ಮುಂಬಯಿ: ದಾಯ್ಜಿವರ್ಲ್ಡ್, ಕೆಮ್ಮಣ್ಣು, ಕೆನರ ನ್ಯೂಸ್ ಡಾಟ್ ಕಾಂ ಇದರ ಮಹಾರಾಷ್ಟ್ರದ ಬ್ಯೂರೊ ಚೀಫ್, ಸುದ್ದಿ ಸಂಪಾದಕರಾಗಿ ಸೇವೆಸಲ್ಲಿಸುತ್ತಿರುವ ರೋನ್ಸ್ ಬಂಟ್ವಾಳ್ ಅವರಿಗೆ “ಕರ್ನಾಟಕ ರಾಜ್ಯ ಮಾಧ್ಯಮ’ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ನಗರ ಹಾಗೂ ನಾಡಿನ ಪ್ರಸಿದ್ಧ ಪತ್ರಿಕೆಗಳು ಸೇರಿದಂತೆ ಹತ್ತಾರು ಕನ್ನಡ-ಕೊಂಕಣಿ ವಾರಪತ್ರಿಕೆಗಳು,ಇಂಗ್ಲಿಷ್ ಸಾಪ್ತಾಹಿಕಗಳು, ಪಾಕ್ಷಿಕ ಮತ್ತು ಅನೇಕ ಮಾಸಿಕಗಳ ಅಧಿಕೃತ ವರದಿಗಾರರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ತೊಡಗಿಸಿಕೊಂಡು ಯಶಸ್ವಿ ಪತ್ರಿಕೋದ್ಯಮಿಯಾಗಿರುವ ಅವರು ಸಿವಿಲ್ ಎಂಜಿನಿಯರ್ ಪದವೀಧರರಾಗಿ ಉದ್ಯೋಗದ ನಿಮಿತ್ತ ಮುಂಬಯಿಗೆ ಆಗಮಿಸಿ ವ್ಯಂಗ್ಯಚಿತ್ರ ಕಲಾಕಾರರಾಗಿ ಪತ್ರಿಕಾರಂಗಕ್ಕೆ ಪ್ರವೇಶಿಸಿದ್ದರು.
ರಾಕೊ ಕೊಂಕಣಿ ವಾರಪತ್ರಿಕೆಯ ಮೂಲಕ ಮುಂಬಯಿಯಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಅವರು ಕ್ರಮೇಣ “ಜನವಾಹಿನಿ’ ಕನ್ನಡ ದೈನಿಕ ಮುಂಬಯಿ ಮುಖ್ಯಸ್ಥರಾಗಿದ್ದರು. ಅನಂತರ ಉದಯವಾಣಿ, ತರಂಗ, ರೂಪತಾರ ಮುಂತಾದ ಪತ್ರಿಕೆಗಳಲ್ಲಿ ಸತತ ಆರುವರೆ ವರ್ಷಗಳ ಗಣನೀಯ ಸೇವೆಸಲ್ಲಿಸಿದ್ದಾರೆ.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕ ಗೌ|ಪ್ರ| ಕಾರ್ಯದರ್ಶಿಯಾಗಿ ಪತ್ರಕರ್ತ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ 3 ವರ್ಷಗಳಿಂದ ತನ್ನ ಸಂಪಾದಕತ್ವದಲ್ಲಿ ಪತ್ರಕರ್ತರ “ಡೈರಿ-ಡಿರೆಕ್ಟರಿ’ಯನ್ನು ಪ್ರಕಟಿಸಿದ್ದಾರೆ.
ಅಲ್ಲದೆ ಸಾಂತಾಕ್ರೂಜ್ ವಿಮಾನ ನಿಲ್ದಾಣದ ಸಮೀಪದಲ್ಲಿ ತನ್ನ ದೂರದೃಷ್ಟಿಯಲ್ಲಿ ಸುಮಾರು ಮೂರು ಕೋ. ರೂ. ವೆಚ್ಚದಲ್ಲಿ ಪತ್ರಕರ್ತರ ಭವನ ರೂಪಿಸುವ ತಯಾರಿಯಲ್ಲಿರುವ ರೋನ್ಸ್ ಮಹಾನಗರದ 30ಕ್ಕೂ ಅಧಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಸಾಧನೆಗಳಿಗೆ “ಕೊಂಕಣಿ ಎಕ್ಸಲೆಂಟ್ ಅವಾರ್ಡ್’, “ದಿವೋ ಕೊಂಕಣಿ ಸಾಹಿತ್ಯಪುರಸ್ಕಾರ-2007′, “ಪರಿವರ್ತನ ಪತ್ರಕರ್ತ ಪುರಸ್ಕಾರ’ಅಂತಾರಾಷ್ಟ್ರೀಯ ಪುರಸ್ಕಾರ, ವಿಶ್ವ ಕನ್ನಡಿಗ ಪುರಸ್ಕಾರ,”ಸಾಧಕ ಪತ್ರಕರ್ತ’ ಇನ್ನಿತರ ಹಲವಾರು ಪ್ರಶಸ್ತಿ,ಸಮ್ಮಾನಗಳು ಲಭಿಸಿವೆ