ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆದರ್ಶ ಪುರುಷರಾದ ಕೋಟಿ ಚೆನ್ನಯರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಏಳಿಗೆಗಾಗಿ ಎಲ್ಲೆಡೆಯೂ ಬಿಲ್ಲವ ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿದೆ. ಸಮುದಾಯದ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರುವ ಮೂಲಕ ಸಮಾಜಕ್ಕೆ ಒಂದು ಸಂದೇಶ ನೀಡುತ್ತಿದೆ. ಇದು ನಿರಂತರವಾಗಿ ಮುಂದುವರಿಯಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಬಿಲ್ಲವ ಸಮಾಜ ಸೇವಾ ಸಂಘ ಯಡ್ತರೆ ಇದರ ವಿಂಶತಿ ವರ್ಷಾಚರಣೆಯ ಅಂಗವಾಗಿ ಶನಿವಾರ ಯಡ್ತರೆ ಬೈಪಾಸ್ ಬಳಿ ಆಯೋಜಿಸಲಾದ ಬಿಲ್ಲವ ಸಮ್ಮಿಲನ ೨೦೧೮ ’ಕೋಟಿ ಚೆನ್ನಯ್ಯ ಟ್ರೋಫಿ’ ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಬೈಂದೂರು ತಾಲೂಕು ಕೇಂದ್ರವಾಗಿ ರೂಪುಗೊಳ್ಳುವುದರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸದ್ಯದಲ್ಲೇ ಕೋರ್ಟ್, ತಾಲೂಕು ಪಂಚಾಯತ್ ಹಾಗೂ ಇತರೆ ಕಛೇರಿಗಳ ಕಾರ್ಯರಂಭ ಮಾಡಲಿವೆ. ಕೆಎಸ್‌ಆರ್‌ಟಿಸಿ ಡಿಪೋ ಕೂಡ ಮಂಜೂರಾಗಿದ್ದು ಜನರಿಗೆ ಅನುಕೂಲವಾಗಲಿದೆ. ಬಿಲ್ಲವ ಸಂಘಟನೆ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸುವುದಲ್ಲದೇ, ವೈಯಕ್ತಿಯವಾಗಿ ನೆರವು ನೀಡುವುದಾಗಿ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕೋಟಿ ಚೆನ್ನಯ್ಯರ ಇತಿಹಾಸದ ಹಿಂದೆ ಎಲ್ಲರ ಎದುರಿಗೂ ತಲೆಯೆತ್ತುವ ಸ್ವಾಭಿಮಾನ ಬದುಕಿನ ಕಲ್ಪನೆ ಇದೆ. ಅವರು ಸಾಮಾನ್ಯರಂತೆ ಬದುಕಿದ್ದರೆ ಇಂದು ಅವರನ್ನು ನೆನೆಯುತ್ತಲೇ ಇರಲಿಲ್ಲ. ಸ್ವಾಭಿಮಾನದ ಬದುಕಿನ ಯೋಜನೆ ಅವರನ್ನು ದೇವರನ್ನಾಗಿಸಿದೆ. ಸಂಘಟನೆಗಳು ಸೂಜಿದಾರದಂತೆ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಸಮಾಜದ ಕಡು ಬಡವನೂ ಸ್ವಂತ ಕಾಲಮೇಲೆ ನಿಂತು ಬದುಕು ಕಟ್ಟಿಕೊಳ್ಳುವ ದಿನಗಳು ಬಂದಾಗ ಸಂಘಟನೆಯ ಉದ್ದೇಶ ಸಾರ್ಥಕಗೊಳ್ಳುತ್ತದೆ ಎಂದರು.
ಯಡ್ತರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ ಬೆಳಗಲ್‌ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬಿಲ್ಲವ, ಬೈಂದೂರು ವಲಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಉಬ್ಜೇರಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ಉದ್ಯಮಿಗಳಾದ ಲಕ್ಷ್ಮಣ ಪೂಜಾರಿ, ಮಹೇಶ್ ಪೂಜಾರಿ, ನಾಗರಾಜ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮೀನಾಕ್ಷಿ ಯಡ್ತರೆ, ಸೀತು ಪೂಜಾರ್ತಿ ಪಡುವರಿ, ಲಕ್ಷ್ಮಿ ವಸ್ರೆ, ಗಣೇಶ ಪೂಜಾರಿ ಯಡ್ತರೆ, ರಾಧಾ ಯಡ್ತರೆ, ರಘುರಾಮ ಪೂಜಾರಿ ಶಿರೂರು ಮೊದಲಾದವರು ಉಪಸ್ಥಿತರಿದ್ದರು.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಸಂಘದ ನೂತನ ಯೋಜನೆ ವಿಧ್ಯಾನಿಧಿ ಉದ್ಘಾಟಿಸಿದರು. ಅಶಕ್ತರಿಗೆ ನೆರವು ಯೋಜನೆಗೆ ಚಾಲನೆ ನೀಡಲಾಯಿತು. ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಗೋವಿಂದ ಬಿಲ್ಲವ ಶಿರೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೆಸ್ ಪಟು ಬಾಬು ಜೆ ಪೂಜಾರಿ, ಅಂತರಾಷ್ಟ್ರೀಯ ಕ್ರೀಡಾಪಟು ಶಂಕರ ಪೂಜಾರಿ ಕಾಡಿನತಾರು, ರಾಷ್ಟ್ರ ಮಟ್ಟದ ವೆಯ್ಟ್ ಲಿಫ್ಟರ್ ಗಜೇಂದ್ರ ಪೂಜಾರಿ ಹೊಸ್ಕೋಟೆ, ಯೊಗಪಟು ಕುಶ ಪೂಜಾರಿ ಮರವಂತೆ, ಹೈಜಂಪ್ ಕ್ರೀಡಾಪಟು ಅಕ್ಷತಾ ಪೂಜಾರಿ, ಕ್ರೀಡಾಪಟು ಜ್ಯೋತಿಕಾ ಪೂಜಾರಿ ಕಾಡಿನತಾರು ಅವರನ್ನು ಸನ್ಮಾನಿಸಲಾಯಿತು. ಉದ್ಯಮಿಗಳಾದ ಮಂಜುನಾಥ ಬಿಲ್ಲವ, ಗೋವಿಂದ ಬಾಬು ಪೂಜಾರಿ, ಲಕ್ಷ್ಮಣ ಪೂಜಾರಿ, ಮಹೇಶ್ ಪೂಜಾರಿ, ನಾಗರಾಜ ಪೂಜಾರಿ, ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉತ್ತಮ ಸಹಕಾರಿ ಪ್ರಶಸ್ತಿ ಪುರಸ್ಕೃತ ರಾಜು ಪೂಜಾರಿ, ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಅವರುಗಳನ್ನು ಗೌರವಿಸಲಾಯಿತು.
ಯಡ್ತರೆ ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಕಿಶೋರ್ ಪೂಜಾರಿ ಸಸಿಹಿತ್ಲು ಸ್ವಾಗತಿಸಿದರು. ನಾರಾಯಣ ಪೂಜಾರಿ ವಂದಿಸಿದರು. ಗಣೇಶ್ ಪೂಜಾರಿ ಯೋಜನಾನಗರ ಪ್ರಸ್ತಾವನೆಗೈದರು. ಪತ್ರಕರ್ತ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.