ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಯಡ್ತರೆ ಗ್ರಾಪಂ ವ್ಯಾಪ್ತಿಯ ಕೊರಾಡಿ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ಮದ್ದೋಡಿ ಮತ್ತು ಆಲಂದೂರು ಭಾಗದ ಗ್ರಾಮಸ್ಥರಿಂದ ನೂತನ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು ರಾಜ್ಯದ ಜನತೆ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಬೇಸತ್ತು ಈ ಬಾರಿ ಬಿಜೆಪಿಯ ಹೆಚ್ಚಿನ ಸ್ಥಾನವನ್ನು ಗಳಿಸಿಕೊಟ್ಟರೂ ಕೆಲವೇ ಸೀಟುಗಳ ಕೊರತೆಯಿಂದಾಗಿ ಬಹುಮತ ಬರದ ಹಿನ್ನೆಲೆಯಲ್ಲಿ ಜಿಜೆಪಿಗೆ ಆಡಳಿತ ನಡೆಸಲಾಗಿಲ್ಲ. ತಿಂಗಳು ಕಳೆದರೂ ಇನ್ನೂ ಟೇಕ್‌ಅಪ್ ಆಗದ ಈಗಿನ ಸಮ್ಮಿಶ್ರ ಸರ್ಕಾರ ಆರು ತಿಂಗಳೊಳಗೆ ಪಥನಗೊಂಡು ಮುಂದೆ ಯಡಿಯೂರಪ್ಪನವರ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನಡಿದರು.
ಸಮಾಜದ ಕಟ್ಟಕಡೆಯ ಮಗುವು ಕೂಡಾ ವಿದ್ಯಾವಂತನಾದರೆ ಭಾರತ ಬಲಿಷ್ಠಗೊಳ್ಳುತ್ತದೆ. ಆ ನೆಲೆಯಲ್ಲಿ ಮೊದಲಿನಿಂದಲೂ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ವಂತ ಲಾಭಕ್ಕಾಗಿ ಮಾಡದೇ ನಿಸ್ವಾರ್ಥದಿಂದ ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ. ಈಗಿನ ನನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಅನ್ಯಾಯ, ಮೋಸ, ಭೃಷ್ಟಾಚಾರಗಳಿಗೆ ಅವಕಾಶ ಕೊಡದೇ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವುದೇ ನನ್ನ ಮೊದಲ ಆದ್ಯತೆಯಾಗಿದ್ದು, ನಿರೀಕ್ಷೆಗೂ ಮೀರಿದ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಜನತೆಯ ಸೇವಕನಾಗಿ ದಿನದ 18 ಗಂಟೆ ಸೇವೆ ಮಾಡುತ್ತೇನೆ ಎಂದ ಸಾರಿದರು.
ಜಿಪಂ ಸದಸ್ಯ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರು ಕ್ಷೇತ್ರದ ನೂತನ ಶಾಸಕರನ್ನು ಸನ್ಮಾನಿಸಿದರು. ತಾಲೂಕು ರೈತಸಂಘದ ಅಧ್ಯಕ್ಷ ಎನ್. ದೀಪಕ್‌ಕುಮಾರ್ ಶೆಟ್ಟಿ, ಗ್ರಾಮದ ಹಿರಿಯರಾದ ಅಬ್ಬಣ್ಣ ಮೊಗವೀರ, ಉದ್ಯಮಿ ಶರತ್‌ಕುಮಾರ್ ಶೆಟ್ಟಿ, ಯಡ್ತರೆ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಕುಪ್ಪಯ್ಯ ಮರಾಠಿ ಉಪಸ್ಥಿತರಿದ್ದರು.
ಜೈಸನ್ ಎಂ.ಡಿ. ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಿಕ್ಷಕರಾದ ತಗ್ಗರ್ಸೆ ತಿಮ್ಮಪ್ಪ ಗಾಣಿಗ ನಿರೂಪಿಸಿ, ಪಿ.ಐ. ಬೇಬಿ ಮಾಸ್ಟರ್ ವಂದಿಸಿದರು.
ಇನ್ನು ಮುಂದೆ ಬೈಂದೂರು ಕ್ಷೇತ್ರದಲ್ಲಿ ಮಟ್ಕಾದಂಧೆ, ಹಳ್ಳಿ ಪ್ರದೇಶಗಳ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕೂಡಲೇ ಬ್ರೇಕ್ ಹಾಕುವಂತೆ ಜಿಲ್ಲಾ ಪೋಲಿಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ತಕ್ಷಣ ಇವೆರಡನ್ನು ಬಂದ್ ಮಾಡದಿದ್ದರೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ.– ಬಿ. ಎಂ. ಸುಕುಮಾರ್ ಶೆಟ್ಟಿ, ಶಾಸಕರು ಬೈಂದೂರು.















