ಸ್ಲೋಪ್ ಪ್ರೋಟೆಕ್ಷನ್ ವಾಲ್ ಪ್ಲಾಪ್, ಆತಂಕದಲ್ಲಿ ಹೆದ್ದಾರಿ ಪ್ರಯಾಣಿಕರು
ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಮಳೆಯ ಅಬ್ಬರಕ್ಕೆ ಒತ್ತಿನೆಣೆ ಗುಡ್ಡದ ತಳಭಾಗ ಬಿರುಕು ಬಿಟ್ಟಿದೆ.ಗುಡ್ಡ ಕುಸಿಯದಂತೆ ಅಳವಡಿಸಿದ ಹೈಟೆಕ್ ತಂತ್ರಜ್ಞಾನದ ಸ್ಲೋಪ್ ಪ್ರೋಟೆಕ್ಷನ್ ವಾಲ್ ಪ್ಲಾಪ್ ಆಗಿದೆ.ಕಾಂಕ್ರೀಟ್ ಅಳವಡಿಸಿದ ಜಾಗದಲ್ಲಿ ನೀರು ಜಿನುಗಲು ಪ್ರಾರಂಭವಾಗಿರುವುದು ಕಳೆದ ವರ್ಷದ ಘಟನೆ ಮರುಕಳಿಸುವುದೇ ಎನ್ನುವ ಆತಂಕ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಬೈಂದೂರಿನ ಪಾಲಿಗೆ ಅಧಿಕಾರಿಗಳ ನಿರ್ಲಕ್ಷವೇ ಇಂತಹ ಅವೈಜ್ಞಾನಿಕ ಕಾಮಗಾರಿಗೆ ಕಾರಣವಾಗಿದೆ.ಇಲ್ಲಿನ ಭೌಗೋಳಿಕ ಅಂಶಗಳ ಜ್ಞಾನವಿಲ್ಲದ ತಂತ್ರಜ್ಞರ ಯೋಜನೆಯಿಂದ ಪ್ರತಿ ವರ್ಷ ಸಮಸ್ಯೆ ಮರುಕಳಿಸುವಂತೆ ಮಾಡಿದೆ.ಗುರುವಾರ ರಾತ್ರಿ ಸುರಿದ ಮಳೆಗೆ ಗುಡ್ಡದ ಅಂಚಿನಲ್ಲಿ ಮಣ್ಣು ಜಾರದಂತೆ ನಿರ್ಮಿಸಿದ ಕಾಂಕ್ರೀಟ್ ದಂಡೆ ಕೊಚ್ಚಿ ಹೋಗಿದೆ.ಮಾತ್ರವಲ್ಲದೆ ಸಂಪೂರ್ಣ ಸ್ಲೋಪ್ ಪ್ರೋಟೆಕ್ಷನ್ ವಾಲ್ ಬಿರುಕು ಬಿಡುವ ಸಾಧ್ಯತೆಗಳಿವೆ. ಗುಡ್ಡದ ಶೇಡಿ ಮಣ್ಣು ಚರಂಡಿಗೆ ಇಳಿಯುತ್ತಿದೆ.ಕಾಂಕ್ರೀಟ್ ಹೊದಿಕೆ ಕುಸಿಯುವ ಸಾಧ್ಯತೆಗಳಿವೆ. ಪ್ರಾರಂಭದಲ್ಲೂ ಗುಡ್ಡ ಕುಸಿಯುವ ಭೀತಿಯಲ್ಲಿರುವ ಕುರಿತು ಹಾಗೂ ಮಳೆಗಾಲದಲ್ಲಿ ಕಳೆದ ವರ್ಷದ ಘಟನೆ ಮರುಕಳಿಸುವ ಸಾಧ್ಯತೆ ಬಗ್ಗೆ ಉದಯವಾಣಿ ಬೆಳಕು ಚೆಲ್ಲಿತ್ತು. ಒಂದೆರಡು ದಿನ ನಿರಂತರ ಮಳೆ ಸುರಿದರೆ ಸಂಪೂರ್ಣ ರಸ್ತೆ ತಡೆ ಉಂಟಾಗುವ ಸಾಧ್ಯತೆಗಳಿವೆ. ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಒತ್ತಿನೆಣೆ ಗುಡ್ಡವನ್ನು ಕೊರೆದು ಇಬ್ಬಾಗ ಮಾಡಲಾಗಿದೆ. ಮೇಲ್ಭಾಗದಲ್ಲಿ ಮ್ಯಾಂಗನೀಸ್ ಕಲ್ಲಿನ ಪೊಟೆರೆಗಳಿದ್ದರು ಸಹ ಅಡಿಭಾಗದಲ್ಲಿ ಸಂಪೂರ್ಣ ಶೇಡಿ ಮಣ್ಣಿನಿಂದ ಆವೃತವಾಗಿದೆ.ಮಾತ್ರವಲ್ಲದೆ ಗುಡ್ಡದ ಅಂಚಿನಲ್ಲಿ ಜಿನುಗುವ ನೀರಿನ ಸೆಲೆಯಿಂದಾಗಿ ಮಣ್ಣಿನ ಅಂಟಿನ ಸಾಂದ್ರತೆ ಕಡಿಮೆಯಾಗಿ ಕಳೆದ ಬಾರಿ ಸಂಪೂರ್ಣ ಗುಡ್ಡವೆ ಕುಸಿದು ಬಿದ್ದಿತ್ತು.ಹೀಗಾಗಿ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿ ಗುಡ್ಡವನ್ನು ಕೊರೆದು ಕಬ್ಬಿಣದ ರಾಡ್ ಹಾಗೂ ಮೆಶ್ ಅಳವಡಿಸಿ ಅದರ ಮೇಲೆ ಸಂಪೂರ್ಣ ಕಾಂಕ್ರೀಟ್ ಮಾಡಲಾಗಿದೆ.ಇದರಿಂದ ಮಳೆಗಾಲದಲ್ಲಿ ನೀರು ಇಂಗದೆ ಸರಾಗವಾಗಿ ಹರಿದು ಹೋಗುತ್ತದೆ.ಮಾತ್ರವಲ್ಲದೆ ಗುಡ್ಡದ ಕೆಳಭಾಗದಲ್ಲಿ ಕಾಂಕ್ರಿಟ್ ಚರಂಡಿ ನಿರ್ಮಿಸಲಾಗಿದೆ.ಇದು ಬಂದೂರಿನಲ್ಲಿ ಮೊದಲ ಬಾರಿ ಅಳವಡಿಸಲಾಗಿದೆ.ಕಾಂಕ್ರಿಟ್ ಅಳವಡಿಸಿದ ಪಕ್ಕದಲ್ಲಿ ಲವಂಚ ಮಾದರಿಯ ಹುಲ್ಲುಗಳನ್ನು ನೆಡಲಾಗಿದೆ.ಇದರ ಬೇರುಗಳು ಆಳಕ್ಕೆ ಇಳಿಯುವುದರಿಂದ ಮಣ್ಣು ಕದಲದಂತೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಕಂಪೆನಿಯ ಲೆಕ್ಕಾಚಾರವಾಗಿದೆ.
ಈ ಕುರಿತು ಪ್ರತಿಕ್ರಯಿಸಿದ ಐ.ಆರ್.ಬಿ ಪ್ರೋಜೆಕ್ಟ್ ಮೆನೇಜರ್ ಯೋಗೇಂದ್ರಪ್ಪ ಗುಡ್ಡ ಕುಸಿಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಅಳವಡಿಸಿದ್ದೇವೆ.ಗುಡ್ಡದ ಪಕ್ಕದಲ್ಲಿ ಬೆಳೆಸಿದ ಆಸ್ಟ್ರೇಲಿಯನ್ ಮೂಲದ ಗಿಡಗಳು ಬೆಳೆಯಲು ಕನಿಷ್ಟ ಆರರಿಂದ ಹತ್ತು ತಿಂಗಳು ಬೇಕಾಗುತ್ತದೆ.ಒಂದು ತಿಂಗಳ ಹಿಂದೆ ನೆಟ್ಟಿರುವುದರ ಪರಿಣಾಮ ಬೇರು ಮಣ್ಣನ್ನು ಸೇರಿಕೊಳ್ಳದೆ ಕುಸಿಯುತ್ತಿದೆ.ಕಾಂಕ್ರಿಟ್ ಅಳವಡಿಕೆಯ ಸ್ಲೋಪ್ ಪ್ರೋಟೆಕ್ಷನ್ ವಾಲ್ ಕುಸಿಯುವ ಬಗ್ಗೆ ಆತಂಕ ಬೇಡ ಯಾವುದೇ ರೀತಿಯಲ್ಲೂ ಸಹ ಕಳೆದ ವರ್ಷದಂತೆ ಘಟನೆ ಮರುಕಳಿಸುವುದಿಲ್ಲ .ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು.
ಇಲ್ಲಿನ ಒತ್ತಿನೆಣೆ ಗುಡ್ಡ ಕುಸಿತಕ್ಕೆ ಸಮೀಪದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮುನಿಸು ಕಾರಣವೆಂದು ಸ್ಥಳೀಯರ ಅಭಿಪ್ರಾಯವಾಗಿದೆ.ಈ ಬಾರಿ ಐ.ಆರ್.ಬಿ ಕಂಪೆನಿ ಅಧಿಕಾರಿಗಳು ರಾಘವೇಂದ್ರ ಮಠಕ್ಕೆ ಪ್ರತ್ಯೇಕ ರಸ್ತೆ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಆ ರಸ್ತೆಯೂ ಮಳೆಯಿಂದ ಕೊರೆದು ಹೋಗಿದೆ.
ಸ್ಥಳಕ್ಕೆ ಎ.ಸಿ , ಶಾಸಕರ ಭೇಟಿ
ಒತ್ತಿನೆಣೆ ಗುಡ್ಡ ಕುಸಿತ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ಹಾಗೂ ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿಯವರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಪುರಂದರ ಹೆಗ್ಡೆ, ಬೈಂದೂರು ಆರಕ್ಷಕ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್, ಗ್ರಾಮಕರಣಿಕ ಮಂಜುನಾಥ ಬಿಲ್ಲವ ಹಾಜರಿದ್ದರು.