ ಧೀಮಂತರು.

ದೇವೇಂದ್ರ, ಕರ್ಣ, ಅರ್ಜುನ, ಹಿರಣ್ಯಾಕ್ಷ, ದಕ್ಷ, ಇಂದ್ರಜಿತು, ಕಾರ್ತವೀರ್ಯ, ಭೀಮ, ವೀರಮಣಿ, ಶತ್ರುಘ್ನ ಮೊದಲಾದ ಪಾತ್ರಗಳಿಂದ ರಂಗಸ್ಥಳಕ್ಕೆ ಜೀವತುಂಬಿದ ಶ್ರೀಯುತರು, ಶ್ರೀ ಕಲ್ಲಡ್ಕ ಮಾಧವಶೆಟ್ಟಿ, ಸೂರಿಕುಮೇರು ಶ್ರೀ ಗೋವಿಂದ ಭಟ್, ಹಿರಿಯರಾದ ಅಗರಿ ಶ್ರೀನಿವಾಸ ಭಾಗವತ, ಇರಾ ಶ್ರೀ ಗೋಪಾಲಕೃಷ್ಣ ಭಾಗವತ ಹಾಗೂ ಶ್ರೀ ಬಲಿಪ ನಾರಾಯಣ ಭಾಗವತರ ಒಡನಾಡಿಗಳಾಗಿ ಕಲಾ ಸೇವೆಗೈದವರು.

10. ಜಬ್ಬಾರ್ ಸಮೊ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಶ್ರೀ ಜಬ್ಬಾರ್ ಸಮೊ ಅವರು ಎಳವೆಯಲ್ಲಿಯೇ ರಾಮಾಯಣ, ಮಹಾಭಾರತ ಹಾಗೂ ಪುರಾಣದ ಕಥೆಗಳ ಕುರಿತು ಕುತೂಹಲವನ್ನು, ಆಸಕ್ತಿಯನ್ನು ಬೆಳೆಸಿಕೊಂಡವರು. ಕಲ್ಲುಗುಂಡಿ, ಸಂಪಾಜೆ ಪರಿಸರದ ಯಕ್ಷಗಾನದ ವಾತಾವರಣ ಜಬ್ಬಾರ್ ಅವರನ್ನು ಯಕ್ಷಗಾನದತ್ತ ಮುಖಮಾಡುವಂತೆ ಮಾಡಿತು. ಬಣ್ಣದ ಮಾಲಿಂಗ, ಶೀನಪ್ಪ ರೈ ಮೊದಲಾದವರ ವೇಷ ಮತ್ತು ಮಾತುಗಾರಿಕೆಗಳಿಂದ ಪ್ರೇರೇಪಿತರಾಗಿ ಯಕ್ಷಗಾನ ಮತ್ತು ತಾಳಮದ್ದಲೆಯ ಮೇಲೆ ಆಸಕ್ತಿ–ಅಧ್ಯಯನದಲ್ಲಿ ತೊಡಗಿಸಿಕೊಂಡವರು. ಯಕ್ಷಗಾನ ಗುರು ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರ ಸಮರ್ಥ ಮಾರ್ಗದರ್ಶನದಲ್ಲಿ ಏರುಹಾದಿಯಲ್ಲಿ ಬೆಳೆದು ತಾಳಮದ್ದಲೆಯ ಬೇಡಿಕೆಯ ಕಲಾವಿದರಾಗಿ ಪ್ರಸಿದ್ಧರಾದವರು. ವಾಲಿ, ಕರ್ಣ, ಭೀಷ್ಮ, ಕೌರವ ಮುಂತಾದ ಪಾತ್ರಗಳನ್ನು ಹೊಸ ದೃಷ್ಟಿಯಿಂದ ರೂಪಿಸಿದವರು. ನಿರರ್ಗಳವೂ ಚಿಂತನಾಪೂರ್ಣವೂ ಆದ ಅರ್ಥಗಾರಿಕೆಗೆ ಹೆಸರಾದವರು ಇವರು.

11. ಎಚ್.ಆರ್.ಲೀಲಾವತಿ
ಕರ್ನಾಟಕ ಶಾಸ್ರೀಯ ಸಂಗೀತದಲ್ಲಿ ಅಪಾರ ಸಾಧನೆ ಮಾಡಿದ ಶ್ರೀಮತಿ ಎಚ್.ಆರ್.ಲೀಲಾವತಿಯವರು  ಮೈಸೂರು ಆಕಾಶವಾಣಿಯ ‘ಎ’ ದರ್ಜೆಯ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸಿದವರು.

ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಸ್ಕøತ, ಗುಜರಾತಿ, ಮ¯ಯಾಳಂ, ಹಿಂದಿ, ಬೆಂಗಾಲಿ, ಅಸ್ಸಾಮಿ, ತೆಲುಗು ಭಾಷೆಯ ಹಾಡುಗಳನ್ನು ಕರಗತ ಮಾಡಿಕೊಂಡು ತಮ್ಮ ಸ್ವರ ಮಾಧುರ್ಯದಿಂದ ಜನಮಾನಸದಲ್ಲಿ ಮನೆಮಾಡಿದವರು ಇವರು ಅಮೇರಿಕಾದ ಟ್ರೆಟನ್ ನಗರದಲ್ಲಿ 1983ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾರತದ ರಾಯಬಾರಿಯಾಗಿ ಭಾಗವಹಿಸಿ ಕನ್ನಡ ಭಾವಗೀತೆಗಳನ್ನು ಹಾಡಿದ ಖ್ಯಾತಿಗೆ ಪಾತ್ರರು. 1998ರಲ್ಲಿ ಅಮೇರಿಕಾದ ಫಿನಿಕ್ಸ್ ನಗರದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡ ಹಾಡುಗಳ ಮೂಲಕ ಅಪಾರ ಜನಸ್ತೋಮವನ್ನು ರಂಜಿಸಿದವರು. ಚಲನಚಿತ್ರಗಳಲ್ಲಿ, ಸಾಕ್ಷ್ಯ ಚಿತ್ರಗಳಲ್ಲಿ ಹಾಡಿರುವ ಇವರು ಸುಗಮ ಸಂಗೀತ ಕ್ಷೇತ್ರದಲ್ಲಿ ಮನೆಮಾತಾದವರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷತೆ, ದಕ್ಷಿಣ ಭಾರತ ಸಂಗೀತ ಅಕಾಡೆಮಿ, ಕೇಂದ್ರ ಸಂಗೀತ ಅಕಾಡೆಮಿ ಮೊದಲಾದ ಹಲವು ಸಂಸ್ಥೆಗಳ ಸದಸ್ಯತ್ವ ಪಡೆದವರು. ಮಧುಚಂದ್ರ ಎಂಬ ನಾಟಕ, ‘ನಿಸರ್ಗನಂದನ’ ಎಂಬ ರೂಪಕಗಳೂ ಇವರ ಲೇಖನಿಯಿಂದ ಮೂಡಿಬಂದಿವೆ.

12. ಡಾ. ದರ್ಬೆ ಚಂದ್ರಶೇಕರ ಚೌಟ (ಡಾ.ಡಿ.ಸಿ.ಚೌಟ)
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಮೀಯಪದವಿನವರಾದ ಡಿ.ಸಿ.ಚೌಟರು ಸಸ್ಯಶಾಸ್ತ್ರದಲ್ಲಿ ಇನ್ಸಿಟ್ಯೂಟ್ ಆಫ್ ಸಯನ್ಸ್, ಮುಂಬಯಿ ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್‍ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ತಳಿವಿಜ್ಞಾನದ ಕುರಿತು ಪಿಎಚ್‍ಡಿ ಪದವಿಯನ್ನು ಪಡೆದಿರುತ್ತಾರೆ. ಮುಂಬಯಿ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಸಯನ್ಸ್‍ನಲ್ಲಿ 1967 ರಿಂದ 1971ರವರೆಗೆ ಗೌರವ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಚೌಟರು 1971ರಿಂದ 1978ರವರೆಗೆ ಮೈಸೂರು ವಿ.ವಿಯ ಸ್ನಾತಕೋತ್ತರ ಕೇಂದ್ರವಾಗಿದ್ದ ಮಂಗಳಗಂಗೋತ್ರಿಯಲ್ಲಿ ಜೀವವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಕೃಷಿರಂಗಕ್ಕೆ ಧುಮುಕಿದವರು.

1978ರಿಂದ ತೋಟಗಾರಿಕೆ ಬೆಳೆಗಳಲ್ಲಿ ತೊಡಗಿಸಿಕೊಂಡ ಇವರು ನವೀನ ಪ್ರಯೋಗಗಳನ್ನು ಅಳವಡಿಸಿಕೊಂಡು ಯಶಸ್ಸುಕಂಡವರು. ಕರ್ನಾಟಕದಲ್ಲಿ ಮೊತ್ತ ಮೊದಲು ಸಿಹಿನೀರಿನ ಮೀನು ಸಾಕಣೆಯನ್ನು ಪರಿಚಯಿಸಿದವರು. ಕಾಸರಗೋಡಿನ ಮೀಯಪದವಿನ ವಿಶಾಲ ಕೃಷಿಭೂಮಿಯಲ್ಲಿ ತೆಂಗು, ವೆನಿಲ್ಲಾ, ಹಲಸು, ಬಾಳೆ, ಕೊಕ್ಕೊ ಹಾಗೂ ವಿವಿಧ ಬಗೆಯ ಹಣ್ಣು-ತರಕಾರಿಗಳನ್ನು ವೈಜ್ಞಾನಿಕವಾಗಿ ಬೆಳೆಸಿ ಯಶಸ್ಸುಕಂಡವರು. ಇವರು ರೂಪಿಸಿದ ‘ಚೌಟರ ತೋಟ’ವು ಕೃಷಿ-ತೋಟಗಾರಿಕೆಗೆ ಸಂಬಂಧಿಸಿ ಅಪೂರ್ವ ಮಾಹಿತಿ ಕೇಂದ್ರವಾಗಿ ಮನ್ನಣೆಪಡೆದಿದೆ. ಕೃಷಿಯನ್ನೇ ಕೇಂದ್ರವಾಗಿಟ್ಟು ಅಮೇರಿಕಾ, ಕೆನಡಾ ಮುಂತಾದ ಕಡೆ ಅಧ್ಯಯನ ಪ್ರವಾಸಗಳನ್ನು ಇವರು ಕೈಗೊಂಡಿದ್ದಾರೆ.

13. ಡಾ.ಜಿ.ಜ್ಞಾನಾನಂದ
ಪಾರಂಪರಿಕ ಶಿಲ್ಪಿ ಮನೆತನದವರಾದ ಜಿ.ಜ್ಞಾನಾನಂದರು ಸಂಖ್ಯಾಶಾಸ್ತ್ರದಲ್ಲಿ ಬಿ.ಎಸ್ಸಿ ಪದವೀಧರರಾಗಿ, ಎಂ.ಎ. ಡಿ.ಲಿಟ್, ಶೈಕ್ಷಣಿಕ ಸಾಧನೆಗಳನ್ನು ಗಳಿಸಿದವರು.

ಸಾಂಪ್ರಾದಾಯಿಕ ಶಿಲ್ಪಕ್ಕೆ ಕರ್ನಾಟಕದಲ್ಲಿ ಸೂಕ್ತ ಪಠ್ಯ ಗ್ರಂಥಗಳಾಗಲಿ, ಮೂಲ ಶಿಲ್ಪ ಶಾಸ್ತ್ರಗಳಾಗಲೀ ಇಲ್ಲದಿರುವಾಗ ಆ ಕೊರತೆಯನ್ನು ಶ್ರೀ ಕಾಶ್ಯಪ ಶಿಲ್ಪ ಶಾಸ್ತಂ್ರ, ಶ್ರೀ ಬ್ರಾಹ್ಮೀಯ ಚಿತ್ರಕರ್ಮ ಶಾಸ್ತ್ರಂ, ಪಾರಂಪರಿಕ ಶಿಲ್ಪ:ನೆಲೆ-ಹಿನ್ನಲೆ – ಮೊದಲಾದ ಅನೇಕ ಶಾಸ್ತ್ರ ಮತ್ತು ಪಠ್ಯ ಕೃತಿಗಳ ಮೂಲಕ ನೀಗಿದವರು. ಕನ್ನಡದಲ್ಲಿ ಶಿಲ್ಪ ಸಾಹಿತ್ಯ ರಚಿಸುವವರು ಡಾ.ಜಿ.ಜ್ಞಾನಾನಂದ ಅವರೊಬ್ಬರೇ. ಕರ್ನಾಟಕ ತಾಲಮಾನ ಕ್ರಮವನ್ನು ಅನುಸರಿಸುವ ಚಿತ್ರರಚನೆಯು ನಿಂತು ಹೋಗಿರುವುದನ್ನು ಗಮನಿಸಿ ಅದನ್ನು ಪುನ: ಸ್ಥಾಪಿಸಲು ‘ತಾಲಮಾನ ಚಿತ್ರರಚನಾ ಕಮ್ಮಟ’ಗಳನ್ನು ನಡೆಸಿದವರು. ಕರ್ನಾಟಕ ರಥಶಿಲ್ಪಿಗಳು ಕೇವಲ ಸಾಂಪ್ರಾದಾಯಿಕ ರಥ ನಿರ್ಮಾಣ ಮಾಡುವುದನ್ನು ಗಮನಿಸಿ ತಂಜಾವೂರು ಸರಸ್ವತಿ ಮಹಲ್ ಹಸ್ತ ಪ್ರತಿ ಲೈಬ್ರೆರಿಯಿಂದ ‘ವಿಶ್ವಕರ್ಮೀಯ ರಥಲಕ್ಷಣ ಶಿಲ್ಪಶಾಸ್ತ್ರ’ ಹಸ್ತಪ್ರತಿಯ ಪ್ರತಿ ತೆಗೆದು ತಾತ್ಪರ್ಯ ಬರೆದು ಪ್ರಕಟಿಸಿದವರು. ತಾಮ್ರದ ತಗಡುಗಳಲ್ಲಿ ಬಹುಪಾಲು ಕವಚಗಳು, ಬಾಗಿಲುವಾಡಗಳು, ಮುಖವಾಡಗಳ ತಯಾರಿಕೆಗೆ ಸೀಮಿತಗೊಂಡಿರುವ ಪ್ರತಿಮಾಶಿಲ್ಪವನ್ನು ಕಥನಮಾಲಿಕೆಯ ಪಟಗಳ ತಯಾರಿಕೆಯ ಮೂಲಕ ಉಬ್ಬು ಕೆತ್ತನೆಯ ಶಿಲ್ಪಕ್ಕೆ ಹೊಸ ಆಯಾಮವನ್ನು ನೀಡಿದವರು.

ಸಂಶೋಧನೆ, ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಡಾ.ಜಿ.ಜ್ಞಾನಾನಂದ ಅವರು ಮಕ್ಕಳ ಸಾಹಿತ್ಯ, ಮಕ್ಕಳಿಗಾಗಿ ವಿಜ್ಞಾನ, ಜನಪ್ರಿಯ ವಿಜ್ಞಾನ ಸಾಹಿತ್ಯ, ಸೃಜನಶೀಲ ಸಾಹಿತ್ಯ, ಅನುವಾದ ಸಾಹಿತ್ಯವೇ ಮೊದಲಾದ ಕ್ಷೇತ್ರಗಳಲ್ಲಿ 110 ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ಮೂರು ವರ್ಷಗಳ ಒಂದು ಅವಧಿ, ಒಂದು ವರ್ಷದ ಹೆಚ್ಚುವರಿ ಅವಧಿ ಹಾಗೂ ಈಗಾಗಲೇ ಮರು ಅವಧಿಗೆ ಆಯ್ಕೆಗೊಂಡ ಸ್ಥಪತಿ ಡಾ.ಜಿ.ಜ್ಞಾನಾನಂದರು ದಾಖಲೆ ನಿರ್ಮಿಸಿದವರು.

ನವೆಂಬರ್ 20, ಭಾನುವಾರ ಅಪರಾಹ್ನ 4.00 ರಿಂದ ಆಳ್ವಾಸ್ ನುಡಿಸಿರಿ 2016ರ ಸಮಾರೋಪ ಸಮಾರಂಭವು ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕøತರನ್ನು ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಮ್ಮೇಳನದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದೇವೆ. ಆಳ್ವಾಸ್ ಕೃಷಿಸಿರಿ, ಚಿತ್ರಸಿರಿ, ಛಾಯಾಚಿತ್ರಸಿರಿ, ವಿದ್ಯಾರ್ಥಿಸಿರಿ, ಸಿನಿಸಿರಿ ಕಾರ್ಯಕ್ರಮಗಳೊಂದಿಗೆ ಫಲಪುಪ್ಪ ಪ್ರದರ್ಶನ, ಮತ್ಸ್ಯ ಪ್ರದರ್ಶನಗಳು ನಡೆಯಲಿದ್ದು ಸಮ್ಮೇಳನದ ಭಾಗಿಗಳಿಗೆ ಭರಪೂರ ಮನರಂಜನೆಯನ್ನು ಒದಿಗಿಸಲಿವೆ. ವಿದ್ಯಾರ್ಥಿಪ್ರತಿನಿಧಿಗಳಿಗೆ ಸಂಪೂರ್ಣ ಉಚಿತ ಹಾಗೂ ಇತರ ಪ್ರತಿನಿಧಿಗಳಿಗೆ ರೂ.100/- ಪ್ರತಿನಿಧಿ ಶುಲ್ಕದೊಂದಿಗೆ ವಸತಿ-ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಈ ಸಮ್ಮೇಳನವನ್ನು ಅವಿಸ್ಮರಣೀಯಗೊಳಿಸಬೇಕೆಂದು ಆತ್ಮೀಯವಾಗಿ ವಿನಂತಿಸಿಕೊಳ್ಳುತ್ತೇನೆ.

Leave a Reply