ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಸವದ ರಜೆಯ ಮೇಲೆ ತೆರಳಿದ್ದ ಕುಂದಾಪುರ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸೌಮ್ಯಾ ಹೆರಿಕುದ್ರು ಅವರನ್ನು ಗೈರು ಹಾಜರಿಯ ಕಾರಣಕ್ಕೆ ಸೇವೆಯಿಂದ ಅಮಾನತುಗೊಳಿಸಿದ ಘಟನೆ ನಡೆದಿದ್ದು, ತನಗೆ ನ್ಯಾಯ ಒದಗಿಸಿಕೊಡುವಂತೆ ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿದ್ದಾರೆ.
ಘಟನೆಯ ವಿವರ:
ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜುಲೈ 2016ರರಿಂದ 11 ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೌಮ್ಯ, ಏಳು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಜನವರಿ 31ರಂದು ಅವರಿಗೆ ಪೂರ್ವ ಪ್ರಸವ ವೇದನೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆ.6ರಂದು ಸಿಸೆರಿಯನ್ ಮೂಲಕ ಮಗುವಿಗೆ ಜನನ ನೀಡಿದ್ದರು. ಅವಧಿಪೂರ್ವ ಪ್ರಸವವಾಗಿದ್ದ ಕಾರಣ ಮಾಚ್ 2ರ ವರೆಗೂ ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಈತನ್ಮಧ್ಯೆ ಪತ್ನಿಯ ಅನಾರೋಗ್ಯದ ಬಗ್ಗೆ ಒಂದು ವಾರದ ಬಳಿಕ ಕಾಲೇಜು ಪ್ರಾಂಶುಪಾಲರಿಗೆ ದೂರವಾಣಿಯ ಮೂಲಕ ಅವರ ಪತಿ ಪ್ರದೀಪ್ ಶೆಟ್ಟಿ ಅವರು ತಿಳಿಸಿದ್ದರೆನ್ನಲಾಗಿದೆ. ಕಾಲೇಜಿನ ಕ್ಲರ್ಕ್ ಮೂಲಕ ಲಿಖಿತ ಮನವಿಯನ್ನೂ ಕಳುಹಿಸಿಕೊಟ್ಟಿದ್ದೇವೆ ಎಂದು ಪ್ರದೀಪ್ ಎಂದು ಹೇಳಿಕೊಂಡಿದ್ದಾರೆ. ಇಷ್ಟಾಗಿಯೂ ಕಾಲೇಜು ಮನವೀಯತೆ ಮರೆತು ಏಕಪಕ್ಷೀಯ ನಿರ್ಣಯ ಕೈಗೊಂಡಿದೆ, ಇದು 2016 ಹೆರಿಗೆ ರಜೆ ಕಾಯ್ದೆಯ ಹಾಗೂ 2014ರಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ಆದೇಶದ ಉಲ್ಲಂಘನೆ ಎಂದು ಅವರು ದೂರಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ನೋಡಬೇಕಾದ ಪ್ರಕರಣವನ್ನು ತಾಂತ್ರಿಕ ಅಂಶಗಳ ಆಧಾರದ ಮೇಲೆ ನೋಡುವುದು ಸರಿಯಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಈಗಾಗಲೇ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿ ನ್ಯಾಯ ಒದಗಿಸುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪ್ರಾಂಶುಪಾಲರು ಹೇಳುವುದೇನು?
ಉಪನ್ಯಾಸಕಿ ಸೌಮ್ಯ ಅವರು 50 ದಿನಗಳ ತನಕ ಕರ್ತವ್ಯಕ್ಕೆ ಗೈರಾಗಿದ್ದು ಈವರೆಗೂ ಲಿಕಿತವಾಗಿ ಮಾಹಿತಿ ನೀಡಿಲ್ಲ. ಅವರಿಂದ ಲಿಕಿತ ಪತ್ರ ಬರಬಹುದು ಎಂದು 50 ದಿನಗಳ ವರೆಗೂ ಕಾದಿದ್ದೇವು. ಕಾಲೇಜಿಗೆ ಯಾವುದೇ ಬಗೆಯಲ್ಲಿ ಅಧಿಕೃತ ಮಾಹಿತಿ ತಲುಪಿಲ್ಲ. ಆ ಬಳಿಕವಷ್ಟೇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶನದಂತೆ ಅನಧಿಕೃತ ಗೈರನ್ನು ಅವರು ಮುಂದೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪರಿಗಣಿಸಿ ಸೇವೆಯಿಂದ ವಜಾಗೊಳಿಸಲಾಗಿದೆ. ಈವರೆಗೆ ಕಾಲೇಜಿನಲ್ಲಿ ಹೆರಿಗೆ ರಜೆಯನ್ನೂ ಯಾರೋಬ್ಬರಿಗೂ ನಿರಾಕರಿಸಿಲ್ಲ. ವೇತನ ಸಹಿತ ರಜೆಯನ್ನೇ ನೀಡಲಾಗುತ್ತಿದೆ. ಆದರೆ 50 ದಿನಗಳ ವರೆಗೂ ಗೈರಾಗಿರುವ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರಿಂದ ಆಡಳಿತ ಮಂಡಳಿಯ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ನಾರಾಯಣ ಶೆಟ್ಟಿ ‘ಕುಂದಾಪ್ರ ಡಾಟ್ ಕಾಂ’ಗೆ ತಿಳಿಸಿದ್ದಾರೆ.










