ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಶಾಲೆಗಳ ಉಳಿಸುವ ಜವಾಬ್ದಾರಿ ಸರ್ಕಾರಕ್ಕೆ ಸೀಮಿತವಲ್ಲ. ಸಾಹಿತ್ಯ ಪರಿಷತ್ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಉಳಿಸುವ ಸಾಹಸಕ್ಕೆ ಮುಂದಾಗದಿದ್ದರೆ, ಶಾಲೆ ಕಾಲಕ್ರಮೇಣ ಮುಚ್ಚಿಹೋಗಲಿದೆ. ಸರ್ಕಾರ ಎರಡು ಮಕ್ಕಳಿದ್ದರೂ ಶಾಲೆ ಮುಚ್ಚುವುದಿಲ್ಲ ಎನ್ನುತ್ತಿದ್ದರೂ ಮಕ್ಕಳೇ ಬಾರದಿದ್ದರೆ ಶಾಲೆ ನಡೆಯುವದಾದರೂ ಹೇಗೆ? ಇತರ ಭಾಷೆ ಜತೆ ಕನ್ನಡ ಉಳಿಸುವ ಪ್ರಯತ್ನ ಆಗಬೇಕಿದೆ ಎಂದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ ಹೇಳಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಕ್ಲಾಡಿ ಎಸ್ಸೆಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸ್ಮಾರಕ ಪ್ರೌಢ ಶಾಲೆಯಲ್ಲಿ ನಡೆದ ೧೬ನೇ ತಾಲೂಕ್ ಕನ್ನಡ ಸಾಹಿತ್ಯ ಸಮ್ಮೇಳನ ಭೂಮಿಗೀತಾ ಸಮಾರೋಪದಲ್ಲಿ ಮಾತನಾಡಿ, ಕನ್ನಡ ಉಳಿವಿಗಾಗಿ ಏಕೀಕರಣಕ್ಕೆ ಹೋರಾಟ ಮಾಡಬೇಕಿದ್ದರೂ ಬಂದ್, ಆಸ್ತಿಪಾಸ್ತಿಗೆ ಹಾನಿ ಮಾಡದ ಹೋರಾಟದಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಭಾರತೀಯ ಸಂಸ್ಕೃತಿ ಮರೆಯಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ನಾವು ಒಲಸೆ ಹೋಗುತ್ತಿದ್ದೇವೆ. ಅಂಗ್ಲಾ ವ್ಯಾಮೋಹ ಕನ್ನಡ ಕಡೆಗಣಿಸಲಾಗುತ್ತಿದೆ. ಕನ್ನಡಕ್ಕೆ ಮೊದಲ ಆಧ್ಯತೆ ನೀಡಿ, ಇತರ ಭಾಷೆಗಳ ವ್ಯಾವಾಹಾರಿಕವಾಗಿ ಅಭ್ಯಾಸ ಮಾಡಬೇಕು. ನಮ್ಮ ಸಂಸ್ಕೃತಿ ಉಳಿಯಬೇಕಿದ್ದರೆ ನಮ್ಮ ಮಾತೃಭಾಷೆ ಉಳಿಯಬೇಕು ಎಂದು ಅಭಿಪ್ರಾಯಪಟ್ಟರು.
ಒಂದು ಕಡೆ ಸರ್ಕಾರ ಕನ್ನಡ ಮಾಧ್ಯಮ ಶಾಲೆ ಮುಚ್ಚುವುದಿಲ್ಲ ಎನ್ನುತ್ತಲೇ ಖಾಸಗಿ ಶಾಲೆಗಳಿಗೆ ಲಂಗುಲಾಗಮಿಲ್ಲದೆ ಅನುಮತಿ ನೀಡುತ್ತಿದೆ. ಪೋಷಕರೂ ಆಂಗ್ಲಾ ಭಾಷೆ ಕಡೆ ವಾಲಿದರೆ ಕನ್ನಡ ಶಾಲೆಗಳು ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಸಾಹಿತ್ಯ ಪರಿಷತ್, ಸಮ್ಮೇಳನಗಳು ಈ ಅಪಸೌವ್ಯದ ಕಡೆ ಗಮನ ಹರಿಸಲಿ ಎಂದು ಸಲಹೆ ಮಾಡಿದರು. ಇಂದು ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮೂಗು ತೂರಿಸುವುದು ಸರಿಯಲ್ಲ. ಸಾಹಿತಿಗಳಿಗೆ ಪಕ್ಷಾಭಿಮಾನವಿದ್ದರೆ ಅದು ಅವರು ವೈಯಕ್ತಿಕ ನೆಲೆಯಲ್ಲಿ ಇಟ್ಟುಕೊಂಡು, ಸಮ್ಮೇಳನದಲ್ಲಿ ಪ್ರಸ್ತಾಪಿಸುವ ಹೊಸ ಸಂಸ್ಕೃತಿ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ಅವರು, ಸಾಹಿತ್ಯ ಸಮ್ಮೇಳನಗಳು ಕನ್ನಡ ಉಳಿವು, ನಮ್ಮ ಸಂಸ್ಕೃತಿ, ಕನ್ನಡ ಶಾಲೆ, ಸಾಹತ್ಯ ಕೃಷಿ ಬಗ್ಗೆ ಗಮನ ಹರಿಸುವುದು ಒಳಿತು ಎಂದು ಸೂಚಿಸಿದರು.
ಕುಂದಾಪುರ ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಮ್ಮೇಳನ ಅಧಕ್ಷ ಬಿ.ಅಪ್ಪಣ್ಣ ಹೆಗ್ಡೆ ಪ್ರತಿಸ್ಪಂದನ ನೀಡಿದರು.
ಸಾಮಾಜ ಸೇವೆಯಲ್ಲಿ ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ, ಶಿಕ್ಷಣ ಕ್ಷೇತ್ರ ಸಾಧಕ ಆರ್.ಎನ್.ರೇವಣ್ಕರ್, ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ಯಕ್ಷಗಾನ ಕಲಾವಿದ ಐರ್‌ಬೈಲು ಆನಂದ ಶೆಟ್ಟಿ, ರಂಗಭೂಮಿ ಕಲಾವಿದ ಯೋಗೀಶ್ ಬಂಕೇಶ್ವರ, ವಿಜಯವಾಣಿ ಹಿರಿಯ ವರದಿಗಾರ ಶ್ರೀಪತಿ ಹೆಗಡೆ ಹಕ್ಕಾಡಿ, ಕೃಷಿಕ ಶ್ರೀನಿವಾಸ ಶ್ಯಾನುಭಾಗ (ನಾಗೇಶ) ಕೊಳೂರು, ಸಮಾಜ ಸೇವಕ ತಾರಾನಾಥ ಮೇಸ್ತ ಶಿರೂರು, ಜಾನಪದ ಕಲಾವಿದ ಬೀಜಾಡಿ ಭಜನೆ ರಾಮಣ್ಣ, ಸಂಘ ಸಂಸ್ಥೆ ಬಟ್ಟೆಕುದ್ರು ಶ್ರೀ ರಾಮ ಯುವಕ ಭಜನಾ ಮಂಡಳಿಯನ್ನು ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ವಿಶ್ರಾಂತ ಉಪನ್ಯಾಸಕ ಸಿ.ಉಪೇಂದ್ರ ಸೋಮಯಾಜಿ ಸನ್ಮಾನಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಕ್ಲಾಡಿ ಗ್ರಾಪಂ ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಹೊಳ್ಮಗೆ, ಕುಂದಾಪುರ ತಾಪಂ ಸದಸ್ಯ ರಾಜು ದೇವಾಡಿಗ, ಉದ್ಯಮಿ ರಘುರಾಮ ಶೆಟ್ಟಿ ಯಳೂರು, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಭು ಕೆನಡಿ ಫೆರೇರಾ, ಕಾರ್ಕಳ ಕಸಾಪ ಅಧಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕಸಾಪ ಪ್ರಧಾನ ಕಾರ‍್ಯದರ್ಶಿ ಸೂರಾಲು ನಾರಾಯಣ ಮಡಿ, ಗೌರವ ಕಾರ‍್ಯದರ್ಶಿ ಸುಬ್ರಹ್ಮಣ್ಣ ಶೆಟ್ಟಿ ಇದ್ದರು. ತಾಲೂಕು ಕಸಾಪ ಗೌರವ ಕಾರ‍್ಯದರ್ಶಿ ಡಾ.ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸಂಜೀವ ಬಿಲ್ಲವ ಸನ್ಮಾನಿತರ ಪರಿಚಯಿಸಿ, ನಿರೂಪಿಸಿದರು.