ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರದ ಸೇವಾ ಸಂಗಮ ದತ್ತಾತ್ರೇಯ ಶಿಶು ಮಂದಿರದ ಪ್ರಥಮ ಮಹಡಿಯ ಸ್ವಾಮೀ ವಿವೇಕಾನಂದ ಮಂದಿರವನ್ನು ಉದ್ಘಾಟಿಸಲಾಯಿತು.
ಉದ್ಘಾಟನೆ ಮಾಡಿದ ನಿವೃತ್ತಿ ಗುರುಕುಲ ಹರಿಖಂಡಿಗೆಯ ಸಂಸ್ಥಾಪಕರಾದ ಕೆ.ಶಾಂತರಾಂ ಅಚ್ಯುತ್ ಭಂಡಾರ್‌ಕಾರ್ ಮಾತನಾಡಿ ಮನುಷ್ಯ ಜನ್ಮದಲ್ಲಿ ಹುಟಿದ ನಾವು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಅದರಲ್ಲಿ ಸಂತೋಷವಿದೆ, ಆತ್ಮತೃಪ್ತಿ ಇದೆ. ನಾವು ಬದುಕಿರುವುದು ಕೆಲವೇ ಸಮಯ. ಎಲ್ಲವೂ ನಶ್ವರ. ಆದರೆ ಆತ್ಮತೃಪ್ತಿ ಮಾತ್ರ ಶಾಶ್ವತ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸ್ವಾಮಿ ಶ್ರೀ ಸತ್ಯ ಸ್ವರೂಪಾನಂದಜೀ (ರಾಮಕೃಷ್ಣ ಕುಟೀರ, ಯಳಜಿತ್, ಬೈಂದೂರು) ಇವರು ಮಾತನಾಡುತ್ತಾ ಭಗವದ್ಗೀತೆ ಉತ್ತಮ ಜೀವನದ ದಾರಿ ಬೆಳಕು. ಮಾತೆಯರು ಈ ಬಗ್ಗೆ ಆಸಕ್ತಿವಹಿಸಿ ಮಕ್ಕಳು ಪ್ರತೀ ದಿನ ಭಗವದ್ಗೀತೆ ಪಠಣ ಮಾಡುವಂತೆ ಪ್ರಯತ್ನಿಸಬೇಕು ಎಂದರು. ಮಂದಿರವನ್ನು ನಿರ್ಮಿಸಿ ಕೊಟ್ಟ ಸೇವಾಕರ್ತರಾದ ನರಸಿಂಹ ಸುಂದರ ಹೆಗ್ಡೆ ದಂಪತಿಗಳನ್ನು ಶಿಶುಮಂದಿರದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಹೆಗ್ಡೆಯವರು ಧನವನ್ನು ಕೂಡಿಡುವುದರಲ್ಲಿ ಅರ್ಥವಿಲ್ಲ. ಅವಶ್ಯಕತೆ ಇರುವವರಿಗೆ ಅದನ್ನು ನೀಡಿದಾಗ ಮಾತ್ರ ಬೆಲೆ. ಶಿಶುಮಂದಿರ ಮಕ್ಕಳಲ್ಲಿ ಸಂಸ್ಕಾರದ ಬೀಜವನ್ನು ಬಿತ್ತಿ ಅವರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುವ ಕೇಂದ್ರವಾಗಿದೆ ಎಂದರು.
ಸೇವಾ ಸಂಗಮ ಟ್ರಸ್ಟಿನ ವಿಶ್ವಸ್ಥರಾದ ಸುಬ್ರಹ್ಮಣ್ಯ ಹೊಳ್ಳರು ಶುಭಾಶಂಸನೆ ನುಡಿದರು. ಸೇವಾ ಸಂಗಮ ಟ್ರಸ್ಟ್‌ನ ಕೋಶಾಧ್ಯಕ್ಷರಾದ ಡಾ. ಎಚ್. ರಾಮ್ ಮೋಹನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಶುಮಂದಿರದ ಅಧ್ಯಕ್ಷೆ ಪ್ರೇಮಾ ಪಡಿಯಾರ್ ಸ್ವಾಗತಿಸಿದರು. ಮೀರಾ ಕಾಮತ್ ಪ್ರಾರ್ಥಿಸಿದರು. ಮಲ್ಲಿಕಾ ಸುದರ್ಶನ ವಂದಿಸಿದರು. ರಶ್ಮಿರಾಜ್ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥರಾದ ಚಂದ್ರಶೇಖರ್ ಪಡಿಯಾರ್, ಶಿಶು ಮಂದಿರದ ಸದಸ್ಯೆ ಉಷಾ ಆಚಾರ್ ಸಹಕರಿಸಿದರು.