ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅನುಮಾನದ ದೃಷ್ಟಿಯೇ ಅಶಾಂತಿಗೆ ಕಾರಣವಾಗುತ್ತಿದೆ. ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಒಂದೇ ರಾಗದಿಂದ ಹಾಡುವ ಕಾಲ ಬರಬೇಕು. ಎಲ್ಲರನ್ನೂ ಗೌರವದೃಷ್ಟಿಯಲ್ಲಿ ನೋಡಬೇಕು, ಮಾನವ ಗುಣ ಕಾಣಬೇಕು. ಈ ಎಲ್ಲಾ ಬದಲಾವಣೆಯಿಂದ ರಾಗದ್ವೇಷವಿಲ್ಲದ ಬದುಕು ಸಾಧ್ಯ. ಎಲ್ಲರೂ ವಿಶ್ವ ಮಾನವರಾಗೋಣ ಎಂದು ಕನ್ನಡದ ಖ್ಯಾತ ಸಾಹಿತಿ ವೈದೇಹಿ ಹೇಳಿದರು.
ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ವಿವಿಧ ಸಂಘಟನೆ ಆಶ್ರಯದಲ್ಲಿ ಮಂಗಳವಾರ ನಡೆದ ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿ, ಮಹಾತ್ಮ ಗಾಂಧಿ ಕೂಡಾ ಎಲ್ಲರಲ್ಲೂ ಮಾನವೀಯ ಗುಣ ಕಂಡಿದ್ದರಿಂದ ಮಹಾತ್ಮರಾದರು. ಹಂತಕರ ಗುಂಡಿಗೆ ಬಲಿಯಾದ ದಿನ ಮಾನವ ಸರಪಳಿ ಮೂಲಕ ಗಾಂಧಿ ಆಶಯ ಈಡೇರಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್, ಮುಖಂಡರಾದ ವಿನೋದ್ ಕ್ರಾಸ್ತಾ, ಸುರೇಶ್ ಕಲ್ಲಾಗರ, ವಿ.ನರಸಿಂಹ, ಪುರಸಭೆ ಸದಸ್ಯೆ ಕಲಾವತಿ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ವಿ.ನರಸಿಂಹ, ಹಿರಿಯ ಕಾಂಗ್ರೆಸಿಗ ಮಾಣಿ ಗೋಪಾಲ, ಕಾಂಗ್ರೆಸ್ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ, ದಲಿತ ಸಂಘರ್ಷ ಸಮಿತಿ ಭೀಮ ಗರ್ಜನೆ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು, ನಿವೃತ್ತ ಉಪನ್ಯಾಸಕ ಭಾಸ್ಕರ ಮೈಯ್ಯ ಗುಂಡ್ಮಿ, ಯುವ ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ, ಸಂಯುಕ್ತ ಜನತಾ ದಳ ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಐಟಿ ಸೆಲ್ ಕಾರ‍್ಯದರ್ಶಿ ಚಂದ್ರಶೇಖರ ಶೆಟ್ಟಿ, ಭಂಡಾರ್‌ಕಾರ‍್ಸ್ ಕಾಲೇಜ್ ಇಂಗ್ಲೀಷ್ ಉಪನ್ಯಾಸಕ ಹಯವದನ ಉಪಾಧ್ಯ ಮೂಡುಸಗ್ರಿ, ಲಕ್ಷ್ಮಣ ಶೆಟ್ಟಿ, ಮಹಾಬಲ ವಡೇರ ಹೋಬಳಿ ಮುಂತಾದವರು ಇದ್ದರು.


ಬೈಂದೂರಿನಲ್ಲಿ ನಡೆದ ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಭೋದಿಸುತ್ತಿರುವ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಾಂತಿ ಪಿರೆರಾ















