ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಟ ಮತ್ತು ಪಾಠ ಕಲಿಕೆಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುದೃಡವಾದ ದೇಹದಲ್ಲಿ ಸ್ವಸ್ಥವಾದ ಮನಸ್ಸು ಸದಾ ನೆಲೆಯೂರಿರುತ್ತದೆ. ಯಾವ ಶಾಲಾ ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗಳಲ್ಲಿ ಕ್ರೀಡೆಗೆ ಪ್ರಾಶಸ್ತ್ಯವನ್ನು ಕೊಡುತ್ತದೆಯೊ ಆ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಗುರುತರವಾದ ಲಕ್ಷ್ಯವನ್ನು ಇಟ್ಟಿದೆ ಎಂದು ತಿಳಿಯಬೇಕು. ಕ್ರೀಡಾ ಜಗತ್ತಿನಲ್ಲಿ ಅನೇಕ ಕ್ರೀಡಾ ಪಟುಗಳು ತಮ್ಮ ಪ್ರತಿಭೆಗಳ ಮೂಲಕ ವಿಶವಿಖ್ಯಾತರಾಗಿದ್ದಾರೆ. ಕ್ರೀಡೆಯು ದೈಹಿಕ ಶ್ರಮದ ಜೊತೆಗೆ ಆಂತರಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಕ್ರೀಡೆ ಪ್ರಮುಖ ಕಾರಕ ಅಂಶಗಳಾಗಿದೆ. ಕ್ರೀಡೆಯ ಮೂಲಕವೇ ನಮ್ಮ ಪ್ರತಿಭೆಗಳನ್ನು ಹಾಗೂ ಜೀವನವನ್ನು ನಡೆಸಲು ಸಾಧ್ಯವಿದೆ. ಇದು ವ್ಯಕ್ತಿಗಳಲ್ಲಿ ಶಿಸ್ತು, ಸಂಯಮ, ಸಹಬಾಳ್ವೆ, ನಾಯಕತ್ವ , ಐಕ್ಯತೆ ಮತ್ತು ಕ್ರೀಡಾ ಸ್ಪೂರ್ತಿಯನ್ನು ಬೆಳೆಸುತ್ತದೆ ಎಂದು ಕುಂದಾಪುರ ತಾಲೂಕಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಐ.ಎಫ್.ಎಸ್ ನುಡಿದರು.
ಅವರು ಗುರುಕುಲ ವಿದ್ಯಾಸಂಸ್ಥೆಯ 12ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿ, ಕ್ರೀಡೆಯ ಮಹತ್ವ ಮತ್ತು ಅದರ ಸಮಗ್ರತೆಯ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರಲ್ಲದೇ, ಗುರುಕುಲ ವಿದ್ಯಾಸಂಸ್ಥೆಯ ನಿತ್ಯ ಸುಂದರ ಪರಿಸರದ ಬಗ್ಗೆ, ಮಕ್ಕಳಲ್ಲಿರುವ ಶಿಸ್ತು ಹಾಗೂ ಕ್ರೀಡಾಸ್ಪೂರ್ತಿಗಳ ಕುರಿತು ಪ್ರಶಂಸಿಸಿದರು. ಈ ಕಾರ್ಯಕ್ರಮವು ಕ್ರೀಡಾ ಬಾವುಟವನ್ನು ಹಾರಿಸುವುದರ ಮೂಲಕ ಪ್ರಾರಂಭವಾಗಿ, ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಕರಾಟೆ, ಸ್ಕೇಟಿಂಗ್, ಪ್ಯಾರಾಚುಟ್ ಮತ್ತು ಎರೋಬಿಕ್ಸ್ ಇವೆ ಮುಂತಾದ ಪ್ರಾತ್ಯಕ್ಷಿಕೆಗಳು ಎಲ್ಲರ ಮನಸೂರೆಗೊಂಡವು. ಅಲ್ಲದೇ ವೈಯಕ್ತಿಕ ಮತ್ತು ಗುಂಪಿನ ಆಟಗಳನ್ನು ನಡೆಸಲಾಯಿತು. ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತಲ್ಲದೇ ಹಾಜರಿದ್ದ ಎಲ್ಲಾ ಪಾಲಕರಿಗೂ ವಿಭಿನ್ನ ಬಗೆಯ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಶಾಲೆಯ ನಾಲ್ಕು ತಂಡಗಳಾದ ರಾಮನ್, ಕಲಾಂ, ಆರ್ಯಭಟ ಮತ್ತು ಕಲ್ಪನಾ ತಂಡಗಳ ವಿಜೇತರಿಗೆ 12ನೇವಾರ್ಷಿಕ ಕ್ರೀಡಾಕೂಟದ ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಂಡ್ಯ ಶಿಕ್ಷಣಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳಾದ.ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ ಎಸ್ ಶೆಟ್ಟಿ ಉಪಸ್ಥಿತರಿದ್ದರಲ್ಲದೇ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿದರು. ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸಾಯಿಜು ಕೆ. ಆರ್ ನಾಯರ್ ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಸನ್ನಿ. ಪಿ. ಜಾನ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ, ಅನುಪಮ ಶೆಟ್ಟಿ ಹಾಗೂ ಉಪನ್ಯಾಸಕಿ ಅರ್ಷನಾ ಕಾರ್ಯಕ್ರಮವನ್ನು ನಿರೂಪಿಸಿದರು. ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಸರ್ವರನ್ನು ಸ್ವಾಗತಿಸಿ ಉದ್ಘಾಟಕರ ಪರಿಚಯ ಮಾಡಿದರು. ಅಲ್ಲದೇ, ಶಾಲೆಯ ದೈಹಿಕ ಶಿಕ್ಷಕರಾದ ಬಿನೀಶ್ ರವರು ಸರ್ವರನ್ನು ವಂದಿಸಿದರು.