ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಪ್ರವಾಸ ಹೋಗಲು ಮತ್ತು ಹೋದಲ್ಲಿ ತಂಗಲು ಬಳಸುವ ಕ್ಯಾರವಾನ್ ವಾಹನವನ್ನು ವಿದೇಶದಿಂದ ತರಿಸಿಕೊಂಡು, ಅದನ್ನು ದೋಣಿಯ ಮೇಲಿರಿಸಿ ದೋಣಿಮನೆಯಾಗಿ ಪರಿವರ್ತಿಸುವ ಪ್ರಯತ್ನ ಸಮೀಪದ ಪಡುವರಿಯ ದೊಂಬೆಯಲ್ಲಿರುವ ‘ಸಾಯಿ ವಿಶ್ರಾಮ್’ ಕಡಲತೀರ ಪ್ರವಾಸಿಧಾಮ ಒಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ಅದಕ್ಕೆ ಅಗತ್ಯವಿರುವ 48 ಅಡಿ ಉದ್ದದ ಎರಡು ಫೈಬರ್ ದೋಣಿಗಳನ್ನು ಮತ್ತು ಅವುಗಳ ಮೇಲೆ ಮನೆ ಅಳವಡಿಸಲು ಬೇಕಾದ ವೇದಿಕೆ ಅಥವಾ ಪ್ಲ್ಯಾಟ್‌ಫಾರ್ಮನ್ನು ಶಿರೂರಿನ ಅಳ್ವೆಗದ್ದೆಯ ಮೀನುಗಾರಿಕಾ ಬಂದರಿನ ಸಮೀಪ ರಾಮ ಮೇಸ್ತ ಅವರು ನಡೆಸುತ್ತಿರುವ ಓಂ ದುರ್ಗಾಂಬಿಕಾ ಬೋಟ್ ಬಿಲ್ಡರ್ಸ್ ಸಂಸ್ಥೆ ಸಿದ್ಧಪಡಿಸಿಕೊಟ್ಟಿದೆ. ಈಚೆಗೆ ವಾಹನವನ್ನು ಬಂದರಿಗೆ ತಂದು ಎರಡು ಕ್ರೇನ್‌ಗಳ ಸಹಾಯದಿಂದ ಬೋಟ್‌ಗಳ ಮೇಲಿರಿಸುವ ಕೆಲಸ ನಡೆಯಿತು. ಅದನ್ನು ಭದ್ರಪಡಿಸುವ ಕಾರ್ಯ ಸಾಗಿದೆ. ಮನೆಯ ವಾಹನದ ಭಾಗವನ್ನು ಉಳಿಸಿಕೊಂಡಿರುವುದರಿಂದ ಮತ್ತು ಅದನ್ನು ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿರುವುದರಿಂದ (ಕೆಎ 51 ಬಿ 9558) ಈ ದೋಣಿಮನೆಯನ್ನು ಅದಕ್ಕೆ ಹೊಂದಿಸಲು ಸಾಧ್ಯವಾಗುವ ಟ್ರಕ್ ಮೂಲಕ ಎಳೆದು ಎಲ್ಲೆಂದರಲ್ಲಿಗೆ ಒಯ್ಯಬಹುದಾದ ನೆಲಮನೆಯಾಗಿಯೂ ಉಪಯೋಗಿಸಲು ಸಾಧ್ಯವಾಗಲಿದೆ. ’ಡೆನಾಲಿ’ ಎಂಬ ಹೆಸರಿನ ಈ ದೋಣಿಮನೆ ಐಷಾರಾಮಿ ಸೌಲಭ್ಯಗಳಿಂದ ಕೂಡಿದೆ. ಪ್ರತ್ಯೇಕ ಒಳಾಂಗಣ, ಅಡುಗೆಮನೆ, ಶೌಚಾಲಯ, ಎರಡು ಮಲಗುವ ಕೋಣೆಗಳಿವೆ. ದೋಣಿಯಷ್ಟೆ ಉದ್ದ ಮತ್ತು 8 ಅಡಿ ಅಗಲವಾಗಿರುವ ಮನೆಯ ಕೆಲವು ಭಾಗಗಳನ್ನು ಯಾಂತ್ರಿಕವಾಗಿ ಹೊರಕ್ಕೆ ಚಾಚಿ, ಸುಮಾರು 12 ಅಡಿಯಷ್ಟು ಅಗಲಗೊಳಿಸುವ ವ್ಯವಸ್ಥೆ ಇದೆ. ಗುಣಮಟ್ಟದ ಸೋಫಾ, ಹಾಸಿಗೆಗಳ ಜತೆಗೆ ಹವಾ ನಿಯಂತ್ರಕ ಸೌಲಭ್ಯವಿದೆ.
ಅಮೇರಿಕದಿಂದ ಸುಮಾರು ರೂ.45 ಲಕ್ಷ ತೆತ್ತು ಆಮದು ಮಾಡಿಕೊಂಡ ಈ ಮನೆಯನ್ನು ದೋಣಿಮನೆಯಾಗಿ ಪರಿವರ್ತಿಸಲು ಒಟ್ಟು ರೂ. 75 ಲಕ್ಷ ತಗಲುತ್ತದೆ ಎನ್ನುವ ಪ್ರವಾಸಿ ಧಾಮದ ಸುಹಾನ್ ಶೆಟ್ಟಿ ಇದರ ಬಳಕೆದಾರರಿಗೆ ನೀರಿನ ನಡುವಿನ ವಾಸ್ತವ್ಯದ ಮುದ, ಆಹ್ಲಾದಕರ ಅನುಭವ ಸಿಗುತ್ತದೆ ಎನ್ನುತ್ತಾರೆ. ಎಲ್ಲಿ ಅದರ ಸೌಲಭ್ಯ ನೀಡಬೇಕು ಎನ್ನುವುದನ್ನು ಇನ್ನೂ ಅಂತಿಮವಾಗಿ ನಿರ್ಧರಿಸಿಲ್ಲ ಎನ್ನುವ ಅವರು ತಮ್ಮ ಸಾಯಿ ವಿಶ್ರಾಮ್ ಗ್ರಾಹಕರಿಗೆ ಮೀಸಲಿಡುವ ಗುರಿ ಹೊಂದಲಾಗಿದೆ ಎನ್ನುತ್ತಾರೆ. ಹಾಗಾದರೆ ಇದು ಕುಂದಾಪುರ ತಾಲೂಕಿನ ಮೊದಲ ದೋಣಿಮನೆಯೆನಿಸಿ, ಪ್ರವಾಸಿಗಳನ್ನು ಆಕರ್ಷಿಸಬಹುದು ಎಂಬ ವಿಶ್ವಾಸ ಅವರದ್ದಾಗಿದೆ.