ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋಟಿ ಚೆನ್ನಯ್ಯರ ಕೊನೆಯ ಗರಡಿ ನಾಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಬಿಲ್ಲವ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಗರಡಿಯ ಜೀಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡು ಸುಂದರ ದೈವಸ್ಥಾನ ನಿರ್ಮಾಣದಲ್ಲಿ ಶ್ರಮಿಸುತ್ತಿರುವುದು ಗಮನದಲ್ಲಿದ್ದು, ನಮ್ಮ ಕಡೆಯಿಂದಾದ ಸಹಕಾರ ನೀಡುವುದಾಗಿ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ, ಸಿನೆಮಾ ನಟ ರಾಜಶೇಖರ ಕೋಟ್ಯಾನ್ ಹೇಳಿದರು.
ಅವರು ಇಲ್ಲಿನ ಜೀಣೋದ್ಧಾರ ಹಂತದಲ್ಲಿರುವ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಭೇಟಿ ನೀಡಿ ಗರಡಿಯ ಕಾಮಗಾರಿ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಳಿಕ ಮಾತನಾಡಿದರು.
ಗಜ್ಜೆಗಿರಿ ಶ್ರೀ ಕೋಟಿ ಚೆನ್ನಯ್ಯ ಗರಡಿಯ ಕೋಶಾಧಿಕಾರಿ ದೀಪಕ್, ಉಜ್ಗಲ್‌ಬೇಟ್ಟು ಗರಡಿಯ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ತಾಲೂಕು ಪಂಚಾಯತ್ ಸದಸ್ಯ ದಿನೇಶ್, ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಉಪಾಧ್ಯಕ್ಷರಾದ ವೆಂಕಟ ಪೂಜಾರಿ, ಗರಡಿಯ ಅರ್ಚಕ ಕುಟುಂಬದ ಪ್ರಮುಖರಾದ ಮಂಜುನಾಥ ಪೂಜಾರಿ ಮೇಲ್ಹಿತ್ಲು, ಸಮಿತಿಯ ಕಾರ್ಯದರ್ಶಿ ಸಮಿತಿಯ ಶಿವರಾಮ ಪೂಜಾರಿ ಯಡ್ತರೆ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಅರುಣಕುಮಾರ್ ಶಿರೂರು ಸ್ವಾಗತಿಸಿದರು. ಶಿಕ್ಷಕ ಗಣೇಶ್ ಪೂಜಾರಿ ವಂದಿಸಿದರು.