ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬೈಂದೂರು ಭಾಗದ ಜನರು ಪ್ರಾಮಾಣಿಕರಾಗಿದ್ದು, ಶಾಂತಿ ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ಸರ್ವಜ್ಞನು ಕೂಡಾ ಎಲ್ಲರೊಂದಿಗೆ ಕಲಿತು ತಾನು ಸರ್ವಜ್ಞನಾದಂತೆ, ಇಲ್ಲಿನ ಜನತೆಯಿಂದ ಸಾಕಷ್ಟು ಅನುಭವ ಪಡೆದುಕೊಂಡಿದ್ದೇನೆ ಎಂದು ನಿರ್ಗಮಿತ ತಹಶೀಲ್ದಾರ್ ಕಿರಣ್ ಜಿ. ಗೊರಯ್ಯ ಹೇಳಿದರು.
ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಲ್ಲಾ ಕಾಲದಲ್ಲಿ ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ. ಯಾವ ಅಧಿಕಾರಿಯಾಗಿದ್ದರೂ ಸೃಷ್ಠಿಯ ನಿಯಮ ಮೀರಲು ಸಾಧ್ಯವಾಗದು. ಅನುಭವ ಜೀವನದ ಪಾಠ ಕಲಿಸುತ್ತದೆ. ಆ ನೆಲೆಯಲ್ಲಿ ಕಳೆದ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಇಲಾಖೆಯ ಸೇವೆ ಪಡೆಯಲು ಬಂದ ಹಿರಿಯರಿಗೆ, ಮಹಿಳೆಯರಿಗೆ ಹಾಗೂ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿಯಿದೆ. ನಮ್ಮ ಕೆಳಗಿವರನ್ನು ಕೂಡಾ ಕೀಳಾಗಿ ಕಾಣುವುದು ಮೇಲಾಧಿಕಾರಿಗಳ ವ್ಯಕ್ತಿತ್ವಕ್ಕೆ ಶೋಭೆತರದು ಎಂದ ಅವರು ಇಂದಿನ ವ್ಯವಸ್ಥೆಯಲ್ಲಿ ಜನಸ್ನೇಹಿಯಾಗಿ ಕರ್ತವ್ಯ ಪಾಲಿಸಬೇಕಾಗುತ್ತದೆ ಎಂದು ಸಹಪಾಠಿಗಳಿಗೆ ಕಿವಿಮಾತು ಹೇಳಿದರು.
ಜಿಪಂ ಆರೋಗ್ಯ ಮತ್ತು ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಮಾತನಾಡಿ, ಒಂದು ಕುಟುಂಬದ ಸಾರಥಿಯಾಗಿ ತಮ್ಮ ಸಿಬ್ಬಂದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂರು ವರ್ಷಗಳ ಕಾಲ ಎಲ್ಲರೊಂದಿಗೆ ಆತ್ಮೀಯತೆಯಿಂದ ನಡೆದುಕೊಂಡು ಸರ್ಕಾರಿ ನಿಯಮಕ್ಕೆ ಚ್ಯುತಿ ಬಾರದಂತೆ ಉತ್ತಮ ಸೇವೆ ನೀಡಿದ ಕೀರ್ತಿ ತಹಶೀಲ್ದಾರ್‌ರಿಗೆ ಸಲ್ಲುತ್ತದೆ. ಅದೇ ರೀತಿ ಜನಸಾಮಾನ್ಯರ ಕಷ್ಟ-ನಷ್ಟಗಳಿಗೆ ತಕ್ಷಣ ಸ್ಪಂದಿಸಿ ಕಾನೂನು ವ್ಯಾಪ್ತಿಯಲ್ಲಿ ಅತೀ ಶೀಘ್ರವಾಗಿ ಕಡತ ವಿಲೇವಾರಿ ಮಾಡುವ ಮೂಲಕ ಜನರ ಅಲೆದಾಟಕ್ಕೆ ಕಡಿವಾಣ ಹಾಕಿದ್ದಾರೆ. ಪಕ್ಷಾತೀತವಾಗಿ ಜನಪ್ರತಿನಿಧಿಗಳೊಂದಿಗೆ ಕೂಡಾ ಒಳ್ಳೆಯ ಒಡನಾಟ ಇರುವುದರಿಂದ ಎಲ್ಲರಲ್ಲಿಯೂ ವಿಶ್ವಾಸ ಗಳಿಸಿಕೊಂಡ ಇವರ ಕಾಲದಲ್ಲಿ ಬೈಂದೂರು ತಾಲೂಕು ರಚನೆಯಾಗಿದ್ದು, ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಪ್ರಶಂಸೆಗೆ ಪಾತ್ರರಾಗಿದ್ದೂ ಕೂಡಾ ಇವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ನೂತನ ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಸುರೇಶ ಬಟ್ವಾಡಿ, ಎಪಿಎಂಸಿ ಸದಸ್ಯ ಸಸಿಹಿತ್ಲು ವೆಂಕಟ ಪೂಜಾರಿ ಉಪಸ್ಥಿತರಿದ್ದರು. ನಂತರ ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರು ತಹಶೀಲ್ದಾರ್ ಕಿರಣ್ ಜಿ. ಗೊರಯ್ಯ ಇವರಿಗೆ ಶುಭಾಶಯ ಕೋರಿ ಬೀಳ್ಕೊಟ್ಟರು.















