ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ದಲಿತರ ಅಭಿವೃದ್ಧಿಯ ಸ್ಲೋಗನ್ ಅಡಿಯಲ್ಲಿ ಸಾಕಷ್ಟು ಸಂಘಟನೆಗಳು ಇದ್ದರೂ ದಲಿತರೂ ಇನ್ನೂ ಮುಖ್ಯವಾಹಿನಿಗೆ ಯಾಕೆ ಬರಲಾಗುತ್ತಿಲ್ಲ ಎನ್ನುವುದನ್ನು ಪ್ರತಿಯೊಬ್ಬ ದಲಿತನೂ ಅರಿತುಕೊಳ್ಳಬೇಕಾಗಿದೆ. ನಾಯಕರ ಹಿಂದೆ ಹೋಗುವ ಸಂಪ್ರದಾಯವನ್ನು ಬಿಟ್ಟು, ಸಮಗ್ರ ಶಿಕ್ಷಣವನ್ನು ಮೈಗೂಡಿಸಿಕೊಂಡು ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಜೀವನ ಶಿಕ್ಷಣವನ್ನು ಪಡೆದುಕೊಂಡಾಗ ದಲಿತರು ತಮ್ಮನ್ನು ತಾವು ಮುಖ್ಯವಾಹಿನಿಯತ್ತ ಸಾಗಲು ಸಾಧ್ಯ ಎಂದು ಕಾಳಾವರ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಮೋಹನಚಂದ್ರ ಕಾಳಾವರ ಹೇಳಿದ್ದಾರೆ. ಕಾಳಾವರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಲಿತ ಜಾಗೃತ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮೇಣದ ಬತ್ತಿ ಬೆಳಗಿಸಿ ಮಾನಾಡಿದ ಉಪನ್ಯಾಸಕ ಪತ್ರಕರ್ತ ಸುಧಾಕರ ವಕ್ವಾಡಿ, ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುವುದಕ್ಕೆ ಮೊದಲು ಅಂಬೇಡ್ಕರವರನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರು ಪ್ರಮುಖ ಅಂಶಗಳಾದರೆ ಅಂಬೇಡ್ಕರ್ ಅವರ ಪಂಚ ಸೂತ್ರಗಳನ್ನು ದಲಿತ ನಾಯಕರು ದಲಿತರಿಗೆ ತಿಳಿಸಿ ಹೇಳಬೇಕು. ಸಂವಿಧಾನಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳುವ ಮೊದಲು ಅದಕ್ಕೆ ಸಂಬಂಧಿಸಿ ಇಲಾಖೆಗಳ ಬಗ್ಗೆ ಮತ್ತು ಅದಕ್ಕೆ ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಆಗ ಸದೃಢತೆಯ ಮತ್ತು ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಯಶೇಖರ್ ಮಡಪ್ಪಾಡಿ ಮಾತನಾಡಿ, ಈಗಾಗಲೇ ಇರುವ ಸಾಕಷ್ಟು ದಲಿತ ಸಂಘಟನೆಗಳು ನಾಯಕತ್ವ ಕೇಂದ್ರೀಕೃತ ಸಂಘಟನೆಗಳಾಗುತ್ತಿರುವ ಈ ಅಪಾಯಕಾರಿ ಸನ್ನಿವೇಶದಲ್ಲಿ ದಲಿತರು ಜಾಗೃತರಾಗಬೆಕಾಗಿದೆ. ದಲಿತ ನಾಯಕರು ಏನು ಮಾಡಬೇಕು ಎಂಬುದನ್ನು ದಲಿತರು ತೀರ್ಮಾನಿಸುವಂತಾಗ ಸಂಘಟನೆಗಳು ಬಲಗೊಳ್ಳುತ್ತವೆ. ಅದಕ್ಕಾಗಿ ಪ್ರತಿಯೊಬ್ಬ ದಲಿತನೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಶಿಕ್ಷಣ ಪಡೆಯಬೇಕು. ದಲಿತ ಸ್ವತಃ ನಾನು ಸಮಾಜದ ಇತರ ವರ್ಗಗಳಂತೆ ಎನ್ನುವ ಭಾವನೆಯಿಂದ ಸಮಾಜದಲ್ಲಿ ಬೆರೆತಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಮೇಸ್ತ್ರಿ ವಹಿಸಿದ್ದರು. ಎಲ್.ಐ.ಸಿಯ ಮಂಜುನಾಥ ಬಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆಯ ಸಂನ್ಮೂಲ ವ್ಯಕ್ತಿ ನಾಗರಾಜ್ ಎಸ್.ವಿ. ಉಪಸ್ಥಿತರಿದ್ದರು. ಶಿಕ್ಷಕ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್‌ಚಂದ್ರ ವಂದಿಸಿದರು.