ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗೆ ಮೀಸಲು, ದೌರ್ಜನ್ಯ ತಡೆ ಕಾಯ್ದೆಯ ವಿಶೇಷ ಸವಲತ್ತು ನೀಡಿದ ಪರಿಣಾಮ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಕೆಲ ಜಾತಿವಾದಿ ಶಕ್ತಿಗಳು ಅದನ್ನು ಕಸಿದು ದಲಿತರ ನಿರ್ಮೂಲನೆಗೆ ಪಣ ತೊಟ್ಟಿವೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಹೇಳಿದರು.
ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಡಾ. ಅಂಬೇಡ್ಕರ್ ಅವರ 127 ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ದಸಂಸ ಬೈಂದೂರು ತಾಲೂಕು ಶಾಖೆ ಇವರ ಸಹಕಾರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಮತ್ತು ದಸಂಸ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಜನ್ಮ ಜಯಂತಿ ಹಾಗೂ ಭೀಮ ಭಾರತ ಮಹಾ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಬಹುಸಂಖ್ಯೆಯಲ್ಲಿರುವ ದಲಿತರ ಕೈಗಿನ್ನು ರಾಜಕೀಯ ಅಧಿಕಾರದ ಚುಕ್ಕಾಣಿ ಸಿಕ್ಕಿಲ್ಲ. ಇದರಿಂದಾಗಿ ದಲಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ಎಂದ ಅವರು ಜಾತಿ ಪ್ರಧಾನ ವ್ಯವಸ್ಥೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಪ್ರಶ್ನಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖೇದಕರ ಎಂದರು.
ಪುತ್ತೂರು ಕಿಡ್ಸ್‌ನ ಸಿಒ ಶೈಲಾ ಭಾಸ್ಕರ್ ಉದ್ಘಾಟಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ರತ್ನಾ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರಾಷ್ಟ್ರಮಟ್ಟದ ಕ್ರೀಡಾಪಟು ಮಮತಾ ಇವರನ್ನು ಸನ್ಮಾನಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆಗೈದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಬಹುಮಾನ ವಿತರಿಸಿದರು. ದಸಂಸ ವಿವಿಧ ಘಟಕಗಳ ಪದಾಧಿಕಾರಿಗಳಾದ ನರಸಿಂಹ ಹಳಗೇರಿ, ಮಂಜುನಾಥ ನಾಗೂರು, ವಾಸುದೇವ ಮುದೂರು, ಚಂದ್ರ ಹಳಗೇರಿ, ಸುರೇಶ್ ಬಾರ್ಕೂರು, ಕೆ. ಸಿ. ರಾಜು ಬೆಟ್ಟಿನಮನೆ, ಮತ್ತಿತರರು ಉಪಸ್ಥಿತರಿದ್ದರು. ದಸಂಸ ತಾಲೂಕು ಸಂಚಾಲಕಿ ಗೀತಾ ಸುರೇಶ್ ಸ್ವಾಗತಿಸಿ, ಚೈತ್ರಾ ನಿರೂಪಿಸಿದರು. ನಂತರ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ-ಕುಂಭಾಶಿ ಇವರಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ನಡೆಯಿತು.