ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹತ್ತಾರು ವರ್ಷಗಳಿಂದ ಸರ್ಕಾರಿ ನಿವೇಶನದಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವ ಕ್ಷೇತ್ರದ 170 ಕುಟುಂಬಗಳಿಗೆ ಇಲ್ಲಿನ ಶಾಸಕರ ಕಛೇರಿಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಕ್ಕುಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಅವರು ಇಂದು ಹಕ್ಕುಪತ್ರ ವಿತರಿಸಿದ ನಿವೇಶನಕ್ಕೆ ಮುಂದಿನ 15 ದಿನದೊಳಗೆ ಆರ್‌ಟಿಸಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೊದಲಾದ ಪಿಂಚಣೆಗಳ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಲೆನಾಡು ಹಾಗೂ ಕರಾವಳಿ ಪ್ರದೇಶಗಳನ್ನೊಳಗೊಂಡಿರುವ ಈ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ, ಕಿಂಡಿಅಣೆಕಟ್ಟು ಮೊದಲಾದ ಮೂಲಸೌಕರ್ಯ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಹಂತ ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕಳೆದ ಐದು ದಿನಗಳ ಹಿಂದೆ ನದಿಗೆ ಬಿದ್ದು ಪ್ರಾಣ ಕಳೆದುಕೊಂಡ ಬಿಜೂರು ಗ್ರಾಮದ ಅಣ್ಣಪ್ಪ ದೇವಾಡಿಗ ಕುಟುಂಬಕ್ಕೆ ಹಾಗೂ ಸಿಡಿಲು ಬಡಿದು ಮನೆ ಹಾನಿಗೀಡಾದ ಆಲಂದೂರು ಚಂದ್ರ ಹಣಬ ಅವರ ಕುಟುಂಬಕ್ಕೆ ತಲಾ ೫ ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಜಿಪಂ ಸದಸ್ಯ ಶಂಕರ ಪೂಜಾರಿ, ತಾಪಂ ಸದಸ್ಯರಾದ ಸುಜಾತ ದೇವಾಡಿಗ, ಪುಷ್ಪರಾಜ ಶೆಟ್ಟಿ, ದೀಪಕ್‌ಕುಮಾರ ಶೆಟ್ಟಿ, ತಹಶೀಲ್ದಾರ ಪುರಂದರ ಹೆಗ್ಡೆ, ಕಂದಾಯ ಅಧಿಕಾರಿ ಅಣ್ಣಪ್ಪ ದೇವಾಡಿಗ, ಗಿರೀಶ ಬೈಂದೂರು, ಮತ್ತಿತರರು ಉಪಸ್ಥಿತರಿದ್ದರು.