ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ಸಮಷ್ಠಿಯ ಕಲೆ. ಒಬ್ಬರಿಂದ ಅದು ಪರಿಪೂರ್ಣಗೊಳ್ಳಲು ಸಾಧ್ಯವಿಲ್ಲ. ಆಧುನಿಕ ಯುಗದಲ್ಲಿ ನಮ್ಮ ನಮ್ಮ ನಡುವೆ ಕಟ್ಟಿಕೊಂಡಿರುವ ಗೋಡೆಯನ್ನು ತೊಡೆದುಹಾಕಿ, ರಂಗ ಉತ್ಸವಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಮಹತ್ತರ ಕೆಲಸ ರಂಗಭೂಮಿಯಿಂದಾಗುತ್ತಿದೆ ಎಂದು ಬರಹಗಾರ್ತಿ, ರಂಗ ನಿರ್ದೇಶಕಿ ಅಭಿಲಾಷಾ ಹಂದೆ ಹೇಳಿದರು.
ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ ೨೦೧೭ ನಾಟಕ ಸಪ್ತಾಹದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿ ಇತಿಹಾಸದಲ್ಲಿ ಎದುರಾದ ಬಿಕ್ಕಟ್ಟುಗಳಿಗೆ ನಾಟಕಗಳ ಮೂಲಕ ಸಂಚಲನ ಮೂಡಿಸಿ, ಜನರನ್ನು ಜಾಗೃತಿಗೊಳಿಸಿದ ಹೆಗ್ಗಳಿಕೆ ರಂಗಭೂಮಿಯದ್ದು. ಕಲೆ ಮತ್ತು ಸಾಹಿತ್ಯ ಮನುಷ್ಯನ ಬದುಕನ್ನು ಖುಷಿ ಹಾಗೂ ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ. ಗಣೇಶ್ ಅಮೀನಗಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುರಭಿ ರಿ. ಬೈಂದೂರು ಇದರ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಉದ್ಯಮಿ ಮೋಹನ ರೇವಣ್ಕರ್, ಸುರಭಿ ಸಂಸ್ಥೆಯ ಅಧ್ಯಕ್ಷ ಶಿವರಾಮ ಕೊಠಾರಿ, ಯಸ್ಕೊರ್ಡ್ ಟ್ರಸ್ಟ್ ನಿರ್ದೇಶಕ ಕೃಷ್ಣಮೂರ್ತಿ ಉಡುಪ ಮೊದಲಾದವರು ಉಪಸ್ಥಿತರಿದ್ದರು.
ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಸ್ತಾವನೆಗೈದರು. ನಿರ್ದೇಶಕ ಗಣಪತಿ ಹೋಬಳಿದಾರ್ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ ವಂದಿಸಿದರು. ಶಿಕ್ಷಕ ಆನಂದ ಮದ್ದೋಡಿ ಹಾಗೂ ಭ್ರಮರ ಉಡುಪ ಕಾರ್ಯಕ್ರಮ ನಿರೂಪಿಸಿದರು.
Also read:
► ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಬದುಕಿನ ಗಟ್ಟಿತನ ಕರಗತ. ರಂಗಸುರಭಿ 2017 ನಾಟಕ ಸಪ್ತಾಹ ಉದ್ಘಾಟಿಸಿ: ಡಾ. ಗಣೇಶ್ ಅಮೀನಗಡ – http://kundapraa.com/?p=26982


















