ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭವಿಷ್ಯದ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸ್ವರ್ಧಾತ್ಮಕ ಪರೀಕ್ಷೆಗಳು ರಹದಾರಿಯಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಸ್ವರ್ಧಾತ್ಮಕ ಪರೀಕ್ಷೆ ಎದುರಿಸುವ ತಯಾರಿ ಮಾಡಿಕೊಂಡರೇ ಸುಲಭವಾಗಿ ಗುರಿ ಸಾಧಿಸಲು ಸಾಧ್ಯವಿದೆ ಎಂದು ಬೈಂದೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಹೇಳಿದರು.
ಅವರು ಬೈಂದೂರು ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ನೇತೃತ್ವದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು, ರೋಟರಿ ಕ್ಲಬ್ ಬೈಂದೂರು, ಇಂಟರ‍್ಯಾಕ್ಟ್ ಕ್ಲಬ್ ಬೈಂದೂರು ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಎನ್‌ಟಿಎಸ್‌ಇ ಹಗೂ ಎನ್‌ಎಂಎಂಎಸ್ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಇಂದು ಕೆಎಎಸ್ ಐಎಎಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು ಸೂಕ್ತ ತಯಾರಿಯೊಂದಿಗೆ ಅವುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ಹೊಂದಿರಬೇಕಾಗುತ್ತದೆ ಎಂದರು.
ಬೈಂದೂರು ರೋಟರಿ ಅಧ್ಯಕ್ಷ ಎಚ್. ಕೃಷ್ಣಪ್ಪ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ವೆಂಕಟೇಶ ಕಾರಂತ್, ಬೈಂದೂರು ಜ್ಯೂನಿಯರ್ ಕಾಲೇಜಿನ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ವಸಂತ್, ಕಾರ್ಯದರ್ಶಿ ಸೌರಭ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಬೈಂದೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಜ್ಯೂನಿಯರ್ ಕಾಲೇಜು ಉಪಪ್ರಾಂಶುಪಾಲೆ ಜ್ಯೋತಿ ಸ್ವಾಗತಿಸಿದರು. ಶಿಕ್ಷಕ ನಾರಾಯಣರಾಜು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.