ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರು, ಮಕ್ಕಳು ಭಯದಿಂದ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯದಲ್ಲಿ ಇವತ್ತಿನವರೆಗೆ ಕಂಡು ಕೇಳರಿಯದಂತಹ ಹಿಂದು ಕಾರ್ಯಕರ್ತರ ಕೊಲೆಗಳಾಗಿದೆ. ಕೇರಳ ಮಾದರಿಯಂತೆ ಇಲ್ಲಿಯೂ ಕೂಡಾ ರಾಜಕೀಯ ಉದ್ದೇಶಕ್ಕಾಗಿ ಸಂಘ ಪರಿವಾರದ ಅಮಾಯಕ ಕಾರ್ಯಕರ್ತರ ಕೊಲೆಗಳಾಗಿತ್ತಿರುವುದು ಖಂಡನೀಯ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದರು.
ಅವರು ರಾಜ್ಯದಲ್ಲಿ ಹಿಂದು ಯುವಕರ ಹತ್ಯೆ ಖಂಡಿಸಿ ಹಾಗೂ ಸಮಾಜಘಾತುಕ ಸಂಘಟನೆಗಳ ನಿಷೇಧ ಆಗ್ರಹಿಸಿ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳು ನಡೆಸುತ್ತಿರುವ ಮಂಗಳೂರು ಚಲೋ ಜನಸುರಕ್ಷಾ ಪಾದಯಾತ್ರೆಗೆ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು.
ಗೋವಾ, ಮಹಾರಾಷ್ಟ್ರಗಳಿಂದ ಕದ್ದುತಂದಿರುವ ಜಾನುವಾರುಗಳನ್ನು ಇಲ್ಲಿನ ಅಕ್ರಮ ಕಸಾಯಿಖಾನೆ ಕಾರ್ಖಾನೆಯಿಂದ ವಿವಿಧೆಡೆ ರವಾನಿಸಲಾಗುತ್ತಿದೆ. ಇದಕ್ಕೆ ಪರೋಕ್ಷವಾಗಿ ರಾಜ್ಯ ಸರ್ಕಾರ, ಪೋಲಿಸ್ ಇಲಾಖೆಯೂ ಶಾಮೀಲಾಗಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸಿಗರು ಆತಂಕದ ವಾತಾವರಣ ಸೃಷ್ಠಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ತನಕ ಗೋರಕ್ಷಣೆ ಸಾಧ್ಯವಿಲ್ಲ, ಕರ್ನಾಟಕದಲ್ಲಿ ಗೋರಕ್ಷಣೆ ನಿಜವಾದ ಸವಾಲಾಗಿದೆ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ಗೋರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದತ್ತಪೀಠ ಮುಜರಾಯಿ ಇಲಾಖೆಗೆ ಸೇರಿಸಿದರೆ ಮುಜಾವರ್ ನೇಮಕವಾಗುತ್ತದೆ. ಅವರು ಪೂಜೆ ಮಾಡುತ್ತಾರಾ ಎಂದು ಪ್ರಶ್ನಿಸಿದ ಅವರು ಇದು ನ್ಯಾಯಾಂಗ ವಿರೋಧಿಯಾಗಿದೆ. ಮಠ-ಮಂದಿರಗಳನ್ನು ಸರ್ಕಾರ ವಶಪಡಿಸಿಕೊಳ್ಳುವುದರ ಮುಂದುವರಿದ ಭಾಗವಾಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಇದುವರೆಗೂ ೨೪ ಜನ ಕಾರ್ಯಕರ್ತರ ಹತ್ಯೆಯಾಗಿದೆ. ಸಮಾಜಘಾತುಕ ಸಂಘಟನೆಗಳ ನಿಷೇಧ ಮಾಡಲಾಗದ ಸಿದ್ದರಾಮಯ್ಯ ಸರ್ಕಾರ ಅಂತವರೊಂದಿಗೆ ಚುನಾವಣಾ ಮೈತ್ರಿಗೆ ಮುಂದಾಗಿದೆ. ಸತ್ತವರ ತ್ಯಾಗ ವ್ಯರ್ಥವಾಗಬಾರದು. ಇವರೆಲ್ಲರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸಿದ್ದರಾಮಯ್ಯ ಕುರ್ಚಿ ಬಿಟ್ಟು ತೊಲಗಬೇಕು. ಇಲ್ಲವಾದರೆ ಈ ಬಾರಿ ರಾಜ್ಯದ ಜನರೇ ಈ ಕೆಲಸ ಮಾಡುತ್ತಾರೆ ಎಂದ ಅವರು, ಹಿಂದು ಸಮಾಜವನ್ನು ಸಂWಟಿಸಿ ಅವರಲ್ಲಿ ಜಾಗೃತ ಮನೋಭಾವನೆ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಕೆ. ಉದಯಕುಮಾರ್ ಶೆಟ್ಟಿ, ಬಿ. ಎಂ. ಸುಕುಮಾರ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಜಿಪಂ, ತಾಪಂ, ಗ್ರಾಪಂನ ಬಿಜೆಪಿ ಸದಸ್ಯರು, ಪಕ್ಷದ ವಿವಿಧ ಮೋರ್ಚಾ, ಘಟಕಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು. ನಂತರ ಬೈಂದೂರಿನಿಂದ ಉಪ್ಪುಂದ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ವರೆಗೆ ಪಾದಯಾತ್ರೆ ನಡೆಯಿತು.