ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುತ್ತಲಿನ ಸಮಸ್ಯೆ, ತಲ್ಲಣಗಳಿಗೆ ಸ್ಪಂದಿಸಿ ಸಮಾಜವನ್ನು ಎಚ್ಚರಿಸುವ ಜೊತೆಗೆ ವಿಘಟನೆಯ ಕಾಲಘಟ್ಟದಲ್ಲಿಯೂ ಎಲ್ಲರನ್ನೂ ಬೆಸೆಯುವ ಬಹುಮುಖ್ಯ ಮಾಧ್ಯಮವಾಗಿ ರಂಗಭೂಮಿ ಬೆಳೆದಿದೆ ಎಂದು ರಂಗ ಕಲಾವಿದೆ, ಸಾಹಿತಿ ಮಮತಾ ಅರಸಿಕೆರೆ ಹೇಳಿದರು.
ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ ೨೦೧೭ ನಾಟಕ ಸಪ್ತಾಹದ ಎರಡನೇ ದಿನ ಏಣಗಿ ಬಾಳಪ್ಪ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು. ಸಿನೆಮಾ, ಧಾರಾವಾಹಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಬಗೆಯ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಅಂಶಗಳು ಸಮಾಜವನ್ನು ಕಲುಷಿತಗೊಳಿಸಿರುವ ಹೊತ್ತಿನಲ್ಲಿ ಕ್ಷೇತ್ರದ ವಿಚಾರಗಳನ್ನು ಒಳಗೊಂಡಿರುವ ರಂಗಭೂಮಿ ಪರಿಹಾರ ಆಗಬಲ್ಲದು. ದಾರಿ ತಪ್ಪುತ್ತಿರುವ ಯುವಕ ಸಮುದಾಯ ರಂಗಭೂಮಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳವ ಅಗತ್ಯವೂ ಇದೆ ಎಂದರು.
ಈ ಸಂದರ್ಭ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಅರಸಿಕೆರೆಯ ಡಾ| ಹೆಚ್. ಆರ್. ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಾಟಕ ಕಲಾವಿದ ಶ್ರೀಧರ ಬಿ.ಎಸ್ ಅವರನ್ನು ಗೌರವಿಸಲಾಯಿತು.
ರೋಟರಿ ಬೈಂದೂರು ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ. ಪ್ರವೀಣ್ ಶೆಟ್ಟಿ, ಉಪ್ಪುಂದ ಬೈಂದೂರು ಲಯನ್ಸ್ ಅಧ್ಯಕ್ಷ ಕುಶಲ್ ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀಧರ ಬೆಲೆಮನೆ, ಸುರಭಿಯ ಗೌರವಾಧ್ಯಕ್ಷ ತಿಮ್ಮಪ್ಪಯ್ಯ ಜಿ. ಮಯ್ಯಾಡಿ, ನಿರ್ದೇಶಕ ಸುಧಾಕರ ಪಿ. ಬೈಂದೂರು ಮೊದಲಾದವರು ಉಪಸ್ಥಿತರಿದ್ದರು. ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ ವಂದಿಸಿದರು. ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಹಾಗು ಪೂರ್ಣಿಮಾ ಪ್ರಾರ್ಥಿಸಿದರು.
ಬಳಿಕ ರಾಜೇಂದ್ರ ಕಾರಂತ ಬೆಂಗಳೂರು ರಚಿಸಿ ನಿರ್ದೇಶಿಸಿದ ಚಿತ್ತಾರ ಬೆಂಗಳೂರು ಪ್ರಸ್ತುತ ಪಡಿಸಿದ ಸಂಜೆಹಾಡು ನಾಟಕ ಪ್ರದರ್ಶನಗೊಂಡಿತು.