ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಜನಮನ್ನಣೆ ಗಳಿಸಿದ್ದ ಮಂಗಳೂರು – ಭಟ್ಕಳ ವೋಲ್ವೋ ಬಸ್‌ಗಳ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆ ಏಕಾಏಕಿ ಹೆಚ್ಚಿಸುವ ಮೂಲಕ ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಿದೆ. ಭಟ್ಕಳದಿಂದ ಮಂಗಳೂರಿಗೆ ಸರಾಸರಿ 40 ರೂ. ಹೆಚ್ಚಾಗಿರುವುದರಿಂದ ನಿತ್ಯ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ.
ವೋಲ್ವೋ ಪ್ರಾರಂಭವಾದ ಬಳಿಕ ಪ್ರಯಾಣಿಕರ ಸ್ಪಂದನ ಉತ್ತಮವಾಗಿತ್ತು. ಬಹುತೇಕ ಬಸ್‌ಗಳು ತುಂಬಿ ತುಳುಕುತ್ತಿದ್ದವು. ಈ ಸರಕಾರಿ ಬಸ್ ವ್ಯವಸ್ಥೆ ಖಾಸಗಿ ವಾಹನಗಳ ಮೇಲೆಯೂ ಸಾಕಷ್ಟು ಪರಿಣಾಮ ಬೀರಿತ್ತು. ಇದೀಗ ಏಕಾಏಕಿ ದರ ಹೆಚ್ಚಿಸಿರುವುದರಿಂದ ಜನತೆ ವೋಲ್ವೋ ಬಸ್‌ಗಳಿಂದ ದೂರವಾಗುವ ಸಾಧ್ಯತೆಗಳಿವೆ.
3 ಕೋ.ರೂ. ನಷ್ಟ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ಕಳೆದ ಆರ್ಥಿಕ ವರ್ಷದಲ್ಲಿ 22.52 ಕೋ.ರೂ. ನಷ್ಟದಲ್ಲಿದೆ. ಜನವರಿಯಲ್ಲಿ ಭಟ್ಕಳ – ಮಂಗಳೂರು ನಡುವೆ 8 ವೋಲ್ವೋ ಬಸ್‌ಗಳನ್ನು ಪ್ರಾರಂಭಿಸಲಾಗಿತ್ತು. ಇದರಿಂದ ಲಾಭವಾಗುವ ಬದಲು ನಷ್ಟವೇ ಅಧಿಕವಾಗಿದೆ. ಭಟ್ಕಳ-ಮಂಗಳೂರು ವೋಲ್ವೋ ಬಸ್ ಸಂಚಾರದಲ್ಲೇ ಜನವರಿಯಿಂದ ಇಲ್ಲಿನ ವರೆಗೆ 3 ಕೋ.ರೂ. ನಷ್ಟವಾದರೆ ಕಳೆದ ಆರ್ಥಿಕ ವರ್ಷದಲ್ಲಿ 2.47 ಕೋಟಿ ರೂ. ನಷ್ಟ ಆಗಿದೆ. ಬಸ್ ಆರಂಭಿಸುವಾಗ ಖಾಸಗಿಯವರಿಗೆ ಪೈಪೋಟಿ ನೀಡಲು ಕಡಿಮೆ ದರ ನಿಗದಿಪಡಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ವೋಲ್ವೋ ಬಸ್‌ಗೆ ಪ್ರತಿ ಕಿ.ಮೀ.ಗೆ 56 ರೂ. ವೆಚ್ಚವಾಗುತ್ತದೆ. ಆದಾಯ 33ರೂ. ಆಗಿದ್ದು, ಪ್ರತಿ ಕಿ.ಮೀ.ಗೆ ಸರಾಸರಿ 23 ರೂ. ನಷ್ಟವಾಗುತ್ತದೆ. ಸೀಸನ್‌ನಲ್ಲಿ ಗಳಿಸಿರುವ ಆದಾಯದ ಮೂಲಕ ಸರಿದೂಗಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಮಳೆಗಾಲದಲ್ಲಿ ನಷ್ಟದಲ್ಲಿ ಬಸ್ ಓಡಿಸಲು ಕಷ್ಟವಾಗುತ್ತಿದ್ದು, ದರ ಏರಿಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.