ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ವಿಭಾಗ ಸಹಾಯಕ ಆಯುಕ್ತ ಟಿ. ಭೂಬಾಲನ್ ಅವರು ತಾಲೂಕಿನ ವಕ್ವಾಡಿ ಹಾಗೂ ಹಕ್ಲಾಡಿ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ ಪಾಠ ಬೋಧಿಸಿದರು.
ಪಾಠ ಮಾಡುತ್ತಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ದೇಶದಲ್ಲಿ ಶೇ.26ರಷ್ಟು ಅನಕ್ಷರತೆ ಇದೆ. ಆದರೆ ದ.ಕ., ಉಡುಪಿಯಲ್ಲಿ ಎಲ್ಲರೂ ಸಾಕ್ಷರರಾಗಿದ್ದಾರೆ. ಎಲ್ಲರೂ ಶಿಕ್ಷಣ ಪಡೆಯಬೇಕು. ಈ ಮೂಲಕ ಸಾಮರಸ್ಯದ ಬದುಕು, ಪ್ರಾದೇಶಿಕ ಅಸಮತೋಲನ, ಭ್ರಷ್ಟಾಚಾರ, ಕೋಮು ಸಾಮರಸ್ಯದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಕುಂದಾಪುರ ವಿಭಾಗ ಸಹಾಯಕ ಆಯುಕ್ತ ಟಿ. ಭೂಬಾಲನ್ ಹೇಳಿದರು.
ದೇಶದ ಒಗ್ಗಟ್ಟು ಒಡೆದು ಆಳುವ ಡಿವೈಡಿಂಗ್ ಪಾಲಿಸಿ ಬ್ರಿಟಿಷರ ಕೊಡುಗೆ. ಅದನ್ನೆ ಇಂದು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಭಾಷೆಗಳ ನಡುವಿನ ಕಿತ್ತಾಟ, ಪ್ರಾದೇಶಿಕ ಅಸಮಾನತೆ, ಭ್ರಷ್ಟಾಚಾರ, ಅನಕ್ಷರತೆಗಳು ದೇಶದ ಅಭಿವೃದ್ಧಿಗೆ ತೊಡಕಾಗಿವೆ ಎಂದರು.
ಹಕ್ಲಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಡಾ| ಕಿಶೋರ್ ಕುಮಾರ್ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿಯ ಬಾಳೆಮನೆ ಗಣಪಯ್ಯ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಮೃದ್ಧಿ, ರಂಜಿತ್, ದೀಕ್ಷಿತ್, ಸೌರಭ, ನೇಹಾ, ಶ್ರೀಜಿತ್ ಸಂವಾದ ನಡೆಸಿದರು.
ವಕ್ವಾಡಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಜೀವನ ಪಾಠ ಮಾಡಿದರು. ಶಾಲೆಗೆ ದಿಢೀರ್ ಭೇಟಿ ನೀಡಿದ ಎಸಿ ಅವರು 8ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಮನುಷ್ಯನ ಜೀವನ ಉತ್ತಮವಾಗಿ ಹಾಗೂ ಉನ್ನತಿಯೆಡೆಗೆ ಸಾಗಲು ಶಿಕ್ಷಣ ಅಗತ್ಯ. ಶೈಕ್ಷಣಿಕ ಬದುಕಿನ ಜತೆಗೆ ಜೀವನ ಮೌಲ್ಯಗಳನ್ನು ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ನೀಡುವುದು ಮಾತ್ರವಲ್ಲ, ಅಶಕ್ತರಿಗೆ ಉಪಕಾರ ಮಾಡುವ ಸಹೃದಯಿ ಮನೋಭಾವ ಮೂಡಿಸಿಕೊಳ್ಳಬೇಕು ಎಂದರು.
ಶಾಲಾ ಮೂಲ ಸೌಕರ್ಯದ ಕುರಿತು ಶಿಕ್ಷಕರ ಬಳಿ ಮಾಹಿತಿ ಪಡೆದುಕೊಂಡರು. ನೂತನ ಪಠ್ಯಪುಸ್ತಕಗಳನ್ನು ಪರಿಶೀಲಿಸಿದರು.ಬಳಿಕ ಮಕ್ಕಳಿಗೆ ಸಾಂಕೇತಿಕವಾಗಿ ಪುಸ್ತಕ ವಿತರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಭಾರತಿ, ಶಿಕ್ಷಕರಾದ ಗಣೇಶ್ ಕಾಂಚನ್, ಕೃಷ್ಣ ದೇವಾಡಿಗ, ಸತ್ಯಾನಂದ ಸಾಲಿನ್ಸ್, ಶಶಿಧರ ಶೆಟ್ಟಿ, ಧರ್ಮ ನಾಯ್ಕ, ಮಧುಕರ ಶಿಂಘೆ, ಕುಪ್ಪಯ್ಯ ಪಟಗಾರ್ ಮೊದಲಾದವರು ಉಪಸ್ಥಿತರಿದ್ದರು.