ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಪತ್ರಕರ್ತ ನಾಗೇಂದ್ರ ಪಿ. ತ್ರಾಸಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಪತ್ರಕರ್ತ ನಾಗೇಂದ್ರ ಪಿ. ತ್ರಾಸಿಯವರು ಮಾತನಾಡಿ ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುತ್ತಿರುವ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿದೆ. ಶಾಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ಹೊಂದಿಸಿಕೊಂಡು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಕೆ., ತನ್ನ ಪುತ್ರಿ ಪ್ರಾರ್ಥನಾ ಎನ್. ತ್ರಾಸಿ ಇವಳ ಹುಟ್ಟು ಹಬ್ಬದ ಸವಿ ನೆನಪಿಗಾಗಿ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ನೀತಿ ಕಥೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿರುವುದನ್ನು ಶ್ಲಾಘಿಸಿದರು.
ಶಾರದಾ ನಾಗೇಂದ್ರ, ಶಾಲೆಯ ಸಹಶಿಕ್ಷಕರಾದ ಶಶಿಶಂಕರ್, ರಾಜೀವ ಶೆಟ್ಟಿ, ಸುಮತಿ, ಸುಜಾತಾ, ಮಂಜುಳಾ, ಸರಿತಾ, ದೈಹಿಕ ಶಿಕ್ಷಣ ಶಿಕ್ಷಕ ಉಮೇಶ, ಗೌರವ ಶಿಕ್ಷಕಿ ದೀಪಾ ಖಾರ್ವಿ, ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.