ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಮುದಾಯ, ಕುಂದಾಪುರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಜ್ಯ ಬಾಲವಿಕಾಸ ಟ್ರಸ್ಟ್ ಜೊತೆಯಾಗಿ ಸಂಘಟಿಸಿರುವ ರಂಗರಂಗು ರಜಾಮೇಳವನ್ನು ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರರೂ ಮತ್ತು ಸಾಮಾಜಿಕ ಚಿಂತಕರೂ ಆಗಿರುವ ಕೆ.ಆರ್ ನಾಯ್ಕ್ ಉದ್ಘಾಟಿಸಿದರು. ಕುಟುಂಬಗಳು ಚಿಕ್ಕದಾಗುತ್ತಾ ಹೋದಂತೆ ಒಡನಾಟದ ಒಡಮೂಡುವ ಸಮಷ್ಟಿಪ್ರಜ್ಞೆಯು ಮಕ್ಕಳಿಗೆ ದುರ್ಲಭವಾಗುತ್ತವೆ. ರಜಾಮೇಳಗಳು ಈ ಕೊರತೆಯನ್ನು ನೀಗಿಸಬೇಕು ಎಂದು ಅವರು ತಮ್ಮ ಉದ್ಘಾಟನಾ ಮಾತುಗಳಲ್ಲಿ ಆಶಿಸಿದರು. ಮೇಳದ ನಿರ್ದೇಶಕ ಶ್ರೀ ವಾಸುದೇವ ಗಂಗೇರ ಮಾತನಾಡಿ ಈ ರಜಾಮೇಳದಲ್ಲಿ ನೆಲಮೂಲದ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲಾಗುವುದು ಮತ್ತು ಜಾತಿ-ಮತ-ಭಾಷೆಗಳ ಹೆಸರಿನಲ್ಲಿ ನಾವು ನಿರ್ಮಿಸಿಕೊಂಡಿರುವ ಗೋಡೆಗಳನ್ನು ಮೀರಿ ಮನುಷ್ಯತ್ವದ ವಿಶಾಲ ಕುಟುಂಬದೊಳಗೆ ಬದುಕುವದನ್ನು ಕಲಿಯಲು ಈ ಮೇಳದಲ್ಲಿ ಒತ್ತು ನೀಡಲಾಗುವುದು ಎಂದರು. ಮೇಳದ ಭಾಗವಾಗಿ ಮಕ್ಕಳು ಹೊರಸಂಚಾರ, ಮಕ್ಕಳ ಸಂತೆ, ಕಛೇರಿ ಭೇಟಿಗಳನ್ನು ಮಾಡುವರು. ಪ್ರತಿ ವರ್ಷದಂತೆ ಮೇಳದ ಮಕ್ಕಳು ಈ ವರ್ಷವೂ ಮೇಳದ ಸಮಾರೋಪ ಸಮಾರಂಭದಲ್ಲಿ ನಾಟಕ ಪ್ರದರ್ಶನವನ್ನು ನೀಡಲಿರುವರು ಎಂದು ಸಭೆಗೆ ತಿಳಿಸಿದರು. ಕುಂಬಾಶಿಯ ಮಕ್ಕಳ ಮನೆಯ ಗಣೇಶರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕುಂದಾಪುರ ಸಮುದಾಯದ ಕೋಶಾಧಿಕಾರಿ ಬಾಲಕೃಷ್ಣ ಎಂ ಮತ್ತು ಸಂಪನ್ಮೂಲ ವ್ಯಕ್ತಿ ಸುರೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.
ಕುಂದಾಪುರದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ನಡೆಯುತ್ತಿರುವ ರಜಾಮೇಳಕ್ಕೆ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ನಿರಂಜನ ಭಟ್ ಆಗಮಿಸಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಮೇ 25 ರ ಮಧ್ಯಾಹ್ನ ಅಗ್ನಿಶಾಮಕ ದಳದವರು ನೀಡಲಿರುವ ಪ್ರಾತ್ಯಕ್ಷಿಕೆ ಮತ್ತು ಮೇ 26 ರ ಮಧ್ಯಾಹ್ನ ಮಕ್ಕಳೆ ನಡೆಸುವ ವಿಶಿಷ್ಟ ಸಂತೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕುಂದಾಪುರ ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ ವಿನಂತಿಸಿದ್ದಾರೆ.