ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜ ಸುಧಾರಣೆಗಾಗಿ, ಹಿಂದೂ ತತ್ವದ ಜಾಗೃತಿಗಾಗಿ ಸರ್ವವನ್ನು ಪರಿತ್ಯಜಿಸಿ ಸಂನ್ಯಾಸ ಸ್ವೀಕರಿಸಿರುವುದು ಬದುಕಿನ ದೊಡ್ಡ ನಿರ್ಧಾರವೇ ಸರಿ. ರಾಜಕೀಯ ಕಾರಣದಿಂದಾಗಿ ಮುಸುಕಾಗಿ ಕಾಣುತ್ತಿರುವ ಹಿಂದೂ ಧರ್ಮ ಸದಾ ಪ್ರಜ್ವಲಿಸುತ್ತಿರಬೇಕಾದರೆ ಭಗವದ್ಗೀತೆ ಹಾಗೂ ಧಾರ್ಮಿಕ ಗ್ರಂಥಗಳ ಪಠಣ ನಿರಂತರ ನಡೆಯುದವರ ಜೊತೆಗೆ ಸಂತರ ಧರ್ಮ ಜಾಗೃತಿಗಾಗಿ ಕಾರ್ಯವೂ ಅಗತ್ಯವಾಗಿದೆ ಎಂದು ಗೋಕರ್ಣ ಮಾದನಗಿರಿ ಶ್ರೀ ಸಿದ್ಧಿವಿನಾಯಕ ಮಹಾಲಸ ನಾರಾಯಣ ದೇವಸ್ಥಾನದ ಮೊಕ್ತೇಸರರಾದ ಸುನಿಲ್ ಪೈ ಹೇಳಿದರು.
ಅವರು ಏಳಜಿತದಲ್ಲಿ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಶ್ರೀ ರಾಮಕೃಷ್ಣ ಕುಟೀರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಾಗುವ ಘಟನೆಗಳೇ ನಮ್ಮನ್ನು ಬದಲಿಸಿ ಸಾಕ್ಷಾತ್ಕಾರದೆಡೆಗೆ ಕರೆದೊಯ್ಯುತ್ತದೆ. ಮನುಷ್ಯನ ಅಂತಸ್ತಿನ ಆಧಾರದಲ್ಲಿ ಸ್ನೇಹವನ್ನು ಸರಿದೂಗಿಸಲು ಸಾಧ್ಯವಿಲ್ಲ. ಅಂತಸ್ತು ಇದ್ದಾಗಲೂ ಇಲ್ಲದಾಗಲೂ ಇರುವ ಪ್ರೀತಿ, ವಿಶ್ವಾಸವೇ ಬದುಕಿನಲ್ಲಿ ಮುಖ್ಯವಾದದ್ದು ಎಂದರು.
ಶ್ರೀ ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ಮಾತನಾಡಿ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿವರು ತಮ್ಮ ಪೂರ್ವಾಶ್ರಮದಲ್ಲಿ ಸಾಂಸ್ಕೃತಿಕ ಸಂಘದ ಮೂಲಕ ಸಂಗೀತ ಮಾತ್ರವಲ್ಲದೇ ಶೈಕ್ಷಣಿಕವಾಗಿಯೂ ಹಲವಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಭಗವದ್ಗೀತೆ ಅಭಿಯಾನ, ಪುಸ್ತಕ ಪ್ರಕಟಣೆಯ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಅವರು ಸಂನ್ಯಾಸ ಸ್ವೀಕರಿಸಿರುವುದು ಸಮಾಜದ ಉನ್ನತಿಯ ಬಗೆಗೆ ಅವರಲ್ಲಿನ ಕಳಕಳಿ ಸೂಚಿಸುತ್ತದೆ ಎಂದರು.
ನಿವೃತ್ತ ಮುಖ್ಯೋಪಧ್ಯಾಯ ವಿಶ್ವೇಶ್ವರ ಮಯ್ಯ ಉಪಸ್ಥಿತರಿದ್ದರು. ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ವಿದ್ಯಾರ್ಥಿಗಳು ಶ್ರೀ ಭಗವದ್ಗೀತಾ ಸ್ತೋತ್ರ ಪಠಣ, ಭಜನಾ ಕಾಯಕ್ರಮಗಳನ್ನು ನಡೆಸಿದರು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.