ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮೀಪದ ಕಾರಣಿಕ ಹಾಗೂ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾ ಗಣಯಾಗ(೧೦೦೮ ತೆಂಗಿನಕಾಯಿ) ನವಚಂಡಿ ಹವನ ಮತ್ತು ಸಂಕಷ್ಟಹರ ಚತುರ್ಥಿ ಮಹಾಪೂಜೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಸಾಂಗವಾಗಿ ನೆರವೇರಿತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಹಸ್ರ ನಾಳಿಕೇರ ಮಹಾ ಗಣಯಾಗ, ನವಚಂಡಿ ಹವನ, ಸಂಕಷ್ಟಹರ ಚತುರ್ಥಿ ಪೂಜೆಯಲ್ಲಿ ಪಾಲ್ಗೊಂಡು ಕೃಥಾರ್ತರಾದರು. ಕಿಕ್ಕಿರಿದು ಸೇರಿದ ಜನಸಂದಣಿಯ ನಡುವೆಯು ಆಡಳಿತ ಮಂಡಳಿ ಭಕ್ತರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಸಾಂಗವಾಗಿ ಸಾವಿರಾರು ಭಕ್ತಸಮೂಹ ದೇವರ ದರ್ಶನ ಪಡೆದರು. ಧಾರ್ಮಿಕ ಮಹೋತ್ಸವದ ಅಂಗವಾಗಿ ನವಗ್ರಹ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮತ್ತು ಹವನ, ಧನ್ವಂತರಿ ಹವನ, ನವಾಕ್ಷರೀ ಮಂತ್ರಜಪ ಹಾಗೂ ಹವನ, ರುದ್ರಪಾರಾಯಣ ಹಾಗೂ ರುದ್ರ ಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ, ಅಧಿವಾಸ ಹವನ, ಕಲಾತತ್ವ ಹವನ, ಶ್ರೀ ಸ್ವಾಮಿಗೆ ೧೦೮ ಕಲಶಾಭಿಷೇಕ, ಕನಕಾಭಿಷೇಕ ವಿದ್ಯುಕ್ತವಾಗಿ ಸಂಭ್ರಮ ಸಡಗರದಲ್ಲಿ ಜರುಗಿತು.
ಫೆ.೦೧ರಂದು ರಾತ್ರಿ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿಯವರಿಂದ ಯಕ್ಷಗಾನ, ಫೆ. ೦೨ರಂದು ರಾತ್ರಿ ಕುಂದಾಪುರದ ರೂಪಕಲಾ ತಂಡದವರಿಂದ ಹಾಸ್ಯ ನಾಟಕ, ಫೆ. ೦೩ರಂದು ಸಂಜೆ ೭ರಿಂದ ಮಾಯಾಲೋಕ ಕಲ್ಲಡ್ಕದ ಶ್ಯಾಂ ಜಾದೂಗಾರ್ ಅವರಿಂದ ಜಾದೂ ಹಾಡು, ಮಿಮಿಕ್ರಿ ನಡೆಯಿತು. ದೇವಳದ ಸಂಪೂರ್ಣ ಪುಷ್ಪಾಲಂಕಾರ ಸೇವೆಯನ್ನು ಸುರತ್ಕಲ್‌ನ ಜೆ. ಡಿ. ವೀರಪ್ಪ ಅವರು ನಡೆಸಿಕೊಟ್ಟರು. ದೇವಳವನ್ನು ತಳಿರು ತೋರಣ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪ್ರತಿದಿನ ಸಂಜೆ ಕದ್ರಿ ರಮೇಶನಾಥ್ ಮತ್ತು ಹರಿದಾಸ ಡೋಗ್ರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ಕಛೇರಿ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್, ಪ್ರಧಾನ ಅರ್ಚಕರಾದ ಬಾಲಚಂದ್ರ ಭಟ್, ಹಟ್ಟಿಯಂಗಡಿ ಶ್ರೀ ಸಿಧ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ್‌ಕುಮಾರ್, ಅರ್ಚಕ ವೃಂದ, ಉತ್ಸವ ಸಮಿತಿಯವರು ಉಪಸ್ಥಿತರಿದ್ದರು.