ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರವಾಸಿಗರ ಬಗ್ಗೆ ಆ ಪ್ರದೇಶದ ಜನರಿಗೆ ಹೃದಯ ವೈಶಾಲ್ಯತೆ ಇರಬೇಕು. ಈ ನೆಲೆಯಲ್ಲಿ ಇಲಾಖೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ಪ್ರವಾಸಿ ಕಛೇರಿ ಸಹಾಯಕ ನಿರ್ದೇಶಕಿ ಅನಿತಾ ಬಿ. ಆರ್. ಹೇಳಿದರು.
ಜಿಲ್ಲಾಡಳಿ ಮತ್ತು ಪ್ರವಾಸೋದ್ಯಮ ಇಲಾಖೆ, ಪಡುವರಿ ಗ್ರಾಮ ಪಂಂಚಾಯತ್, ಬೈಂದೂರು ರೋಟರಿ ಕ್ಲಬ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಬೈಂದೂರು ಸೋಮೇಶ್ವರ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ನೆಲ, ಜಲದ ಸ್ವಚ್ಛತೆ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸ್ವಚ್ಛತೆ ಹಾಗೂ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹುಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಪ್ರವಾಸಿ ಸ್ಥಳಗಳ ಸ್ವಚ್ಛತೆ ಮತ್ತು ಅಭಿವೃದ್ಧಿಯ ಕುರಿತು ಕಾಳಜಿ ವಹಿಸಬೇಕು ಎಂದರು.
ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಪ್ರವಾಸಿಗರನ್ನು ಆಕರ್ಷಿಸಲು ನಾವು ಹಿಂದೆ ಬಿದ್ದಿದ್ದೇವೆ. ಕೊಲ್ಲೂರಿಗೆ ಬರುವ ಪ್ರವಾಸಿಗರಿಗೆ ಮರವಂತೆ, ಸೋಮೇಶ್ವರ ಬೀಚ್, ವತ್ತಿನೆಣೆಯ ನೇಸರ ಕ್ಷಿತಿಜಧಾಮ, ಪ್ರಕೃತಿ ಸೌಂದರ್ಯದಿಂದ ಕೂಡಿದ ಸೂರ್ಯಾಸ್ತಮಾನ ನೋಡುವ ಸ್ಥಳದ ಬಗ್ಗೆ ಏನೂ ತಿಳಿಯುವುದಿಲ್ಲ. ಇದರಲ್ಲಿ ನಮ್ಮ ತಪ್ಪುಗಳಿದ್ದು, ಅವರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ನಾವು ವಿಫಲರಾಗಿದ್ದೂ ಕೂಡಾ ಹಿನ್ನೆಡೆಗೆ ಕಾರಣವಾಗಿದೆ. ಅಲ್ಲಲ್ಲಿ ಪ್ರವಾಸಿ ಸ್ಥಳದ ಮಾಹಿತಿಫಲಕ ಹಾಕಿಸುವಲ್ಲಿಯೂ ನಾವು ಎಡವಿದ್ದು, ಇದರಿಂದ ಪ್ರವಾಸಿಗರಿಗೆ ಮಾಹಿತಿ ಕೊರತೆಯಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಕೋಸ್ಟಲ್ ಸೆಕ್ಯೂರ್ ಯೋಜನೆಯಡಿ ಬಂದಿರುವ ಒಂಭತ್ತು ಕೋಟಿ ಅನುದಾನದಲ್ಲಿ ಇನ್ನೂ ನಾಲ್ಕೂವರೆ ಕೋಟಿ ಖರ್ಚಾಗದೇ ಉಳಿದಿದೆ. ಅದರಲ್ಲಿ ಸ್ವಲ್ಪ ಹಣವನ್ನು ಸೋಮೇಶ್ವರ ಬೀಚ್‌ನಲ್ಲಿ ಶೌಚಾಲಯ ನಿರ್ಮಾಣ, ರಸ್ತೆ ರಿಪೇರಿ, ಸೌರವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆಗಳ ಜತೆಗೆ ಅಭಿವೃದ್ಧಿ ಕಾಮಗಾರಿಗಾಗಿ ಬಳಸಿಕೊಳ್ಳಲಾಗುವುದು ಎಂದರು.
ಈ ಸಂದರ್ಭ ಜಿಪಂ ಸದಸ್ಯ ಸುರೇಶ ಬಟ್ವಾಡಿ, ತಪಂ ಸದಸ್ಯ ಪುಷ್ಪರಾಜ ಶೆಟ್ಟಿ, ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ., ರೋಟರಿ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ, ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್ ಯೋಗೆಂದ್ರಪ್ಪ, ಉದ್ಯಮಿಗಳಾದ ಕುಂಜಾಲು ವೆಂಕಟೇಶ ಕಿಣಿ, ಜಯಾನಂದ ಹೋಬಳಿದಾರ್, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಗ್ರಾಪಂ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು. ಶಿಕ್ಷಕ ಸುಧಾಕರ ಪಿ. ಕಾರ್ಯಕ್ರಮ ನಿರ್ವಹಿಸಿದರು.