ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಮಾಜದಲ್ಲಿರುವ ಹೆಚ್ಚಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ತಿಳುವಳಿಕೆ ಇರುವ ಹಿರಿಯರಿಂದ ಸಾಧ್ಯವಾಗುವುದೇ ಹೊರತು ಇದಕ್ಕೆ ರಾಜಕೀಯದ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಜನರಿಗೆ ರಾಜಕಾರಣಿಗಳ, ರಾಜಕೀಯ ಮುಖಂಡರಿಂದ ಮಾತ್ರ ಸಮಾಜದ ಬದಲಾಣೆ ಸಾಧ್ಯ ಎಂಬ ತಪ್ಪು ತಿಳುವಳಿಕೆಯಿಂದ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಬೈಂದೂರು-ಕಳವಾಡಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಹವ್ಯಾಸಿ ಕಲಾತಂಡದ ೧೩ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಸಾಮಾನ್ಯವಾಗಿ ಬದುಕಲು, ಸಾಧಿಸಲು ಹಾಗೂ ಜೀವಿಸಲು ಹುಟ್ಟಿನಿಂದಾಗಿ ಒಂದೇ ರೀತಿಯ ಅವಕಾಶ ಪಡೆದಿರುತ್ತೇವೆ. ಆದರೆ ನಮ್ಮ ನಡುವೆ ಅತ್ಯುನ್ನತ ಸಾಧನೆ ಮಾಡಿದ ಮತ್ತು ಜೀವನದಲ್ಲಿ ಏನನ್ನೂ ಮಾಡದೇ ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದವರನ್ನೂ ನೋಡುತ್ತಿದ್ದೇವೆ. ಇದೆಲ್ಲ ಮನುಷ್ಯನ ವರ್ತನೆ ಹಾಗೂ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮೊಳಗಿನ ಬಾಹ್ಯ ಪರಿಸರವು ನಮ್ಮ ಆಸಕ್ತಿ ಕ್ಷೇತ್ರದಲ್ಲಿ ಸ್ಪಷ್ಟಚಿತ್ರಣ ಸೃಷ್ಠಿಸಲು ಸಹಾಯ ಮಾಡಿದರೆ ನಮ್ಮೊಳಗಿನ ಪರಿಸರವೂ ಸರಿಯಾಗಿದ್ದನ್ನು ಆರಿಸಿಕೊಳ್ಳಲು ಸಹಕರಿಸುತ್ತದೆ ಎಂದರು.
ಯೂತ್ ಕ್ಲಬ್ ಅಧ್ಯಕ್ಷ ಕಳವಾಡಿ ರಾಘವೇಂದ್ರ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ ಶುಭಾಶಂಸನೆಗೈದರು. ಜಿಲ್ಲಾ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬಸ್ರೂರು ರಾಜೀವ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಎಚ್. ವಸಂತ್ ಹೆಗ್ಡೆ, ಬಳ್ಕೂರು ಡಾ. ಗೋಪಾಲ ಆಚಾರ್ಯ, ಕೆರಾಡಿ ವರಸಿದ್ದಿವಿನಾಯಕ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ನಟ, ನಿರ್ದೇಶಕ ರವಿ ಬಸ್ರೂರು, ಉದ್ಯಮಿ ಬಾಬು ಪೂಜಾರಿ, ನಿವೃತ್ತ ಶಿಕ್ಷಕ ಕೃಷ್ಣಯ್ಯ ಶೇರುಗಾರ್, ಕ್ಲಬ್ಬಿನ ಕಾರ್ಯದರ್ಶಿ ಕಳವಾಡಿ ಸುಬ್ರಹ್ಮಣ್ಯ ಪೂಜಾರಿ ಉಪಸ್ಥಿತರಿದ್ದರು. ಬಾಲರಾಜ್ ಸ್ವಾಗತಿಸಿ, ಸುಬ್ರಹ್ಮಣ್ಯ ಗಾಣಿಗ ಉಪ್ಪುಂದ ನಿರೂಪಿಸಿದರು.
ಸನ್ಮಾನ: ಕಟಕ ಚಲನಚಿತ್ರ ಖ್ಯಾತಿಯ ಬಾಲನಟಿ ಶ್ಲಾಘಾ ಸಾಲಿಗ್ರಾಮ, ಡ್ರಾಮಾ ಜ್ಯೂನಿಯರ್ ವಿಜೇತೆ ಶ್ರಾವ್ಯ ಎಸ್. ಆಚಾರ್ಯ ಮರವಂತೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಿ. ಹನುಮಂತ, ಭಾಷಣ ಸ್ಪರ್ಧೆ ವಿಜೇತೆ ನೆಲ್ಯಾಡಿ ಸ್ವೀಕೃತಿ ಶೆಟ್ಟಿ, ಅಂತರಾಷ್ಟ್ರೀಯ ಯೋಗಪಟು ಕುಶ ಪೂಜಾರಿ, ವೀಕ್ಷಕ ವಿವರಣೆಗಾರ ರವಿ ಮಯ್ಯಾಡಿ ಇವರನ್ನು ಸನ್ಮಾನಿಸಲಾಯಿತು.