ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಶಾಲೆಯ ಶಾರದಾ ಮಂಟಪದಲ್ಲಿ ಜರುಗಿತು.
ಸಮಾರಂಭವನ್ನು ಉದ್ದೇಶಿಸಿ ಡಾ. ಮಾಲತಿ ನಾರಂಬಳ್ಳಿ ಮಾತನಾಡಿ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವೇ ಭವಿಷ್ಯದ ಸಂಸ್ಕಾರಯುತ ಬುದುಕಿನ ಭದ್ರ ಬುನಾದಿ. ಇಂದಿನ ಕಾಲಘಟ್ಟದಲ್ಲಿ ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡಿಡದೇ ಸುಶಿಕ್ಷಿತ ಮಕ್ಕಳನ್ನು ಆಸ್ತಿಯನ್ನಾಗಿ ಪರಿವರ್ತಿಸಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಕಂಚಿಕಾನ್ ಶಾಲಾ ಹಳೆವಿದ್ಯಾರ್ಥಿ ಪೋಷಕರಿಗೆ ಕರೆ ನೀಡಿದರು.
ಶಿಕ್ಷಣ ಸಂಸ್ಥೆ ಪರಿಣಾಮಕಾರಿಯಾಗಿ ಹೊಣೆ ನಿರ್ವಹಿಸಲು ಕರ್ತವ್ಯಶೀಲ ಶಿಕ್ಷಕರ, ಪ್ರೋತ್ಸಾಹಕ ಪಾಲಕರ, ಹೊಣೆಗಾರರಾದ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಪ್ರೇಮಿ ಸಾರ್ವಜನಿಕರ ಬೆಂಬಲ ಬೇಕು. ಇದರ ಜತೆಗೆ ಹಳೆವಿದ್ಯಾರ್ಥಿ ಸಂಘವೂ ಕೂಡಾ ನೂತನ ಯೋಜನೆಗಳನ್ನು ರೂಪಿಸಬೇಕಾಗಿದೆ. ಶಿಕ್ಷಣದ ಮೂಲಕ ಬದುಕಿನ ಬೆಳಕು ಪಡೆದ ಸಂಸ್ಥೆಗಳನ್ನು ಬೆಂಬಲಿಸಬೇಕಾದ ಹೊಣೆ ಹಳೆವಿದ್ಯಾರ್ಥಿಗಳಿಗೆ ಇದೆ. ಶಾಲೆ ಮತ್ತು ಆ ಶಾಲೆಯ ಹಳೆವಿದ್ಯಾರ್ಥಿಗಳ ಪೂರಕ ಸಂಘಟನೆ ಅತ್ಯಂತ ಮಹತ್ವದಾಗಿದ್ದು, ಅಭಿವೃದ್ಧಿ ದೃಷ್ಠಿಯಿಂದ ಇದೊಂದು ದೊಡ್ಡ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ ಆಚಾರಿ ಸ್ವಾಗತಿಸಿದರು. ಶಾಲೆಯ ಹಿರಿಯ ಹಳೆವಿದ್ಯಾರ್ಥಿ ಹಾಗೂ ಸ್ಥಳದಾನಿ ಕೆ. ನಾರಾಯಣ ಕಿಣಿ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ವಿಶೇಷ ಚೇತನ ಹಳೆವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಶನಿವಾರ ನಡೆದ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಕೆ. ರವೀಂದ್ರ ಕಿಣಿ, ಮುಖ್ಯಶಿಕ್ಷಕ ಮಹಾಬಲೇಶ್ವರ ಐತಾಳ್, ಉದ್ಯಮಿ ಕೆ. ಕೃಷ್ಣ ಕಿಣಿ, ಖಂ.ರೈ.ಸೇ. ಸಹಕಾರಿ ಸಂಘದ ವ್ಯವಸ್ಥಾಪಕ ಹಾವಳಿ ಪೂಜಾರಿ, ಕುಷ್ಟ ದೇವಾಡಿಗ ದೀಟಿಮನೆ, ರಾಜೇಶ್ ಕಂಚಿಕಾನ್ ಉಪಸ್ಥಿತರಿದ್ದರು. ಮಂಜು ಕಂಚಿಕಾನ್ ನಿರೂಪಿಸಿ, ವಂದಿಸಿದರು. ನಂತರ ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ನಡೆಯಿತು.