ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಸಮಾಜದಲ್ಲಿ ನಡೆಯುವ ಕೆಲವೊಂದು ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಬಂಧ ವಾತಾರವರಣ ನಿರ್ಮಾಣವಾದರೆ ಅಪರಾಧ ಚಟುವಟಿಕೆಗಳು ಕಡಿಮೆಯಾಗಲಿದೆ. ಹೀಗಾಗಿ ಸರಕಾರ ಹೊಸ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಇದು ಸಹಕಾರಿಯಾಗಲಿದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಅಭಿಪ್ರಾಯಪಟ್ಟರು.
ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ವತಿಯಿಂದ ಜರುಗಿದ ನಾಗರಿಕರ ಸಭೆಯಲ್ಲಿ ಮಾತನಾಡಿದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ನೂತನ ಬೀಟ್ ವ್ಯವಸ್ಥೆಯ ಬಗ್ಗೆ ಹಾಗೂ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಗಳ ಮಾಹಿತಿ ಫಲಕವನ್ನು ಆಯ್ದ ಸ್ಥಳಗಳಲ್ಲಿ ಅಳವಡಿಸಬೇಕು. ಕೆಲವೊಂದು ಕಡೆಗಳಲ್ಲಿ ಪೊಲೀಸರು ಗುಪ್ತವಾಗಿ ಸಂಚರಿಸುತ್ತಿರಬೇಕು. ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ಸಂಚರಿಸುವ ಅಧಿಕ ಭಾರದ ಮತ್ತು ಅಪಾಯಕಾರಿಯಾಗಿ ಸಂಚರಿಸುತ್ತಿರುವ ಶಿಲೆಕಲ್ಲುಗಳ ಲಾರಿಗಳನ್ನು ನಿಯಂತ್ರಿಸಬೇಕು. ಬಸ್ಸುಗಳಲ್ಲಿ ಅತಿ ಹೆಚ್ಚು ಮಕ್ಕಳನ್ನು ಸಾಗಿಸುತ್ತಿರುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಗಂಗೊಳ್ಳಿ ಮುಖ್ಯರಸ್ತೆಯ ಬಸ್ ನಿಲ್ದಾಣಗಳ ಸಮೀಪ ಬಸ್ಸುಗಳು ಸರಿಯಾದ ರೀತಿಯಲ್ಲಿ ನಿಲುಗಡೆಗೆ ಕ್ರಮಕೈಗೊಳ್ಳಬೇಕು. ಗಂಗೊಳ್ಳಿ ಮುಖ್ಯರಸ್ತೆಯಿಂದ ಬಂದರು ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದರು.
ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಗ್ರಾಪಂ ಮಾಜಿ ಸದಸ್ಯರಾದ ಯೂನಿಸ್ ಸಾಹೇಬ್, ಉಮಾನಾಥ ದೇವಾಡಿಗ, ಬಿ.ರಾಘವೇಂದ್ರ ಪೈ, ಉದ್ಯಮಿ ಜಿ.ವೆಂಕಟೇಶ ನಾಯಕ್, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೋಹನ ಖಾರ್ವಿ, ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಸುಂದರ ಜಿ., ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಮೊದಲಾದವರು ಸಲಹೆ ಸೂಚನೆ ನೀಡಿದರು. ಗಂಗೊಳ್ಳಿ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವೆಂಕಟೇಶ ಗೊಲ್ಲ, ಸಿಬ್ಬಂದಿಗಳಾದ ನರಸಿಂಹ, ಸಂಪತ್‌ಕುಮಾರ್, ಆಲಿಂಗರಾಯ ಕಾಟೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಠಾಣೆಯ ಸಿಬ್ಬಂದಿ ಚಂದ್ರಶೇಖರ ಸ್ವಾಗತಿಸಿದರು. ಹೆಡ್ ಕಾನ್‌ಸ್ಟೇಬಲ್ ಆನಂದ ವಂದಿಸಿದರು.