ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ಗ್ರಾಮೀಣ ಭಾಗಗಳಿಗೆ ಸರಕಾರಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಶಾಲಾ ವಿದ್ಯಾರ್ಥಿಗಳು ಬೈಂದೂರು ತಹಶಿಲ್ದಾರರ ಕಛೇರಿಯ ಎದರು ಪ್ರತಿಭಟನೆ ನಡೆಸಿದರು.
ಬೈಂದೂರಿನ ಗ್ರಾಮೀಣ ಭಾಗಗಳಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್‌ಗಳನ್ನು ಏಕಾಏಕಿ ನಿಲ್ಲಿಸಿದ್ದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೇ ಬಸ್ ಸಂಚಾರ ಪುನರಾರಂಭ ಮಾಡಬೇಕು ಎಂದವರು ಪ್ರತಿಭಟನೆಯಲ್ಲಿ ಆಗ್ರಹಿಸಿದರು. ಬಳಿಕ ತಹಶೀಲ್ದಾರರು ಹಾಗೂ ಬೈಂದೂರು ಶಾಸಕರಿಗೆ ಮನವಿ ಸಲ್ಲಿಸಿದರು.
ಬಳಿಕ ಪ್ರತಿಕ್ರಿಯಿಸಿದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅನುಮತಿಯಿಲ್ಲದೇ ಬಸ್ ಓಡಿಸುತ್ತಿದ್ದು, ಖಾಸಗಿಯವರು ಲೋಕಾಯುಕ್ತ ಕೋರ್ಟ್‌ಗೆ ಹೊಗಿದ್ದರಿಂದಾಗಿ ಸಂಚಾರ ನಿಲ್ಲಿಸಿದ್ದಾರೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಅವರಿಗೆ ತಿಳಿಸಿದ್ದು ಕೂಡಲೇ ಬಸ್ ಸಂಚಾರ ಆರಂಭಿಸುವಂತೆ ಕೇಳಿಕೊಂಡಿದ್ದೇನೆ. ಒಂದು ವೇಳೆ ಬಸ್ ಸಂಚಾರ ಆರಂಭಿಸದೇ ಇದ್ದಲ್ಲಿ ಬೈಂದೂರು ಮಾರ್ಗದ ಎಲ್ಲಾ ಸರಕಾರಿ ಬಸ್ಸುಗಳನ್ನು ತಡೆಹಿಡಿದು ಪ್ರತಿಭಟಿಸಲಾಗುವುದು ಎಂದವರು ಎಚ್ಚರಿಸಿದ್ದಾರೆ.