ಪ್ರಕಾಶನ ಎದ್ದು ನಿಲ್ಲಬೇಕಾದರೆ ಒಳ್ಳೆಯ ಲೇಖಕ ಬೇಕು: ಜೋಗಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಯುವ ಸಾಹಿತಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ದುಬೈ ಪ್ರವಾಸಕಥನ ’ಕಿಂಗ್ ಕ್ಲೀನ್’ ಕೃತಿ ನಗರದ ಕನ್ನಡ ಸಾಹಿತ್ಯ ಪರಿಷತ್ ವೇದಿಕೆಯಲ್ಲಿ ಶನಿವಾರ ಸಂಜೆ ಲೋಕಾರ್ಪಣೆಗೊಂಡಿತು. ಇದೇ ಸಂದರ್ಭ ಸಂದೀಪ್‌ರವರ ಅಕ್ಷರ ಪ್ರೀತಿಯ ದ್ಯೋತಕವಾಗಿ ’ಹೆಗ್ಗದ್ದೆ ಪ್ರಕಾಶನ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಲೋಕಾರ್ಪಿಸಲಾಯಿತು.

Call us

Click Here

ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಪತ್ರಕರ್ತ ಜೋಗಿ, ಇಂದಿನ ಆಧುನಿಕತೆಯ ಓಡಾಟದಲ್ಲಿ ಎಲ್ಲವನ್ನು ಬಿಟ್ಟು ಸಂದೀಪ ಸಾಹಿತ್ಯ ಬದುಕನ್ನು ಆರಿಸಿಕೊಂಡಿರುವುದು ಅಭಿನಂದಿಸಬೇಕಾದ ವಿಚಾರ, ಬಹಳ ಸಣ್ಣ ವಯಸ್ಸಿನಲ್ಲೇ ಪ್ರಕಾಶನವನ್ನು ಲೋಕಾರ್ಪಿಸಿರುವುದು ಬರವಣಿಗೆಗಾರರಿಗೆ ಸದಾವಕಾಶವಾಗಿದೆ, ಇಲ್ಲಿ ಹಣ ಹೂಡಿ, ಹಣ ತೆಗೆಯಬೇಕು. ಬಹಳ ಒಳ್ಳೆಯ ಪುಸ್ತಕಗಳನ್ನು ಸಮಾಜಕ್ಕೆ ನೀಡುವ, ಹೊರತರುವ ಅಭಿಲಾಷೆಯೂ ಪ್ರಕಾಶಕರಿಗಿರಬೇಕು, ಒಂದು ಪ್ರಕಾಶನ ಎದ್ದು ನಿಲ್ಲಬೇಕಾದರೆ ಪ್ರತಿಯೊಂದು ಪ್ರಕಾಶನಕ್ಕೂ ಒಬ್ಬೊಬ್ಬ ಒಳ್ಳೆಯ ಲೇಖಕ ಬೇಕು, ಆ ಲೇಖಕ ಅನುಭವವನ್ನು ಕಾಪಿಟ್ಟುಕೊಂಡು ಅಚ್ಚರಿಯ ಮೂಟೆಯಂತಿರಬೇಕು. ವ್ಯಕ್ತಿ ವಿಶಿಷ್ಟವಾದ ಸಮಸ್ಯೆ, ವ್ಯಕ್ತಿ ವಿಶಿಷ್ಟವಾದ ಪ್ರತಿಭೆ ಪ್ರಕಾಶನ ಸಂಸ್ಥೆಗೆ ತಾಕಿದರೆ ಅದರಲ್ಲಿ ಆಗುವ ಬದಲಾವಣೆಯೇ ಬೇರೆ, ಕಲೆಗೆ ಬೇಕಾಗಿರುವುದು ಧ್ಯಾನಸ್ಥ ಸ್ಥಿತಿ ಅದು ಸಂದೀಪರಿಗಿದೆ ಅವರ ಗುರಿ ಮತ್ತು ದಾರಿ ಸ್ಫಷ್ಟವಾಗಿರಲಿ ಯುವಕರ ಭರವಸೆಯ ಪ್ರತಿನಿಧಿಯಾಗಿ ತರುಣ ಜನಾಂಗವನ್ನು ವಿಸ್ತರಿಸುವ ಹುಡುಗ ಅವನಾಗಲಿ’ ಎಂದು ಆಶಯ ಮಾತನ್ನಾಡಿದರು.
ಕೃತಿ ಬಗ್ಗೆ ಪರಿಚಯಕ್ಕಿಳಿದ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು, ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಎನ್ನುವಂತೆ ನಮ್ಮ ಅಕ್ಕರೆಯ ಸಂದೀಪ ತಮ್ಮ ಮನೆತನವಾದ ಹೆಗ್ಗದ್ದೆಯ ಹೆಬ್ಬಕೆಯನ್ನು ಹೆದ್ದರೆಯ ರೀತಿಯಲ್ಲಿ ತಂದು ನಮ್ಮೆಲ್ಲರ ವಿಸ್ಮಯಕ್ಕೆ ಕಾರಣೀಭೂತರಾಗಿದ್ದಾರೆ. ಆಕಸ್ಮಿಕವಾಗಿ ದುಬೈಗೆ ಹೋದ ಈ ಹುಡುಗ ಕ್ಯಾಮರಾ ಕೈಯಲ್ಲಿ ಹಿಡಿದು ಚೋದ್ಯವಾಗಿ ಕ್ಲಿಕ್ಕಿಸಿದ್ದು, ಅಲ್ಲಿ ಹರಿದಾಡಿದ ಅವನ ಪಾದರಸದ ಚಟುವಟಿಕೆ ಎಲ್ಲವೂ ’ಕಿಂಗ್ ಕ್ಲೀನ್’ ಎನ್ನುವ ಪುಸ್ತಕದೊಳಗೆ ಅಪ್ಯಾಯಮಾನವಾಗಿ ಮೂಡಿಬಂದಿದೆ. ಪ್ರತಿಯೊಂದು ಯಾನವೂ ಪ್ರಾರಂಭವಾಗೋದು ಪುಟ್ಟ ಹೆಜ್ಜೆಯಿಂದಲೇ ಅದು ಇಂದು ಸಂದೀಪನ ಬಾಳಲ್ಲಿ ಪ್ರಾರಂಭವಾಗಿದೆ. ಶ್ರದ್ಧೆಯೇ ಬದುಕಿನ ಗದ್ದೆ ಅದೇ ಹೆಗ್ಗದ್ದೆ. ಆ ಹೆಗ್ಗದ್ದೆಯ ಹೆಸರಿನಲ್ಲಿ ಪ್ರಕಾಶನವೊಂದು ಪ್ರಾರಂಭವಾಗಿರೋದು ನಮ್ಮೆಲ್ಲರಿಗೂ ಬಹಳಾನೇ ಖುಷಿ ನೀಡಿದೆ ಎಂದರು. ಹೊಸತನ್ನು ಬರೆಯುವಾಗ, ಯೋಚನೆ ಮಾಡುವಾಗ ನುಡಿಗಟ್ಟಿನ ಹುಡುಕಾಟವಾಗುತ್ತೆ, ಅನುಭವದ ಅನಾವರಣ ಮಾಡುವಂತಹ ವಾಗರ್ಥಗಳ ಖಂಡರಿಕೆ ಗೊತ್ತಾಗುತ್ತಾ ಹೋಗುತ್ತದೆ ಈ ಪುಸ್ತಕ ಓದಿದರೆ ದೂರದ ಅಂಚಿನ ತುದಿ ಮುಟ್ಟಲು ಸಾಗುತ್ತಿರುವ ಪುಸ್ತಕವೇನೋ ಅನ್ನಿಸುತ್ತದೆ, ಒಬ್ಬ ಎಳೇ ಹುಡುಗನ ಪ್ರವಾಸದ ಹರಣ, ತುಡಿದ ಗದ್ಯ ಮತ್ತು ಪದ್ಯ ಎರಡರಲ್ಲೂ ಮಿಶ್ರಿತವಾಗಿ ಮೂಡಿಬಂದಿದೆ ಅದನ್ನು ನಿಷ್ಕರ್ಷ ಮಾಡುವುದೇ ಕಷ್ಟ, ಅದೊಂದು ಚೋದ್ಯ, ವಿಸ್ಮಯ, ಅದನ್ನು ಸಾಧಿಸಿದ ಅಸ್ಮಿತೆ ಸಂದೀಪ ಶೆಟ್ಟಿ ಹೆಗ್ಗದ್ದೆ ಎಂದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿದ್ದ ಕೆರಾಡಿ ವರಸಿದ್ಧಿ ವಿನಾಯಕ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾಗಿರುವ ಶ್ರೀ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಓದಿ ಕೆಟ್ಟವರಿಲ್ಲ, ಲೇಖಕನೊಬ್ಬನ ೧೦೦೦ ಕೃತಿಗಳಲ್ಲಿ ೧೦ ಕೃತಿ ಉಳಿದುಕೊಂಡರೆ ಅವನೊಬ್ಬ ಮಹಾಕವಿ, ೫ ಉಳಿದರೆ ಉತ್ತಮ ಲೇಖಕ, ೧ ಉಳಿದರೆ ಲೇಖಕ, ಒಂದೂ ಉಳಿಯದಿದ್ದರೆ ಅವನೊಬ್ಬ ವಿಮರ್ಶಕ ಆಗುತ್ತಾನೆ ಎಂದರು.

ಕಾರ್ಯಕ್ರಮದ ಉದ್ಘಾಟನೆ ಮತ್ತು ಘನ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರಾಮಚಂದ್ರ ಗುರೂಜಿ ಮಾತನಾಡಿ ದೇಶದಲ್ಲಿ ಯಾವ ರಾಜ್ಯಕ್ಕೂ ಸಿಗದಷ್ಟು ಜ್ಞಾನಪೀಠ ಪ್ರಶಸ್ತಿಗಳು ನಮಗೆ ದೊರಕಿವೆ ಅದಕ್ಕೆ ಕಾರಣ ಹನುಮಂತ ಎಂದು ಡಿ.ವಿ.ಜಿ ಹೇಳುತ್ತಾರೆ. ನಮ್ಮಲ್ಲಿ ಸಾಹಿತ್ಯ ಅಷ್ಟು ಸೊಗಸಾಗಿ ಬೆಳೆದಿದೆ. ಯಾವೊಂದು ದೇಶಕ್ಕೂ ಸುಮ್ಮನೆ ಹೋಗಿ ಬರುವುದು ಒಳಿತಲ್ಲ ಅವರ ಜೀವನ ಶೈಲಿ, ಅವರ ಅಭಿವೃದ್ಧಿ ಶೀಲತೆ ಇತ್ಯಾದಿಗಳನ್ನು ನೋಡಿಕೊಂಡು ಬಂದ ಮೇಲೆ ನಮ್ಮಲ್ಲೂ ಅದನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಸಿರಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುರೇಶ್ ಚಿಕ್ಕಣ್ಣ ದಂಪತಿಗಳನ್ನು ಸನ್ಮಾನಿಸಿದರು. ರಾಮ್ ಶೆಟ್ಟಿ ಅತ್ತಿಕಾರ್ ಕಾರ್ಯಕ್ರಮದ ನಿರೂಪಣೆಯನ್ನು ಗೈದರು.

Click here

Click here

Click here

Click Here

Call us

Call us

Leave a Reply