ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಕ್ಷೇತ್ರದ ಅಭಿವೃದ್ಧಿ ಕುರಿತು ಹಲವು ಚಿಂತನೆಗಳಿವೆ. ಜನರ ಸೇವಕನಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತೇನೆ ಮತ್ತು ಯಾವುದೇ ಸಮಸ್ಯೆಗಳಿದ್ದರೂ ಕೂಡ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ನನ್ನನು ಸಂಪರ್ಕಿಸಬಹುದಾಗಿದೆ ಮತ್ತು ಕ್ಷೇತ್ರದ ಜನರ ಸೇವೆಗೆ ಸದಾ ಬದ್ದನಾಗಿದ್ದೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರ ಕಛೇರಿಯನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕ್ಷೇತ್ರ ರಸ್ತೆ, ಆಸ್ಪತ್ರೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಬಗ್ಗೆ ಯೋಜನೆ ರೂಪಿಸುತ್ತೇನೆ. ಮಳೆಗಾಲದಲ್ಲಿ ಐ.ಆರ್.ಬಿ ಕಾಮಗಾರಿಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿ.ಪಂ ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ್ ಬಟ್ವಾಡಿ, ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.