ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಿರೂರು: ಶಿರೂರು ಪೇಟೆಯ ನಿವಾಸಿ ದಲಿತ ಮುಖಂಡ ದಿನೇಶ್ ಕುಮಾರ್ ಅವರ ಮನೆಯಲ್ಲಿ ಜಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಡಾ. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ, ಸಾಮಾಜಿಕ ಸಾಮರಸ್ಯ ದಿನ ಹಾಗೂ ಸಹಭೋಜನ ನಡೆಯಿತು.
ಗೋಪಾಲಕೃಷ್ಣ ಶಿರೂರು ಮಾತನಾಡಿ, ನಮ್ಮ ದೇಶಕ್ಕೆ ವಿಶ್ವವೇ ಮೆಚ್ಚುವ ರೀತಿಯಲ್ಲಿ ಅಸಾಮಾನ್ಯ ದೂರದೃಷ್ಠಿತ್ವದಿಂದ ಕಾನೂನಾತ್ಮಕ ಚೌಕಟ್ಟಿನಿಂದ ಕೂಡಿದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿವರೆಗೂ ತಲುಪಿಸಿ ಜನಜಾಗೃತಿ ಮೂಡಿಸಬೇಕು. ಅಸಮಾನತೆಗಾಗಿ ಸಮರ ಸಾಧಿಸದೇ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ತೊಡಗಿಸಿಕೊಂಡ ಅಂಬೇಡ್ಕರ್ ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲಾ ವರ್ಗದವರಿಗೂ ಮಾದರಿಯಾಗಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ವಿಕಟನೆಯಿಂದ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯಗಳಿದ್ದರೂ ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಬಾಳಬೇಕು ಸಾಮಾಜಿಕ ಸಾಮರಸ್ಯವೇ ನಮ್ಮ ಜೀವವಾಗಿರಬೇಕು ಎಂದರು.
ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದುಹೋಗಿದೆ. ಈಗಿನ ಕಾಲ ಬದಲಾಗಿದ್ದು, ಸಮಾಜದಲ್ಲಿ ಹಿಂದೆ ಇದ್ದ ಸ್ಥಿತಿ ಈಗ ಬಹಳಷ್ಟು ಸುಧಾರಣೆಯಾಗಿದೆ. ಜಾತಿಭೇದ, ಅಶ್ಪರ್ಶತೆ ಇಲ್ಲ. ಎಲ್ಲರಲ್ಲಿಯೂ ಸಹೋದರ ಭಾವನೆ, ಎಲ್ಲ ಕಡೆಗಳಲ್ಲಿ ನಡೆಯುವ ಸಹಭೋಜನ, ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳಿಂದ ಬಲಿಷ್ಟ ಸಮಾಜ ನಿರ್ಮಾಣವಾಗಿ ನಾವೆಲ್ಲ ಹಿಂದು ನಾವೆಲ್ಲ ಒಂದು ಎನ್ನುವ ಮಾತು ಸಾಬೀತಾಗಿದೆ ಎಂದ ಅವರು ಜಿಲ್ಲಾ ಗಡಿಭಾಗದಿಂದ ಪ್ರಾರಂಭವಾದ ಸಹಭೋಜನ ಜಿಲ್ಲೆಯಾದ್ಯಂತ ಪಸರಿಸಿ ಹಿಂದುಳಿದ ಹಾಗೂ ದಲಿತ ವರ್ಗದ ಜನರು ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಹಾರೈಸಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಎಲ್ಲಾ ಆಮಂತ್ರಿತರು ಪುಷ್ಪಾರ್ಚನೆಗೈದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲ ಕೆ. ಶೆಟ್ಟಿ, ಸದಸ್ಯರಾದ ಸುರೇಶ ಬಟ್ವಾಡಿ, ಶಂಕರ ಪೂಜಾರಿ, ಕೆ. ಬಾಬು ಶೆಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ರಾಘವೇಂದ್ರ ಕಾಂಚನ್, ಜ್ಯೋತಿ ಹರೀಶ್, ಶೋಭಾ ಪುತ್ರನ್, ಲಕ್ಷ್ಮೀ ಮಂಜು ಬಿಲ್ಲವ, ರೇಷ್ಮಾ ಉದಯ ಶೆಟ್ಟಿ, ತಾರಾನಾಥ ಶೆಟ್ಟಿ,, ಸುಪ್ರಿತಾ ಕುಲಾಲ್, ಶಶಿಕಾಂತ್ ಪಡುಬಿದ್ರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ದೀಪಕ್‌ಕುಮಾರ್ ಶೆಟ್ಟಿ, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಸದಸ್ಯರು, ಜಿಲ್ಲಾ ಬಿಜೆಪಿ ವಿವಿಧ ಸಮಿತಿಯ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಹಿಳಾ ಮುಖಂಡರು, ಪಕ್ಷದ ಕಾರ್ಯಕರ್ತರು ಜೊತೆಯಾಗಿ ಸಹಭೋಜನ ಸ್ವೀಕರಿಸಿ ಸಂಭ್ರಮಿಸಿದರು.