ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತಾಲೂಕಿನ ಗ್ರಾಮೀಣ ಭಾಗವಾದ ಆನಗಳ್ಳಿಯಲ್ಲಿ ಸದ್ದಿಲ್ಲದೆ ಬೆಳೆಯುತ್ತಿರುವ ಯುವ ಪ್ರತಿಭೆಯೊಬ್ಬರು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವುದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಕಾಲೇಜಿನಿಂದ ಆರಂಭವಾದ ಪವರ್ ಲಿಫ್ಪಿಂಗ್ ಎನ್ನುವ ಕ್ರೀಡಾಸಕ್ತಿಯ ಪಯಣ ಇದೀಗ ಅಂತರಾಷ್ಟ್ರೀಯ ಮಟ್ಟದವರೆಗೂ ಬೆಳೆದು ನಿಂತಿರುವ ಬಗ್ಗೆ ಈ ಯುವಕನಲ್ಲಿ ಹೆಮ್ಮೆ ಇದೆ.
ಸದ್ಯದಲ್ಲಿಯೇ ಜಮ್‌ಶೆಡ್‌ಪುರದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಬಸ್ರೂರಿನ ಶಾರದಾ ಕಾಲೇಜಿನ ಜಾಕ್ಸನ್ ಡಿಸೋಜಾ ಇದೀಗ ರಾಜ್ಯದ ಪವರ್ ಲಿಫ್ಟಿಂಗ್ ಸ್ಪರ್ಧಿಗಳ ಪೈಕಿ, ಪದಕ ಗೆಲ್ಲುವ ಭರವಸೆಯ ಕುದರೆ.
ಆನಗಳ್ಳಿ ಜೋಸೆಫ್ ಡಿಸೋಜಾ ಹಾಗೂ ಕಾಮೀನ್ ಡಿಸೋಜಾ ದಂಪತಿಗಳ ಕಿರಿಯ ಪುತ್ರ ಜಕ್ಸನ್‌ಗೆ ಕಾಲೇಜು ದಿನಗಳಿಂದಲೂ ಬದುಕಿನಲ್ಲಿ ಏನಾದರು ಸಾಧಿಸಬೇಕು ಎನ್ನುವ ಹಂಬಲ, ಇದಕ್ಕಾಗಿ ಡಾ.ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೆ ’ಪವರ್ ಲಿಫ್ಟಿಂಗ್’ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಪ್ರಾರಂಭದ ದಿನಗಳಲ್ಲಿಯೇ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡ ಅವರು ತನ್ನ ಕ್ರೀಡಾ ಕ್ಷೇತ್ರದ ಉಜ್ವಲ ಭವಿಷ್ಯಕ್ಕಾಗಿ ಬಸ್ರೂರಿನ ಶಾರಾದ ಕಾಲೇಜಿಗೆ ಸೇರ್ಪಡೆಯಾದರು.
ಅಲ್ಲಿಯೂ ತನ್ನ ಕ್ರೀಡಾ ಪಯಣವನ್ನು ಮುಂದುವರೆಸಿದ್ದ ಜಕ್ಸ್‌ನ್‌ಗೆ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕಗಳು ಅವರನ್ನು ಹುಡುಕಿಕೊಂಡು ಬಂದವು. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳ ಮೇಲೆ, ಪದಕಗಳನ್ನು ಗೆದ್ದು ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ ಆದರೆ ಪದಕ ಗ್ಯಾರೆಂಟಿ ಎನ್ನುವಷ್ಟರ ಮಟ್ಟಿಗೆ ಅನ್ವರ್ಥಕವಾಗಿ ಬೆಳೆದು ನಿಂತಿದ್ದಾರೆ.
ಸಾಧನೆಯ ಶಿಖರದಲ್ಲಿ ಜಕ್ಸನ್ :
2014 ರಲ್ಲಿ ಉಡುಪಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ.2014 ರಲ್ಲಿ ಮಂಗಳೂರಿನ ಕೂಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ. 2016 ರಲ್ಲಿ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ. 2016 ರಲ್ಲಿ ಉಡುಪಿಯ ಅಜ್ಜರಕಾಡು ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ.2015 ರಲ್ಲಿ ಕುಂದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ. 2016 ರಲ್ಲಿ ಸುರತ್ಕಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ.2016 ರಲ್ಲಿ ವಿಟ್ಲದಲ್ಲಿ ನಡೆದ ರಾಜ್ಯ ಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ. 2016 ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ 74 ಕೆ.ಜಿ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ. ಆಂದ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗೆ ಮಂಗಳೂರು ವಿಶ್ವವಿದ್ಯಾಲಯ ತಂಡದಿಂದ ಆಯ್ಕೆ. 4 ಬಾರಿ ಕರ್ನಾಟಕ ರಾಜ್ಯ ತಂಡದಿಂದ ಆಯ್ಕೆ. ಕಪರ್ತುಲ್ಲಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 4ನೇ ಸ್ಥಾನ. 2015 ರಲ್ಲಿ ಪಂಜಾಬ್‌ನ 2016 ರಲ್ಲೆ ಜೆಮ್‌ಶೆಡ್‌ಪುರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕಗಳನ್ನು ಪಡೆದುಕೊಂಡಿರುವ ಜಕ್ಸನ್ ಅವರ ಪದಕಗಳ ಪಟ್ಟಿಯಲ್ಲಿ ಇನ್ನೂ ಹಲವು ಸ್ಪರ್ಧಾ ಪದಕಗಳಿವೆ.
ಅಂತರಾಷ್ಟ್ರೀಯ ಸ್ಪರ್ಧೆ
ಡಿ.26 ರಿಂದ ಡಿ.30 ರ ವರೆಗೆ ಜಮ್‌ಶೆಡ್‌ಪುರದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಗ್ರಾಮೀಣ ಪ್ರತಿಭೆಗೆ ಸೂಕ್ತವಾದ ಪ್ರೋತ್ಸಾಹದ ಅಗತ್ಯೆ ಇದೆ. ಮಧ್ಯಮ ಕುಟುಂಬದ ಜಕ್ಸನ್ ಗೆ ಹೆತ್ತವರ ಹಾಗೂ ಸಹೋದರ ಜೊಯ್‌ಸನ್ ಡಿಸೋಜಾ ಅವರ ಬೆಂಬಲ, ಕಾಲೇಜಿನವರ ಪ್ರೋತ್ಸಾಹ ಹಾಗೂ ತರಬೇತುದಾರ ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ನ ಸತೀಶ್ ಖಾರ್ವಿ ಅವರ ಮಾರ್ಗದರ್ಶನಗಳೆ ಶ್ರೀರಕ್ಷೆಯಾಗಿದೆ.