ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ವರ್ಧಂತಿ, ಶತಚಂಡಿಕಾಯಾಗದ ಧಾರ್ಮಿಕ ಕಾರ್ಯಗಳು ಆನಗಳ್ಳಿ ಚೆನ್ನಕೇಶವ ಗಾಯತ್ರಿ ಭಟ್ಟರ ನೇತೃತ್ವದಲ್ಲಿ ಪ್ರಾರಂಭಗೊಂಡಿತು. ಅಷ್ಟೋತ್ತರ ಶತಕಲಶ ಸ್ಥಾಪನೆ, ವಾಸ್ತುಪೂಜೆ, ಶತಕಲಾಭಿಷೇಕ, ಯಾಗದ ಪೂರ್ವಾಂಗ, ಸಾಮೂಹಿಕ ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಿತು. ಶುಕ್ರವಾರ ನಾಗಮಂಡಲೋತ್ಸವದ ವರ್ಧಂತಿಯ ಪ್ರಯುಕ್ತ ಮೂಲ ನಾಗಬನದಲ್ಲಿ ಕಲಾತತ್ವಹೋಮ ಹಾಗೂ ನಾಗದೇವರಿಗೆ ಕಲಶಾಭಿಷೇಕ ನಡೆಯಿತು. ನಂತರ ಶ್ರೀಕ್ಷೇತ್ರ ಪೆರ್ಡೂರಿನ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಕಲ್ಲಂಗಳ ಇವರಿಂದ ನಾಗಸಂದರ್ಶನ ಜರುಗಿತು. ಮಧ್ಯಾಹ್ನ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಕರಾವಳಿ ಮೂರು ಜಿಲ್ಲೆಯ ಸುಮಾರು ಐದು ಸಹಸ್ರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಕೊಂಡದಕುಳಿ ಪೂರ್ಣಚಂದ್ರ ಯಕ್ಷಗಾನ ಮೇಳ ಕುಂಭಾಶಿ ಇವರಿಂದ ಯಕ್ಷಗಾನ ಪ್ರದರ್ಶನಗೊಂಡಿತು. ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಸೇವಾಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ಶ್ರೀನಿವಾಸ ಕುಮಾರ್, ಮಂಜುನಾಥ ಆಚಾರ್ಯ, ಬಿ. ಮಾಧವ ರಾವ್, ಅಣ್ಣಪ್ಪ ಪೂಜಾರಿ ಇದ್ದರು.










