ಮಡಿಕೇರಿ: ದೀರ್ಘ ಹೋರಾಟದ ಮೂಲಕ ಪಡೆದ ನಾಡು ಇದು. ಈ ನಾಡು ಒಡೆದರೆ ನಾವು ದುರ್ಬಲರಾಗುತ್ತೇವೆ. ನಮ್ಮ ದನಿ ಉಡುಗಿ ಹೋಗುತ್ತದೆ. ಪ್ರತ್ಯೇಕ ರಾಜ್ಯ ಕೊಡಿ ಎಂದು ಯಂಕ ನಾಣಿ ಸೀನರೆಲ್ಲ ಕೇಳುವಂತಾಗಿದೆ. ಕನ್ನಡ ಮತ್ತು ಕರ್ನಾಟಕದ ಸಾರ್ವಭೌಮತೆಗೆ ಅಡ್ಡಿಯಾಗುವವರು ಯಾರೇ ಇರಲಿ ಅಂಥವರ ಕಿವಿ ಹಿಂಡಿ ಬುದ್ಧಿ ಕಲಿಸಬೇಕು ಎಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ನಾ. ಡಿಸೋಜ ಹೇಳಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಿರ್ಮಿಸಲಾಗಿರುವ ಭಾರತೀಸುತ ವೇದಿಕೆಯಲ್ಲಿ ಮಂಗಳವಾರ ಸಾಹಿತ್ಯಾಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೆಲು ನುಡಿಯ ಸಾಹಿತಿ ಎಂದೇ ಹೆಸರಾದ ನಾ. ಡಿಸೋಜ ಕನ್ನಡದ ಹಿತಾಸಕ್ತಿಯ ಸಂಬಂಧದಲ್ಲಿ ಮಾತನಾಡುವಾಗ ಯಾವ ಮುಲಾಜೂ ಇಟ್ಟುಕೊಳ್ಳದೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲದಿರುವುದಕ್ಕೆ ನಮ್ಮ ಅಪ್ಪ, ಅಮ್ಮ ಕಾರಣ. ಎರಡನೇ ಕಾರಣ ನಮ್ಮ ಸರ್ಕಾರ. ಎಲ್ಲ ರಾಜ್ಯಗಳ ಸರ್ಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತ ಕಾಪಾಡುತ್ತ ಬಂದಿವೆ. ಆದರೆ ಕರ್ನಾಟಕ ಸರ್ಕಾರ ಕನ್ನಡ ಸರ್ಕಾರವಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾದ ಸ್ಥಿತಿ ಇದೆ. ನಾವು ನಮ್ಮ ಬೇಡಿಕೆಗಳ ಪಟ್ಟಿಯೊಂದಿಗೆ ಸರ್ಕಾರದ ಮುಂದೆ ಹೋಗುತ್ತೇವೆ. ಕೆಲಸ ಆಗಲಿಲ್ಲವೆಂದರೆ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಕನ್ನಡಕ್ಕಾಗಿ ನಾವೇನು ಮಾಡಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಿಲ್ಲ. ಕನ್ನಡಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದು ಮುಖ್ಯವಾಗಬೇಕು ಎಂದರು.
ಪ್ರತಿ ವಿದ್ಯಾಮಂತ್ರಿ ಬಂದಾಗಲೂ ನಮ್ಮ ಶಿಕ್ಷಣ ನೀತಿ ಬದಲಾಗುತ್ತವೆ. ವಿವಿಧ ಪ್ರಯೋಗಗಳಿಗೆ ನಮ್ಮ ಮಕ್ಕಳು ತುತ್ತಾಗುತ್ತಿದ್ದಾರೆ. ಈ ಸ್ಥಿತಿ ತಪ್ಪಬೇಕು. ಮಕ್ಕಳಿಗೆ ಇಂಗ್ಲಿಷ್‌ನ್ನು ಕಲಿಸುವ ವಿಷಯದಲ್ಲಿ ಸಾಹಿತಿಗಳ ತಕರಾರಿಲ್ಲ. ಆದರೆ ಇಂಗ್ಲಿಷ್‌ನಲ್ಲಿಯೇ ಎಲ್ಲ ಇದೆ. ಅದೇ ಶ್ರೇಷ್ಠ. ಅದು ಬಾರದೆ ಇದ್ದರೆ ನಮ್ಮ ಬದುಕೇ ವ್ಯರ್ಥ ಅನ್ನುವ ನಂಬಿಕೆಯನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸವನ್ನು ನಾವು ಮಾಡಬಾರದು. ಇದರಿಂದ ನಮ್ಮ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದರು.
ಗಡಿಯಲ್ಲಿ ಕನ್ನಡಿಗರು ಆತಂಕದಲ್ಲಿದ್ದಾರೆ: ಕನ್ನಡ ಬಾರದೇನೆ ಇಲ್ಲಿ ಬದುಕುವಂಥ ವಾತಾವರಣವನ್ನು ನಾವು ಸೃಷ್ಟಿ ಮಾಡಿ ಇಟ್ಟಿದ್ದೇವೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಮತ್ತಿತರ ಕನ್ನಡ ಹಿತದ ಹಲವು ವರದಿಗಳು ಜಾರಿಯಾಗದೆ ಗೆದ್ದಲು ತಿನ್ನುತ್ತ ಬಿದ್ದಿವೆ. ನಾಡೊಳಗಿನ ಸ್ಥಿತಿ ಹೀಗಿದ್ದರೆ ಗಡಿಯಲ್ಲಿಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಗಡಿನಾಡ ಕನ್ನಡಿಗರು ಕನ್ನಡಿಗರಾಗಿಯೇ ಉಳಿಯುವುದಕ್ಕೆ ಹೋರಾಟವನ್ನೇ ನಡೆಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಕನ್ನಡಿಗರ ಸ್ಥಿತಿಗತಿಗಳು ತೃಪ್ತಿಕರವಾಗಿಲ್ಲ. ಅಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಶಾಲೆಗಳಿಲ್ಲ. ಅಲ್ಲಿಯ ಸರ್ಕಾರ ಕನ್ನಡಿಗರ ಪರವಾಗಿ ಇಲ್ಲ. ಅಲ್ಲಿಯ ಕನ್ನಡಿಗರು ಆತಂಕದಿಂದ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಹೊರನಾಡ ಕನ್ನಡಿಗರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುವರ್ಣ ಮಾಧ್ಯಮ: ಪರಿಸರವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವ ಅಧಿಕಾರವನ್ನು ಮನುಷ್ಯನಿಗೆ ಯಾರೂ ಕೊಟ್ಟಿಲ್ಲ. ನಾವು ಪರಿಸರದ ನಿಯಮಗಳನ್ನು ಮೀರಿದ ದಿನ ಅದು ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಪ್ರಕೃತಿ ನಿಯಮಕ್ಕೆ ಪ್ರತಿಕೂಲ ಯೋಜನೆಗಳನ್ನು ರೂಪಿಸಬೇಡಿ ಎಂದು ನದಿ ತಿರುವುಗಳ ಯೋಜನೆಗಳ ಹಿನ್ನೆಲೆಯಲ್ಲಿ ಸಲಹೆ ನೀಡಿದರು.
ಪರಿಸರವನ್ನು ಮುಟ್ಟಲೇಬೇಡಿ ಅನ್ನುವುದು ಅವೈಜ್ಞಾನಿಕ. ಆದರೆ ಅಭಿವೃದ್ಧಿ ಮತ್ತು ಪರಿಸರ ಎರಡರ ನಡುವಿನ ಒಂದು ಸುವರ್ಣ ಮಾಧ್ಯಮದ ದಾರಿ ಹಿಡಿಯದಿದ್ದರೆ ನಾವೂ ಇಲ್ಲ, ಪರಿಸರವೂ ಇಲ್ಲ ಎಂಬಂತಾಗುತ್ತದೆ. ವ್ಯವಸಾಯವೇ ಬದುಕು ಅನ್ನುವ ನಂಬಿಕೆ ಇದ್ದ ಈ ನಾಡಿನಲ್ಲಿ ವ್ಯವಸಾಯವನ್ನು ದಿವಾಳಿಕೋರತನ ಅನ್ನುವಂತೆ ಬಿಂಬಿಸಲಾಗುತ್ತಿದೆ. ಕುವೆಂಪು ಹೇಳಿದ ನೇಗಿಲ ಯೋಗಿ ನಿತ್ಯ ಆತ್ಮಹತ್ಯೆಯ ಪ್ರತೀಕವಾಗುತ್ತಿದ್ದಾನೆ ಎಂದರು.
ಹೆಣ್ಣನ್ನು ಗೌರವಿಸಿ: ಹೆಣ್ಣನ್ನು ನೋಡುವ ಸಮಗ್ರ ದೃಷ್ಟಿ ನಮ್ಮಲ್ಲಿ ಬದಲಾಗದಿದ್ದರೆ ಹೆಣ್ಣಿನ ಬದುಕಿಗೆ ಭರವಸೆ ಇಲ್ಲ. ಅವಳನ್ನು ಒಪ್ಪಿಕೊಳ್ಳುವ, ಸ್ವೀಕರಿಸುವ, ಸಹಿಸಿಕೊಳ್ಳುವ, ಗೌರವಿಸುವ ಮನೋಭಾವ ಎಲ್ಲರಲ್ಲಿ ಬಾರದೇ ಹೆಣ್ಣಿಗೆ ಇವತ್ತಿನ ಆತಂಕ, ಭೀತಿ, ಕಳವಳ ದೂರವಾಗುವುದಿಲ್ಲ. ಹೆಣ್ಣಿಗೆ ನೀಡಬೇಕಾದ ಸ್ಥಾನ ನೀಡದಿದ್ದರೆ ನಮ್ಮ ಸಮಾಜಕ್ಕೆ ಪಾರ್ಶ್ವವಾಯು ಹೊಡೆಯುತ್ತದೆ ಎಂಬ ಎಚ್ಚರಿಕೆ ನೀಡಿದರು.
ನಮ್ಮ ಸಹಜೀವಿಗಳನ್ನೇ ಅನುಮಾನದಿಂದ ನೋಡುವ ಪ್ರವೃತ್ತಿ ಮತ್ತು ನೈತಿಕ ಪೊಲೀಸ್‌ಗಿರಿಯಂಥ ಪರ್ಯಾಯ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲದಿರುವುದಕ್ಕೆ ನಮ್ಮ ಅಪ್ಪ, ಅಮ್ಮ ಕಾರಣ. ಎರಡನೇ ಕಾರಣ ನಮ್ಮ ಸರ್ಕಾರ. ಎಲ್ಲ ರಾಜ್ಯಗಳ ಸರ್ಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತ ಕಾಪಾಡುತ್ತ ಬಂದಿವೆ. ಆದರೆ ಕರ್ನಾಟಕ ಸರ್ಕಾರ ಕನ್ನಡ ಸರ್ಕಾರವಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾದ ಸ್ಥಿತಿ ಇದೆ. ನಾವು ನಮ್ಮ ಬೇಡಿಕೆಗಳ ಪಟ್ಟಿಯೊಂದಿಗೆ ಸರ್ಕಾರದ ಮುಂದೆ ಹೋಗುತ್ತೇವೆ. ಕೆಲಸ ಆಗಲಿಲ್ಲವೆಂದರೆ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇವೆ ಎಂಬುದು ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಆಕ್ರೋಶದ ನುಡಿ.
ನಾಡಿ – ನುಡಿ
1. ಪುಸ್ತಕದ ಜಾಗದಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್, ಟ್ಯಾಬ್ ಇಂಟರ್ ನೆಟ್ ಬಂದಿದೆ. ಓದುಗ ವರ್ಗ ಇಂದು ಈ ವಿದ್ಯುನ್ಮಾನ ಮಾಧ್ಯಮಗಳ ಕೈಯಲ್ಲಿ ಸಿಕ್ಕಿ ಬಿದ್ದಿದೆ. ಈ ಯಂತ್ರದ ಹಿಂದೆ ಈ ಆಧುನಿಕ ಯಂತ್ರವನ್ನ ಎಲ್ಲೆಲ್ಲೂ ಜನಪ್ರಿಯಗೊಳಿಸಿ ಅದರ ಮೂಲಕ ಇಡೀ ವಿಶ್ವವನ್ನ ಆಳಬೇಕು ಅನ್ನುವ ಅಭಿಲಾಷೆ ಇರುವ ಒಂದು ಕುತಂತ್ರ ಮನಸ್ಸು ಇದೆಯೇನೋ ಎಂದು ಕೂಡ ನನಗೆ ಅನಿಸುತ್ತಿದೆ. ಈ ಯಂತ್ರಗಳು ಮಾನವೀಯ ಗುಣಗಳನ್ನ ಕೊಲ್ಲುತ್ತ, ಮಾನವೀಯತೆಯಿಂದ ನಮ್ಮನ್ನ ದೂರ ಸೆಳೆದೊಯ್ಯುತ್ತ ಯಂತ್ರದ ಗುಲಾಮರನ್ನಾಗಿ ನಮ್ಮನ್ನ ಪರಿವರ್ತಿಸಿ ಇಡೀ ವಿಶ್ವ ಒಂದೇ ಮಾದರಿಯ, ಒಂದೇ ರೀತಿಯಲ್ಲಿ ಯೋಚಿಸುವ, ಒಂದೇ ಆಹಾರವನ್ನ ಸೇವಿಸುವ ವಿಚಿತ್ರ ಜೀವಿಗಳನ್ನ ಸೃಷ್ಟಿ ಮಾಡುವ ಹುನ್ನಾರ ನಡೆದಿರಬಹುದೆ?
2. ಸದಾ ಸಾಮಾಜಿಕ ಬದ್ಧತೆಯೊಡನೆ ಯೋಚನೆ ಮಾಡುವ ಬರೆಯುವ ಲೇಖಕ ಇಂದು ಈ ಯಂತ್ರದ ಎದಿರು ಸೋಲುತ್ತಿದ್ದಾನೆ. ಹಾಗೆಂದು ನಾವು ಯಂತ್ರಗಳನ್ನ ನಿರಾಕರಿಸಬೇಕು ಎಂದು ನಾನು ಹೇಳುತ್ತಿಲ್ಲ, ಯಂತ್ರ ಮನುಷ್ಯನ ಕೈಲಿರ ಬೇಕು, ಮಾನವ ಯಂತ್ರದ ಗುಲಾಮನಾಗಬಾರದು. ಮಾಹಿತಿ ತಂತ್ರ ಜ್ಞಾನದ ಇಂದಿನ ದಿನಗಳಲ್ಲಿ ನಾವೆಲ್ಲ ಜ್ಞಾನವಂತರಾಗುತ್ತಿದ್ದೇವೆ. ಆದರೆ ನಾವು ಯಾರೂ ಕೂಡ ವಿವೇಕ ಶಾಲಿಗಳಾಗಿ ಪರಿವರ್ತನೆ ಹೊಂದುತ್ತಿಲ್ಲ.
3. ಯಂತ್ರದ ದಾಳಿಗೆ ಒಳಗಾಗಿ ನಮ್ಮ ಭಾಷೆ ಕೂಡ ನಶಿಸಿ ಹೋಗುತ್ತಿದೆ. ಎಫ್.ಎಂ. ರೇಡಿಯೋ ಬಂದ ಮೇಲೆ ನಮ್ಮ ಭಾಷೆಗೆ ದುರವಸ್ಥೆ ಬಂದೊದಗಿದೆ. ಮೊಬೈಲ್ ಬಂದ ನಂತರ ಕನ್ನಡದ ಅಂಕಿಗಳು ನಮಗೆ ಮರೆತೇ ಹೋಗಿವೆ. ಅನ್ನದ ಪ್ರಶ್ನೆಯೇ ಮುಖ್ಯವಾಗಿ ಕನ್ನಡ ಹಿಂದೆ ಸರಿದು ಇಂಗ್ಲಿಷ್ ವಿಜೃಂಭಿಸುತ್ತಿದೆ.
4. ಕನ್ನಡದ ವಿಷಯ ಬಂದಾಗಲೆಲ್ಲ ನಾವು ಸರ್ಕಾರವನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಸರ್ಕಾರ ಕನ್ನಡಕ್ಕಾಗಿ ಏನೂ ಮಾಡುತ್ತಿಲ್ಲ ಅನ್ನುವುದು ನಮ್ಮ ಜನರ ಪುಕಾರು. ನಮ್ಮ ಮಕ್ಕಳು ನಾಯಿಯನ್ನ ಡಾಗಿ ಅಂದಾಗ, ಬೆಕ್ಕನ್ನ ಕ್ಯಾಟಿ ಅಂದಾಗ, ಚಂದ್ರನನ್ನ ಮೂನ್ ಅಂಕಲ್ ಎಂದಾಗ ತೆಂಗಿನ ಮರ ಹತ್ತಿ ಕೂರುವ ನಮ್ಮ ನಮ್ಮ ಪೋಷಕರು ಕನ್ನಡದ ಇಂದಿನ ಸ್ಥಿತಿಗೆ ಮೂಲ ಕಾರಣ.
5. ಕರ್ನಾಟಕದ ಸರ್ಕಾರ ಕನ್ನಡ ಸರ್ಕಾರವಾಗಿದೆಯೇ? ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಬೆಂಗಳೂರಿನ ವಿಧಾನಸೌಧಕ್ಕೆ ಬಂದ. ಆತ ಅಲ್ಲಿ ಕುಳಿತು ತಮಿಳಿನಲ್ಲಿ ಮಾತನಾಡಿದ. ನಮ್ಮ ಮುಖ್ಯಮಂತ್ರಿ ಆತನಿಗೆ ಇಂಗ್ಲಿಷಿನಲ್ಲಿ ಉತ್ತರಿಸಿದರು. ಇದು ಕನ್ನಡ ಸರ್ಕಾರದ ಲಕ್ಷಣ ಖಂಡಿತ ಅಲ್ಲ.
6. ನಮ್ಮ ಕವಿಗಳ ಶಪಥಕ್ಕೆ ನಮ್ಮ ಮಂತ್ರಿಗಳು ಎಂತಹ ಅವಮಾನ ಮಾಡುತ್ತಾರಲ್ಲ ಎಂದು ಮೈ ಉರಿಯುತ್ತದೆ. ಇನ್ನು ಕನ್ನಡದ ಏಳಿಗೆಗೆ ಕಾವಲು ಸಮಿತಿ, ಅಭಿವೃದ್ಧಿ ಪ್ರಾಧಿಕಾರ ಇತ್ಯಾದಿಗಳು. ಕನ್ನಡವನ್ನು ದಿನ ನಿತ್ಯದ ವ್ಯವಹಾರದಲ್ಲಿ ಬಳಸಿ ಅನ್ನುವ ಸರಕಾರಿ ಆದೇಶಗಳು, ಬೋರ್ಡುಗಳನ್ನ ಕನ್ನಡದಲ್ಲಿ ಹಾಕಿ ಅನ್ನುವ ಸಾಲು ಸಾಲು ಸರ್ಕಾರೀ ಆಜ್ಞೆಗಳು ಯಾರಿಗೂ ಮರ್ಯಾದೆ ತರುವ ವಿಷಯವಲ್ಲ.
7. ಕನ್ನಡವನ್ನು ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಮಂತ್ರಿಗಳು ಮುಂದಿದ್ದಾರೆ. ಆದರೆ ಇವರಿಗೆ ಅಡ್ಡಿಯಾಗಿ ನಿಂತಿರುವವರು ವಿಧಾನಸೌಧ ಮತ್ತಿತರ ಕಡೆಗಳಲ್ಲಿ ಕುಳಿತಿರುವ ಆಂಗ್ಲ ಮೋಹೀ ಅಧಿಕಾರಿಗಳು ಅನ್ನುವ ಮಾತಿದೆ. ಇವರು ಕನ್ನಡದ ಪರವಾಗಿ ನಿಂತರೆ ಕನ್ನಡ ಖಂಡಿತ ಉದ್ಧಾರವಾಗುತ್ತದೆ. ಸರ್ಕಾರದಲ್ಲಿ ಇರುವ ನಮ್ಮ ಬಿಳಿಕಾಲರಿನ ಕೆಲವೇ ಕೆಲ ಜನ ಕನ್ನಡದ ವಿಷಯ ಬಂದಾಗ ತೊಂಚವಂಚ ಮಾಡುತ್ತಿ¨ªಾರೆ.
8. ಬೆಳಗಾವಿಯಲ್ಲಿ ನಾಲ್ಕು ಜನ ಇದ್ದರೆ ಕರ್ನಾಟಕದ ಹೆಣ ಹೊರುತ್ತೇವೆ, ಐದು ಜನ ಇದ್ದರೆ ಕರ್ನಾಟಕದ ತಿಥಿ ಮಾಡುತ್ತೇವೆ ಅನ್ನುವ ಮಾತು ಕೇಳಿಬಂತು. ಇದರ ವಿರುದ್ಧ ನಮ್ಮ ರಕ್ಷಣಾ ವೇದಿಕೆಯ ಮಿತ್ರರು ಪ್ರತಿಭಟನೆ ನಡೆಸಿದರು. ಆದರೆ ಈ ಬಗ್ಗೆ, ಸರ್ಕಾರ, ನಮ್ಮ ಜನ ಪ್ರತಿನಿಧಿಗಳು, ಕೊನೆಗೆ ಜನ ಕೂಡ ಪ್ರತಿಭಟಿಸಲಿಲ್ಲ.
9. ರೈತನ ದುಡಿಮೆಗೆ ಬೆಲೆ ಇಲ್ಲ. ಅವನ ನೆಲ ಅವನ ಕೈಯಲ್ಲಿ ಉಳಿದಿಲ್ಲ. ಅವನಿಗೆ ಗೌರವವಿಲ್ಲ. ರೈತನಿಗೆ ಹಣದ ಆಸೆ ತೋರಿಸಿ ಅವನ ಜಮೀನಿಗೆ ಲಕ್ಷಾಂತರ ರೂಪಾಯಿ ಬೆಲೆ ಕಟ್ಟಿ ಅದನ್ನು ಆಧುನಿಕ ವ್ಯವಹಾರಗಳಿಗಾಗಿ ಕೊಂಡು ಅವನನ್ನ ಅದೇ ನೆಲದಲ್ಲಿ ತಲೆ ಎತ್ತುತ್ತಿರುವ ಕಾರ್ಖಾನೆಯ ಕಾವಲುಗಾರನನ್ನಾಗಿ ಮಾಡುವ ಹುನ್ನಾರ ನಡೆದಿದೆ.
10. ನಮ್ಮ ದೇಶವನ್ನ ಹೊಸದಾಗಿ ನಿರ್ಮಿಸುವ ಸಂದರ್ಭದಲ್ಲಿ ಜವಾಹರಲಾಲ್ ನೆಹರು ಅವರು ಅಣೆಕಟ್ಟುಗಳನ್ನ ದೇಶದ ದೇವಾಲಯಗಳು ಅಂತ ಕರೆದರು. ಇಂದು ಈ ದೇವಾಲಯಗಳು ಜನರ ಪಾಲಿಗೆ ನರಕಗಳಾಗಿ ಪರಿಣಮಿಸಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಏನು ಜನ ನಿರಾಶ್ರಿತರಾದರು ಅದರ ಮೂರು ಪಟ್ಟು ಜನ ಅಣೆಕಟ್ಟುಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಅಣೆಕಟ್ಟುಗಳು ವಿವಿಧ ಸಮಸ್ಯೆಗಳಿಗೆ ಕಾರಣವಾಗಿವೆ. ಈ ವಿಷಯವನ್ನ ವೈಜ್ಞಾನಿಕವಾಗಿ ನೋಡಿ ಸಮಸ್ಯೆಗಳನ್ನು ಬಗೆಹರಿಸುವ ಯತ್ನ ಆಗಬೇಕಾಗಿದೆ.
11. ವಿಶ್ವಸಂಸ್ಥೆ ಪಶ್ಚಿಮ ಘಟ್ಟವನ್ನ ವಿಶೇಷ ಪ್ರದೇಶವೆಂದು ಸಾರಲು ಹೊರಟಾಗ ನಮ್ಮಲ್ಲಿ ಕೆಲ ರಾಜಕಾರಣಿಗಳು ತಮ್ಮ ವಿರೋಧ ವ್ಯಕ್ತಪಡಿಸಿದರು. ಡಾ|ಕಸ್ತೂರಿ ರಂಗನ್ ವರದಿ ಬಂದ ನಂತರ ಈ ವಿರೋಧ ಹೆಚ್ಚಾಗಿದೆ. ಕಸ್ತೂರಿ ರಂಗನ್ ವರದಿ ಬರಲು ಮುಖ್ಯ ಕಾರಣ ಪರಿಸರವನ್ನ ಬೇಕಾಬಿಟ್ಟಿಯಾಗಿ ನಾವು ನಾಶ ಮಾಡ ಹೊರಟಿದ್ದು. ಪರಿಸರ ಇರುವುದೇ ನಮಗಾಗಿ ಅನ್ನುವ ಭ್ರಮೆಯಲ್ಲಿ ನಾವು ಅದನ್ನು ದೋಚಲು ಹೊರಟೆವು. ಈ ಕೃತ್ಯದಿಂದ ಪರಿಸರ ಉಳಿಯುವುದೇ ಇಲ್ಲ ಅನ್ನುವಾಗ ಕಸ್ತೂರಿ ರಂಗನ್ ವರದಿ ಬಂದಿದೆ. ಈಗ ಒಂದು ಮಧ್ಯದ ದಾರಿಯನ್ನು ನಾವು ಕಂಡು ಕೊಳ್ಳಬೇಕು. ಪ್ರಕೃತಿ ಉಳಿಸಿ ನಾವು ಉಳಿಯುವುದು. ಪ್ರಕೃತಿಯನ್ನು ಬಳಸಿ ಕೊಳ್ಳುವ ವಿಷಯ ಬಂದಾಗ ತುಸು ತಾಳ್ಮೆ, ಮುಂದಿನ ಜನಾಂಗದ ಮೇಲೆ ನಮ್ಮ ಹೊಣೆ.
12. ನಮ್ಮ ಹೆಣ್ಣು ಮಕ್ಕಳು ಇಂದು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ನಾವು ನೋಡಬೇಕು. ಅತ್ಯಾಚಾರ ದಿನ ನಿತ್ಯದ ಸುದ್ದಿ ಆಗುತ್ತಿದೆ. ನಮ್ಮ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಬೇಡ ಹಗಲು ಹೊತ್ತಿನಲ್ಲಿ ಕೂಡ ಇವತ್ತು ಅಸುರಕ್ಷಿತರು. ಇದು ಆಧುನಿಕತೆಯ ಅತಿರೇಕವೇ? ನಮ್ಮ ಸಂಸ್ಕೃತಿ ಧರ್ಮಗಳ ಪತನವೇ? ಗಂಡಿನ ಸ್ವೇಚ್ಛಾಚಾರವೇ? ಹೆಣ್ಣಿನ ಬೆಳವಣಿಗೆ ಸಹಿಸದ ಜನ ಮಾಡುತ್ತಿರುವ ಗದ್ದಲವೇ? ಟಿವಿ ಸಿನಿಮಾಗಳ ಪ್ರಭಾವವೇ? ಕಿರಿಯರನ್ನ ಸರಿದಾರಿಯಲ್ಲಿ ಕರೆದೊಯ್ಯದ ಹಿರಿಯರ ಬೇಜವಾಬ್ದಾರಿತನವೇ? ನನಗೆ ಗೊತ್ತಾಗುತ್ತಿಲ್ಲ.
13. ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳ ಬಗ್ಗೆ ಸದಾ ಒಂದು ತಕರಾರಿದೆ. ಸರ್ಕಾರ ಸಮ್ಮೇಳನಗಳ ನಿರ್ಣಯಗಳನ್ನ ಅನುಷ್ಠಾನಕ್ಕೆ ತರುವ ಬಗ್ಗೆ ಒಂದು ಹೊಣೆಯನ್ನ ಹೊರಬೇಕು. ಸಮ್ಮೇಳನಕ್ಕೆ ಕೋಟಿ ಹಣ ನೀಡುವ ಸರ್ಕಾರ ಅಷ್ಟಕ್ಕೆ ಸುಮ್ಮನಿರಬಾರದು. ತನ್ನ ಓರ್ವ ಅಧಿಕಾರಿಯನ್ನ ನಿಯೋಜಿಸಿ ಸರ್ಕಾರಕ್ಕೆ ಇಡೀ ಸಮ್ಮೇಳನದಲ್ಲಿ ಏನೇನು ಸಲಹೆ, ಸೂಚನೆ ಬರುತ್ತೆ ಅನ್ನುವುದನ್ನ ದಾಖಲೆ ಮಾಡಬೇಕು. ಈ ಎಲ್ಲ ವಿಚಾರಗಳು ಜಾರಿ ಆಗುವ ಹಾಗೆ ಆ ಅಧಿಕಾರಿ ಮಾಡಬೇಕು.
14. ಪೋಷಕರು ಮಕ್ಕಳಿಗೆ ಮೊಬೈಲ್, ಟ್ಯಾಬ್ ಕೊಡಿಸುವುದರ ಬದಲು ಪುಸ್ತಕ ಕೊಡಿಸಬೇಕು. ಮಕ್ಕಳಿಗೆ ಇಂಗ್ಲಿಷ್ ಕಲಿಸುವ ವಿಷಯದಲ್ಲಿ ಸಾಹಿತಿಗಳ ತಕರಾರಿಲ್ಲ. ಆದರೆ ಇಂಗ್ಲಿಷಿನಲ್ಲಿಯೇ ಎಲ್ಲ ಇದೆ, ಅದೇ ಸರ್ವ ಶ್ರೇಷ್ಠ, ಅದು ಬಾರದೆ ಇದ್ದರೆ ನಮ್ಮ ಬದುಕೇ ವ್ಯರ್ಥ ಅನ್ನುವ ನಂಬಿಕೆಯನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸವನ್ನು ನಾವು ಮಾಡಬಾರದು.
15. ನಮ್ಮ ಜೊತೆಯಲ್ಲಿ ಹೊರನಾಡ ಕನ್ನಡಿಗರು, ಗಡಿನಾಡ ಕನ್ನಡಿಗರು ಇ¨ªಾರೆ. ಇವರು ಕನ್ನಡಿಗರಾಗಿ ಇರಲಿಕ್ಕೆ ಒಂದು ಹೋರಾಟವನ್ನೇ ನಡೆಸಿ¨ªಾರೆ. ಸರ್ಕಾರಗಳು ಇವರು ಕನ್ನಡಿಗರು ಅನ್ನುವ ಕಾರಣಕ್ಕೆ ಇವರನ್ನ ದೂರ ಮಾಡಿದರೆ ಇವರು ಗಡಿನಾಡಿನವರು, ಇಲ್ಲ ಹೊರನಾಡಿನವರು ಅನ್ನುವ ಕಾರಣಕ್ಕೆ ನಮ್ಮ ಆಡಳಿತದಿಂದ ಹೊರಗೆ ಉಳಿಯುತ್ತಾರೆ.
16. ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂದೋ ಕೆಲವರು ಬೇರೆ ಬೇರೆ ರಾಜ್ಯಗಳ ಮಾತನ್ನು ಆಡುತ್ತಿ¨ªಾರೆ. ಈ ನಾಡು ಒಡೆದರೆ ನಾವು ದುರ್ಬಲರಾಗುತ್ತೇವೆ. ನಮ್ಮ ದನಿ ಉಡುಗಿ ಹೋಗುತ್ತದೆ. ಅವರಿಗೆ ರಾಜ್ಯ ಕೊಟ್ಟಿರಿ ನಮಗೂ ಕೊಡಿ ಎಂದು ವೆಂಕ-ನಾಣಿ-ಸೀನರೆಲ್ಲ ಎದ್ದು ನಿಲ್ಲುತ್ತಾರೆ.