ವೈದೇಹಿಯವರ ಕಥೆಯಾಧಾರಿತ ‘ಅಮ್ಮಚ್ಚಿಯೆಂಬ ನೆನಪು’ ಹಿರಿತೆರೆಗೆ ತರಲು ಸಿದ್ದತೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಲೇಖನ.
ವೈದೇಹಿ, ಕನ್ನಡ ನಾಡು ಕಂಡ ಸಹೃದಿಯಿ ಸಾಹಿತಿ. ಕನ್ನಡ ಸಾಹಿತ್ಯ ಲೋಕವನ್ನು ತಮ್ಮದೇ ವಿಭಿನ್ನ ಆಯಾಮದ ಕಥೆ-ಕವಿತೆಗಳಿಂದ ಶ್ರೀಮಂತಗೊಳಿಸಿದವರು. ಕುಂದಾಪುರ ಕನ್ನಡದಲ್ಲೇ ಅನೇಕ ಕೃತಿಗಳನ್ನು ರಚಿಸಿ, ಕುಂದಗನ್ನಡದ ಕಂಪನ್ನು ಹಲವೆಡೆ ಪಸರಿಸಿದವರು. ವೈದೇಹಿಯವರ ಅನೇಕ ಕಥೆ-ಕವನಗಳು ಅಸಂಖ್ಯಾತ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸ್ತ್ರೀ ಲೋಕದ ಸೂಕ್ಷ್ಮತೆಯ ಅನಾವರಣ ಎಲ್ಲೆಡೆ ಬಿಂಬಿತವಾಗಿದೆ. ವೈದೇಹಿಯವರ ಕೃತಿಗಳು ಈಗಾಗಲೇ ಧಾರಾವಾಹಿ, ನಾಟಕಗಳಾಗಿಯೂ ನೋಡುಗರನ್ನು ಆಕರ್ಷಿಸಿದೆ. ಇವರ “ಅಮ್ಮಚ್ಚಿಯೆಂಬ ನೆನಪು” ಕೃತಿ ಇದೀಗ ಸಿನೆಮವಾಗುತ್ತಿರುವುದು ಹೊಸ ಸುದ್ದಿ. ಹೌದು. ಈ ಹಿಂದೆ ವೈದೇಹಿಯವರ “ಅಕ್ಕು”, “ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು” ಹಾಗೂ “ಅಮ್ಮಚ್ಚಿಯೆಂಬ ನೆನಪು” ಸಣ್ಣ ಕತೆಗಳನ್ನು ಒಗ್ಗೂಡಿಸಿ “ಅಕ್ಕು” ಎಂಬ ನಾಟಕವನ್ನು ಚಂಪಾ ಶೆಟ್ಟಿಯವರು ರಂಗ ಮಂಟಪ ತಂಡಕ್ಕೆ ಕಟ್ಟಿಕೊಟ್ಟಿದ್ದರು. ಸಂಪೂರ್ಣ ಕುಂದಾಪುರ ಕನ್ನಡದಲ್ಲೇ ಇರುವ ಈ ನಾಟಕ ಇದಾಗಲೆ 50ನೇ ಪ್ರದರ್ಶನದತ್ತದಾಪುಗಾಲಿಡುತ್ತಿದೆ. ಇದರ ಹೊಸ್ತಿಲಲ್ಲೇ ಚಂಪಾ ಶೆಟ್ಟಿಯವರು “ಎಪ್ರಾನ್ ಪ್ರೊಡಕ್ಷನ್” ಲಾಂಛನದಡಿ ಅದೇ ಕತೆಯನ್ನಾದರಿಸಿ “ಅಮ್ಮಚ್ಚಿಯೆಂಬ ನೆನಪು” ಚಲನಚಿತ್ರದ ಸಿದ್ದತೆಯಲ್ಲಿದ್ದಾರೆ.

Call us

Click Here

ಅಕ್ಕು ನಾಟಕ ಹಾಗೂ ಈ ಚಲನಚಿತ್ರ ಮಾಡಬೇಕೆಂಬ ಆಶಯ ಹುಟ್ಟಿಕೊಂಡ ಬಗೆಯನ್ನು ನಿರ್ದೇಶಕಿ ಚಂಪಾ ಶೆಟ್ಟಿಯವರು ಹೀಗೆ ಬಿಚ್ಚಿಡುತ್ತಾರೆ. ಎಮ್ ಎಸ್ ಆಶಾದೇವಿಯವರ ‘ಅಕ್ಕು’ ಕಥೆಯ ವಿಮರ್ಶೆ ಓದಿದ ನಂತರ ಆ ಪಾತ್ರದ ಬಗ್ಗೆ ವಿಭಿನ್ನ ಬಗೆಯ ಆಕರ್ಷಣೆ ಉಂಟಾಯಿತು. ಯಾವುದೇ ರೀತಿಯ ಆಡಂಬರ ಇಲ್ಲದೇ ದಿನ ನಿತ್ಯದ ಜೀವನದಲ್ಲಿ ಸ್ತ್ರೀ ಒಳಗಾಗುವ ಶೋಷಣೆಗಳನ್ನು ಸಹಜ ರೀತಿಯಲ್ಲಿ ನಿರೂಪಿಸುವ ‍ವೈದೇಹಿಯವರ ಕಥನ ಶೈಲಿ ಆಪ್ತವೆನಿಸಿತು. ‘ಅಕ್ಕು’ ಎಂಬ ಪಾತ್ರವನ್ನು ರಂಗರೂಪಕ್ಕೆ ತರಬೇಕು ಎಂಬ ಆಲೋಚನೆ ಹುಟ್ಟಿದಾಗ ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಹಾಗು ‘ಅಮ್ಮಚ್ಚಿಯೆಂಬ ನೆನಪುಗಳು’ ಜೊತೆಯಾದವು. ಕಥೆಯನ್ನು ನನ್ನದಾಗಿಸಿಕೊಳ್ಳುವುದಕ್ಕಿಂತಲೂ, ಇದ್ದ ಹಾಗೆಯೇ ರಂಗದ ಮೇಲೆ ತರಬೇಕೆನ್ನುವುದು ನನ್ನ ಉದ್ದೇಶವಾಗಿತ್ತು. ಅಂತೆಯೇ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಮೂರೂ ಕಥೆಗಳನ್ನು ಪೋಣಿಸುತ್ತಾ ಹೋದೆ. ಸಂಭಾಷಣೆಯ ಹೊಣೆಯನ್ನು ವೈದೇಹಿಯವರೇ ಹೊತ್ತುಕೊಂಡರು. ವೈದೇಹಿಯವರ ಭಾಷೆ,ಅವರು ಸಂದರ್ಭಗಳನ್ನು ಕಟ್ಟಿಕೊಡುವ ರೀತಿ, ಹಾಗೂ ಆ ಕಥೆಗಳಲ್ಲಿನ ಸ್ಥಳೀಯ ಸೊಗಡು ‘ಅಕ್ಕು’ ನಾಟಕವನ್ನು ಜನರು ಇನ್ನಷ್ಟು ಇಷ್ಟಪಡಲು ಕಾರಣವಾಯಿತು. ‘ಅಕ್ಕು’ ನಾಟಕದ ಮೂರು ಪ್ರಮುಖ ಸ್ರ್ರೀ ಪಾತ್ರಗಳಾದ ಅಕ್ಕು, ಅಮ್ಮಚ್ಚಿ ಹಾಗೂ ಪುಟ್ಟಮ್ಮತ್ತೆ ಮೂರು ತಲೆಮಾರಿನ‍ ಸ್ತ್ರೀ ಶೋಷಣೆಯ ಕಥೆಗಳನ್ನು ಹೇಳುತ್ತಾಸರೆ. ‘ಒಳಹೋಗಿ ನಿಂತವಳ ಹೊರಗು ಮಾಡಿದರು, ಬಯಲಂತೆ ಬಂದವಳ ಬದಲು ಮಾಡಿದರು.. ಸಹಜವಾಗಿದ್ದಳು ಅಸಹಜಕ್ಕೆ ದೂಡಿದರು. ನಿಜವಾಗಿದ್ದವಳನ್ನು ಸುಳ್ಳು ಮಾಡಿದರು’, ಇಂದಿಗೂ ಈ ನಾಟಕದ ಕಥಾವಸ್ತು ಪ್ರಸ್ತುತ ಎನಿಸಿದ್ದರಿಂದ ಜನ ಒಪ್ಪಿಕೊಂಡರು. ರಂಗಭೂಮಿಯಿಂದ ತಲುಪಬಹುದಾದ ಪ್ರೇಕ್ಷಕ ಸಮೂಹ ಎಷ್ಟಾದರೂ ಮಿತಿಯುಳ್ಳದ್ದು. ಅಷ್ಟೇ ಅಲ್ಲದೆ ರಂಗಭೂಮಿಗೆ ತನ್ನದೇ ಆದ ಚೌಕಟ್ಟಿದೆ. ಕೆಲವು ದೃಶ್ಯಗಳನ್ನು ಸಿನಿ ಮಾಧ್ಯಮದಲ್ಲಿ ಹೆಚ್ಚು ಪ್ರಯೋಗಾತ್ಮಕವಾಗಿನಿರೂಪಿಸಬಹುದು ಎಂದನಿಸಿದ್ದರಿಂದ ಅಕ್ಕು ನಾಟಕ ಸಿನಿಮಾ ಆಗುವತ್ತ ಸಾಗಿದೆ. ಸ್ತ್ರೀ ಸಂವೇದನೆಗೆ ಮಿಡಿಯುವ ಕಥಾ ಹಂದರವನ್ನು ಎಲ್ಲರಿಗೂ ತಲುಪಿಸಬೇಕೆಂಬ ಸದಾಶಯದಿಂದ ‘ಅಕ್ಕು’ ವನ್ನು ‘ಅಮ್ಮಚ್ಚಿಯೆಂಬ ನೆನಪುಗಳು ‘ ಹೆಸರಿನಲ್ಲಿ ಚಿತ್ರಕಾವ್ಯವಾಗಿಸುವ ಪ್ರಯತ್ನ ನಮ್ಮದು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಗಳಿಸಿದ ಅನುಭವವನ್ನು ಸುರಿದು, ರಂಗಭೂಮಿಯ ಮಿತ್ರರೆಲ್ಲರೂ ಸೇರಿ ಈ ಸಿನಿಮಾವನ್ನು ಕಟ್ಟುತ್ತಿದ್ದೇವೆ. ಅಮ್ಮಚ್ಚಿ, ಅಕ್ಕು ಹಾಗೂ ಪುಟ್ಟಮತ್ತೆ ಸಿನಿಮಾದ ಮೂಲಕ ಇನ್ನುಹೆಚ್ಚು ಜನರನ್ನು ತಲುಪಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ.

ಚಿತ್ರ ತಂಡ ಇದಾಗಲೇ, ಎಲ್ಲ ಪೂರ್ವ ತಯಾರಿಗಳನ್ನು ಮುಗಿಸಿ, ಚಿತ್ರೀಕರಣಕ್ಕೆ ಸಿದ್ದವಾಗಿದೆ. ಕುಂದಾಪುರದ ಆಸು-ಪಾಸಿನ ಸುಂದರ ಪರಿಸರದಲ್ಲಿ ಜನವರಿ ಮೊದಲ ವಾರದಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಕನ್ನಡದ ಅನೇಕ ಹೆಸರಾಂತ ಕಲಾವಿದರು, ರಂಗಕರ್ಮಿಗಳು,ತಂತ್ರಜ್ಞರು ಕೆಲಸ ಮಾಡುತ್ತಿದ್ದು, ವೈದೇಹಿಯವರೇ ಸಂಭಾಷಣೆಯನ್ನೂ ಬರೆದಿದ್ದಾರೆ. ಆಯ್ದ ವೈದೇಹಿಯವರ ಹಾಡುಗಳನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕುಂದಾಪುರ ಕನ್ನಡದಲ್ಲೇ ಚಿತ್ರಿತವಾಗಲಿರುವ ಈ ಸಿನೆಮಾ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಒಂದು ವಿಭಿನ್ನ ಚಿತ್ರವನ್ನು ಕಲಾಭಿಮಾನಿಗಳಿಗೆ ನೀಡುತ್ತಿರುವ ತಂಡಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ.

 

Leave a Reply