ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಚುನಾವಣಾ ಟಿಕೇಟ್ ದೊರೆಯುತ್ತಿದ್ದಂತೆ, ಕುಂದಾಪುರ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಕಾಣಿಸಿಕೊಂಡಿದ್ದು, ಕಳೆದ ಭಾರಿಯ ಕುಂದಾಪುರ ಬಿಜೆಪಿ ಪರಾಜಿತ ಅಭ್ಯರ್ಥಿ ಬಿ. ಕಿಶೋರ್ ಕುಮಾರ್ ಸೇರಿದಂತೆ 7 ಮಂದಿ ಪಕ್ಷದ ವಿವಿಧ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರ ನಿವಾಸಕ್ಕೆ ತೆರಳಿದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಸತೀಶ್ ಮೇರ್ಡಿ ಮೊದಲಾದವರು, ಪಕ್ಷದ ವಿವಿಧ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿ ಕುಂದಾಪುರ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ನಡೆಸದೇ ದೂರ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಆದರೆ ತಾವು ಎಂದಿಗೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಕುಂದಾಪುರದ ಬದಲಾಗಿ ಇತರೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆಂದು ತಿಳಿಸಿದ್ದಾರೆ.
ಹಾಲಾಡಿ ಬಿಜೆಪಿ ಪಕ್ಷದಿಂದ ಹೊರನಡೆದಾಗಿನಿಂದಲೂ ಹತ್ತಿಕೊಂಡಿದ್ದ ಭಿನ್ನಮತದ ಕಿಡಿ ಬೇರೆ ಬೇರೆ ಸಂದರ್ಭಗಳಲ್ಲಿ ಉಲ್ಭಣಗೊಂಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮತ್ತೆ ಬಿಜೆಪಿ ಪಕ್ಷದಿಂದ ಟಿಕೇಟ್ ನೀಡುವುದನ್ನು ಮೂಲ ಬಿಜೆಪಿಗರು ಎನ್ನಲಾದ ಒಂದು ಬಣ ಪ್ರಬಲವಾಗಿ ವಿರೋಧಿಸಿತ್ತು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರ್ಪಡೆಯ ಬಳಿಕ ಅವರಿಗೆ ಟಿಕೇಟ್ ನೀಡಬೇಕೆಂಬ ಒತ್ತಡವನ್ನೂ ಹಾಕಿತ್ತು. ಆದರೆ ಅಂತಿಮವಾಗಿ ಹಾಲಾಡಿ ಅವರಿಗೆ ಟಿಕೇಟ್ ದೊರೆತಿರುವುದಿರಂದ ಸಹಜವಾಗಿ ಅತೃಪ್ತರಾಗಿದ್ದಾರೆ.