ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಮಮತಾರನ್ನು ಮಾ.೦೫ರಂದು ಶಾಲೆಯಲ್ಲಿ ರಾತ್ರಿ ೮ರ ತನಕ ಕೂಡಿಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ಇವರ ಮೇಲೆ ದೌರ್ಜನ್ಯ ಎಸಗಿ ದೈಹಿಕ ಹಲ್ಲೆ ಮಾಡಿದ್ದನ್ನು ಖಂಡಿಸಿ ಗುರುವಾರ ಶಾಲಾ ಸಮಯದ ನಂತರ ವಲಯದ ಶಿಕ್ಷಕ ಹಾಗೂ ಶಿಕ್ಷಕಿಯರು ಮತ್ತು ಸರ್ಕಾರಿ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ತಮಗೆ ರಕ್ಷಣೆ ನೀಡುವಂತೆ ಕೋರಿ ತಾಲೂಕು ಕಛೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಈ ಘಟನೆಯಿಂದ ವಲಯ ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸಲು ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಮಾರ್ಚ್ ೭ರಂದು ಕೂಡಾ ವಿದ್ಯಾರ್ಥಿಗಳನ್ನು ಶಾಲೆಯ ಹೊರಗೆ ನಿಲ್ಲಿಸಿ ಕರ್ತವ್ಯ ನಿರತ ಶಿಕ್ಷಕರಿಗೆ ಅಡ್ಡಿಪಡಿದ್ದು ಕೂಡಾ ಕಾನೂನಿಗೆ ವಿರುದ್ಧವಾಗಿದೆ. ಎಸ್‌ಡಿಎಂಸಿ ಯವರು ಶಾಲೆಯ ರಜಾ ದಿನಗಳಲ್ಲಿಯೂ ಶಿಕ್ಷಕಿಯರಿಗೆ ಬರಹೇಳಿ ಮಾನಸಿಕವಾಗಿ ತೊಂದರೆ ನೀಡುತ್ತಿರುವುದು ಕೂಡಾ ಖಂಡನೀಯವಾಗಿದೆ. ಸರ್ಕಾರಿ ಶಾಲೆಯನ್ನು ಬಲತ್ಕಾರದಿಂದ ಮುಚ್ಚಿಸಿ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅಡ್ಡಿಪಡಿಸುವುದು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ ಅಲ್ಲದೇ ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಇವರ ಮೇಲೆ ಪೊಲೀಸ್ ಫಿರ್ಯಾದಿ ನೀಡಿದ್ದರೂ ಬಂಧಿಸದೇ ಇರುವುದು ಸಂಶಯಾಸ್ಪದವಾಗಿದೆ. ಆ ನಿಟ್ಟಿನಿಲ್ಲಿ ಅಪರಾಧಿಗಳನ್ನು ಕೂಡಲೆ ಬಂಧಿಸಬೇಕು, ಈ ಶಾಲೆಯಲ್ಲಿ ನಡೆದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಎಸ್‌ಡಿಎಂಸಿಯವರು ಹಾಗೂ ಪೊಷಕರು ಶಿಕ್ಷಕಿಯ ವಿರುದ್ಧ ಸುಳ್ಳು ಕೇಸು ದಾಖಲಿಸುವಂತೆ ಒತ್ತಡ ಹಾಕುತ್ತಿದ್ದು, ಇದಕ್ಕೆ ಅವಕಾಶ ನೀಡದೇ ನ್ಯಾಯಯುತವಾಗಿ ಪ್ರಕರಣ ಬಗೆಹರಿಸಬೇಕು. ಈ ಶಾಲೆಯನ್ನು ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಶಿಕ್ಷಕರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡದಿದ್ದಲ್ಲಿ ಇಡಿ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಶಾಲೆ ಹಾಗೂ ಕಚೇರಿಗಳನ್ನು ಮುಚ್ಚಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ನಂತರ ಬೈಂದೂರು ತಹಶೀಲ್ದಾರ್ ಕಿರಣ್ ಜಿ. ಗೊರಯ್ಯ ಇವರಿಗೆ ಮನವಿ ನೀಡಿದರು. ಮನವಿಗೆ ಉತ್ತರಿಸಿದ ತಹಶೀಲ್ದಾರ್, ಪ್ರಕರಣವನ್ನು ಬಲವಾಗಿ ಖಂಡಿಸಿದರಲ್ಲದೇ ಈ ಬಗ್ಗೆ ಸೂಕ್ತ ಕ್ರಮದ ಭರವಸೆ ನೀಡಿದರು. ನಂತರ ಮೆರವಣೆಗೆ ಮೂಲಕ ಸಾಗಿ ಬಂದು ಠಾಣಾಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.