ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವಿಶ್ವದಲ್ಲಿ ಅತಿಹೆಚ್ಚು ಯುವಶಕ್ತಿ ಹೊಂದಿದ ದೇಶ ಭಾರತ. ಇಲ್ಲಿನ ಸೈನಿಕರ ಕಾರ್ಯವೈಖರಿ ಪ್ರಪಂಚವೇ ಹುಬ್ಬೇರಿಸುವಂತೆ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲ್ಲಿ ಹೆಚ್ಚಿನ ಯುವಕರು ಸೈನ್ಯಕ್ಕೆ ಸೇರುವ ಆಸಕ್ತಿ ತೋರದೇ ಜಡತ್ವ ಹೊಂದಿದ್ದು, ಇದು ಭವಿಷ್ಯಕ್ಕೆ ಮಾರಕ. ಇದರಿಂದ ಹೊರಗೆ ಬಂದು ಇಂದಿನ ಸ್ಥಿ-ಗತಿಗಳ ಬಗ್ಗೆ ಚಿಂತನೆ ಮಾಡಬೇಕು ಎಂದು ಭಾರತೀಯ ಭೂಸೇನಾ ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಹೇಳಿದರು.
ಬೈಂದೂರು ತೊಂಡೆಮಕ್ಕಿಯಲ್ಲಿ ನಡೆದ ಜೈ ಜವಾನ್ ವೀರ ಯೋಧರ ಸ್ಮರಣಾ ಸಮಿತಿಯ ಐದನೇ ವರ್ಷದ ವಾರ್ಷಿಕೋತವ ಹಾಗೂ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಮೂರು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಉಂಟಾದ ಭೀಕರ ಚಂಡಮಾರುತ, ನೆರೆಹಾವಳಿಯಿಂದ ಕಂಗೆಟ್ಟ ಅಲ್ಲಿನ ನಾಗರಿಕರಿಗೆ ಭಾರತೀಯ ಸೈನಿಕರು ತಮ್ಮ ಜೀವದ ಹಂಗುತೊರೆದು ಅವರನ್ನು ರಕ್ಷಿಸಿದರು. ನಂತರದ ದಿನಗಳಲ್ಲಿ ಈ ಜನರು ರಾಜಕೀಯ ಹಾಗೂ ಧರ್ಮದ ಭಾವನೆಯಲ್ಲಿ ಕೊಚ್ಚಿಹೋಗಿ ನಮ್ಮ ಸೈನಿಕರನ್ನು ತುಚ್ಛವಾಗಿ ನಡೆಸಿಕೊಂಡರಲ್ಲದೇ ಅವರ ಮೇಲೆ ನಿರಂತರ ಕಲ್ಲು ತೂರಾಟ ನಡೆಸಿದರಲ್ಲದೇ ದೈಹಿಕ, ಮಾನಸಿಕವಾಗಿ ಹಿಂಸೆ ನೀಡಿದ್ದರು ಎಂದ ಅವರು ನಮ್ಮವರೇ ನಮ್ಮನ್ನು ತಾತ್ಸಾರ ಮಾಡಿದಾಗ ಆಗುವ ನೋವು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತೀಯ ವಾಯುಸೇನೆ ನಿವೃತ್ತ ಯೋಧ ಯಳಜೀತ್ ಗಣಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಭೂಸೇನೆಯ ಮಾಜಿ ಯೋಧ ಮಹಾಬಲ ಎನ್. ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಯೋಧರಾದ ಶಿರೂರು ರಮೇಶ ಬಿ. ಮೇಸ್ತ, ತೆಕ್ಕೆಟ್ಟೆ ಎ. ವಿ. ಶಿವರಾಮ ಶೆಟ್ಟಿ, ರಾಮಚಂದ್ರ ಗಾಣಿಗ, ಬೈಂದೂರು ವಿಷ್ಣು ಆಚಾರ್ಯ ಪರವಾಗಿ ಪತ್ನಿ ಯಶೋದಾ ವಿ. ಆಚಾರ್ಯ ಇವರನ್ನು ಗೌರವಿಸಲಾಯಿತು. ನಿವೃತ್ತ ಯೋಧರಾದ ಬಾಬು ಪೂಜಾರಿ ಮೈದಿನಪುರ, ಮಾಧವ ಕೊಠಾರಿ ತಗ್ಗರ್ಸೆ ಉಪಸ್ಥಿತರಿದ್ದರು.
ಸಮಿತಿಯ ಸಂಸ್ಥಾಪಕ, ಯೋಧ ಶ್ರೀಕಾಂತ ಗಾಣಿಗ ಪ್ರಾಸ್ತಾವಿಸಿದರು. ಶಶಿಕಲಾ ಚಂದ್ರ ಮೊಗವೀರ ಸ್ವಾಗತಿಸಿ, ಆಲಂದೂರು ಮಂಜುನಾಥ ಗಾಣಿಗ ನಿರೂಪಿಸಿದರು. ಚಂದ್ರಕಲಾ ಮೊಗವೀರ ವಂದಿಸಿದರು. ನಂತರ ದೇಶಭಕ್ತಿ ಸಾರುವ ಯೋಧರಿಗೊಂದು ನೃತ್ಯ ನಮನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇಂದಿನ ಕಾಲಘಟ್ಟದಲ್ಲಿ ನಾವು ಮತ್ತು ನಮ್ಮ ಕುಟುಂಬ ಎಂಬ ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ. ನಾವು ನಿಶ್ಚಿಂತೆಯಿಂದ ಸುಂದರ ಬದುಕು ಕಾಣಲು, ತಮ್ಮ ಜೀವದ ಹಂಗು ತೊರೆದು ನಮ್ಮನ್ನು ಹಾಗೂ ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರ ನೆನಪು ಯಾರಿಗೂ ಆಗದಿರುವುದು ಬೇಸರದ ಸಂಗತಿ.- ಮಹಾಬಲ ಎನ್. ಭಾರತೀಯ ಭೂಸೇನೆಯ ಮಾಜಿ ಯೋಧ