ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬೈಂದೂರು ಕಾಂಗ್ರೆಸ್ ಪಕ್ಷದ ಮುಖಂಡ, ಉಪ್ಪುಂದದ ಉದ್ಯಮಿ ಜಿ. ಗೋಕುಲ ಶೆಟ್ಟಿ ಉಪ್ಪುಂದ ಅವರ ಮನೆಗೆ ಆದಾಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ.
ಗೋಕುಲ ಶೆಟ್ಟಿಯವರನ್ನು ಮನೆಯಲ್ಲಿರಿಸಿಕೊಂಡು ಅವರ ಆಪ್ತರನ್ನು ಕೂಡ ಮನೆಗೆ ಕರೆಸಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡನನ್ನು ಕೇಂದ್ರಿಕರಿಸಿಕೊಂಡು ನಡೆಯುತ್ತಿರುವ ಈ ದಾಳಿಯ ಬಗ್ಗೆ ಅನುಮಾನ ಮೂಡತೊಡಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ ಪ್ರೇರಿತ ದಾಳಿ: ಕೆ. ಗೋಪಾಲ ಪೂಜಾರಿ
ದಾಳಿಯ ಬಗ್ಗೆ ಬೈಂದೂರು ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಪ್ರತಿಕ್ರಿಯಿಸಿ ಕೇಂದ್ರ ಸರಕಾರದ ಆದಾಯ ತೆರಿಗೆ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡರ ಮನೆಯ ಮೇಲೆ ದಾಳಿ ನಡೆಸುತ್ತಿದೆ. ಇದು ಅದರ ಮುಂದುವರಿದ ಭಾಗ. ಬಂದೂರು ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಸೋಲುವುದು ಖಚಿತವಾಗಿದೆ. ಸೋಲಿನ ಭೀತಿಯಿಂದ ಹತಾಶರಾದ ಮುಖಂಡರು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಕ್ಷೇತ್ರದ ಮತದಾರರು ಪ್ರಗತಿಗೆ ಮನ್ನಣೆ ನೀಡುತ್ತಾರೆಯೇ ಹೊರತು ಕೀಳು ಮಟ್ಟದ ರಾಜಕೀಯಕ್ಕಲ್ಲ. ಕಾಂಗ್ರೆಸ್ ಪಕ್ಷ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನಡೆಸಿದೆ ಎಂದರು.