ಅಗಸ್ಟ 10ರಂದು ರಾಜ್ಯಾದ್ಯಂತ ‘ ಕತ್ತಲೆಕೋಣೆ’ ಬಿಡುಗಡೆಗೆ ತಯಾರಿ ನಡೆಸಿದೆ ಚಿತ್ರತಂಡ
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕನ್ನಡ ಸಿನೆಮಾ ಮಾಡೊದೆಂದರೆ ಗಾಂಧಿನಗರದಲ್ಲಿ ಚಪ್ಪಲಿ ಸವೆಸಬೇಕು ಎಂಬ ಅಲಿಕಿತ ನಿಯಮವೊಂದಿತ್ತು. ಬೆಂಗಳೂರಿನಲ್ಲಿ ಅಲೆಯದೇ, ಅಲ್ಲಿನ ಅನುಭವ ಪಡೆಯದೇ ಸಿನೆಮಾ ತಯಾರಿಸಲು ಸಾಧ್ಯವೇ ಇಲ್ಲ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಆದರೆ ನಮ್ಮ ಕುಂದಾಪುರದ ಯುವಕ ಅಂತಹ ಯೋಚನೆಯೊಂದನ್ನೂ ಮೀರಿ ತನ್ನದೇ ನಿರ್ದೇಶನದಲ್ಲಿ ಕರಾವಳಿಯ ಕಲಾವಿದರನ್ನು ತೊಡಗಿಸಿಕೊಂಡು ಹೈ ಬಜೆಟ್ ಸಿನೆಮಾವೊಂದನ್ನು ತಯಾರಿಸಿದ್ದಾರೆ. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದು, ಅಗಸ್ಟ್ ೧೦ ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ.
ಸಿನೆಮಾ ರಂಗದಲ್ಲಿ ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದ್ದು ಕುಂದಾಪುರ ತಾಲೂಕಿನ ಆಜ್ರಿಯ ಯುವಕ ಸಂದೇಶ್ ಶೆಟ್ಟಿ ಆಜ್ರಿ. ಪತ್ರಕರ್ತನಾಗಿ, ಹೋಟೆಲ್ ಉದ್ಯಮಿಯಾಗಿ ಕುಂದಾಪುರ, ಮುಂಬೈ ಮೊದಲಾದೆಡೆ ಕಾರ್ಯನಿರ್ವಹಿಸಿದ್ದ ಸಂದೇಶ್ ಶೆಟ್ಟಿ ಪ್ರಸ್ತುತ ಸುದ್ದಿ ಟಿವಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿದ್ದಾರೆ. ಸಿನೆಮಾ ಮಾಡಬೇಕು ಎಂಬ ಅವರ ಬಹುಕಾಲದ ಕನಸೊಂದನ್ನು ಕಥೆಯಾಗಿಸಿ, ಚಿತ್ರಕಥೆ ಬರೆದು, ತಾನೇ ನಿರ್ದೇಶವನ್ನೂ ಮಾಡಿ ತೆರೆ ಮೇಲೆ ತರಲು ಕೊನೆಯ ಹಂತದ ಸಿದ್ಧತೆ ನಡೆಸಿದ್ದಾರೆ.
ಕತ್ತಲೆಕೋಣೆ: ಭಾವನೆಗಳ ಮಹತ್ವ ತಿಳಿಸುವ ಥ್ರಿಲ್ಲರ್ ಕಥನ:
ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿರುವ ’ಕತ್ತಲೆಕೋಣೆ’ ಸಿನೆಮಾಕ್ಕೆ ನೈಜ್ಯ ಕಥೆಯೇ ಜೀವಾಳ. ಇಲ್ಲಿ ಕುಟುಂಬವೊಂದರ ಐಷಾರಾಮಿ ಬದುಕಿನ ಪರಿಚಯವಿದೆ, ವಿದ್ಯಾರ್ಥಿಯೋರ್ವನ ಕನಸಿದೆ, ಶಾಲಾ ಜೀವನದ ನೆನಪುಗಳಿವೆ, ಪತ್ರಿಕೋದ್ಯಮದ ಎರಡು ಮುಖಗಳ ಪರಿಚಯವಿದೆ, ಸಾಮಾಜಿಕ ವ್ಯವಸ್ಥೆಯನ್ನು ದುಷ್ಟ ಶಕ್ತಿಗಳು ಹೇಗೆ ತಮ್ಮ ಕೈಗೊಂಬೆಯಾಗಿಸಿಕೊಳುತ್ತದೆ ಅದಕ್ಕೆ ಪೂರಕವಾಗಿ ಪರಿಸರ ಹೇಗೆ ನಿರ್ಮಾಣವಾಗುತ್ತದೆ ಎನ್ನುವುದು ಇಲ್ಲಿ ಸಿನೆಮಾವಾಗಿದೆ. ಸೈನಿಕನಾಗಬಯಸುವ ಹುಡುಗನ ಆಸೆ ಹೇಗೆ ಕಮರಿ ಹೋಯ್ತು. ಈ ವ್ಯವಸ್ಥೆ ಆತನ ಕನಸನ್ನೆ ದಾಳವಾಗಿಸಿಕೊಂಡು ಹೇಗೆ ಸೈಕೋ ಆಗಿ ಪರಿವರ್ತನೆ ಮಾಡುತ್ತದೆ ಎನ್ನುವುದೇ ಈ ಚಿತ್ರದ ಒನ್ ಲೈನ್ ಸ್ಟೋರಿ.
ಸತತ ಎರಡು ವರ್ಷಗಳ ಬಳಿಕ ’ಕತ್ತಲೆಕೋಣೆ’ ಚಲನಚಿತ್ರ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಇನ್ನೇನು ಮುಂದಿನ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಹುತೇಕ ಕರಾವಳಿಯ ಹಾಗೂ ಹೊಸ ತಾರಾಗಣವಿರುವ ಚಿತ್ರದಲ್ಲಿ ಸಂದೇಶ ಶೆಟ್ಟಿ ಅವರೇ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಮುಂಬೈನ ಮಾಡೆಲಿಂಗ್ ಕ್ಷೇತ್ರದ ಹೆಸರು ಮಾಡಿರುವ ಕನ್ನಡದ ಬೆಡಗಿ ಹೆನಿಕಾ ರಾವ್ ಚಿತ್ರದ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ವೈಶಾಖ್ ಅಮೀನ್, ರತಿಕ್ ಮುರುಡೇಶ್ವರ್, ರಘು ಪಾಂಡೇಶ್ವರ, ಶ್ರೀನಿವಾಸ್ ಪೈ, ಚಿತ್ರಕಲಾ ರಾಜೇಶ್, ಅಶ್ವಥ್ ಆಚಾರ್ಯ, ಸುನಿಲ್ ಉಪ್ಪುಂದ, ರೋಹಿತ್ ಅಂಪಾರ್, ಚಂದ್ರ ವಸಂತ, ಮಂಜುನಾಥ್ ಸಾಲಿಯನ್, ನಾಗರಾಜ್ ರಾವ್ ನಟಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಹೈಬಜೆಟ್ ಸಿನೆಮಾ:
ಕತ್ತಲೆಕೋಣೆ ಎಂಬ ಹೆಸರಿನ ಕಥೆಯನ್ನು ಚಲನಚಿತ್ರ ಮಾಡಲೇಬೇಕು ಎನ್ನುವ ಕನಸು ಹೊತ್ತು ಚಿತ್ರ ನಿರ್ಮಾಣದ ಕುರಿತು ಮಾಹಿತಿ ಪಡೆದು ಒಂದಿಷ್ಟು ತಂತ್ರಜ್ಞರೊಂದಿಗೆ ಕೆಲಸ ಮಾಡಿ ಅನುಭವ ಸಂಪಾದಿಸಿದ ಬಳಿಕ ಕಳೆದ ಎರಡು ವರ್ಷಗಳ ಹಿಂದೆ ಸಂದೇಶ್ ಶೆಟ್ಟಿ ಕತ್ತಲೆಕೋಣೆ ಚಲನಚಿತ್ರ ಪ್ರಾರಂಭಿಸಿದ್ದರು. ಮೊದಲ ಭಾರಿಗೆ ಸಿನೆಮಾ ನಿರ್ದೇಶಕ ಹಾಗು ನಾಯಕ ನಟನಾಗಿ ಕಾಣಿಸಿಕೊಂಡ ಸಂದೇಶ ಅವರ ಕನಸಿಗೆ ಸ್ಪಂದಿಸಿದವರು ನಿರ್ಮಾಪಕ ಪುರುಪೋತ್ತಮ್ ಅಮೀನ್ ಮುಂಬೈ. ಬಳಿಕ ಚಿತ್ರಕ್ಕೆ ಶ್ರೀನಿವಾಸ ಶಿವಮೊಗ್ಗ ಸಹ ನಿರ್ಮಾಪಕರಾಗಿದ್ದಾರೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸಿನೆಮಾವನ್ನು ರಿಚ್ ಆಗಿಯೇ ನಿರ್ಮಿಸಲಾಗಿದೆ.
ಚಿತ್ರಕ್ಕೆ ಆರ್. ಕೆ. ಮಂಗಳೂರು ಛಾಯಾಗ್ರಹಣ ಮಾಡಿದ್ದು, ಜೀತ್ ಜೋಸೆಫ್ ಸಹ ನಿರ್ದೇಶನದಲ್ಲಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ಅರುಣ್ ರಾಜ್ ಅವರ ಸಂಗೀತ, ಹಾಡಿಗೆ ಅಶೋಕ್ ನೀಲಾವರ ಮತ್ತು ನಾಗರಾಜ್ ರಾವ್ ವರ್ಕಾಡಿ ಅವರ ಸಾಹಿತ್ಯ ಮೆರಗು ನೀಡಿದೆ. ಕುಂದಾಪುರದ ಮಾರಣಕಟ್ಟೆ ಕ್ಷೇತ್ರದಲ್ಲಿ ಅದ್ದೂರಿಯಾಗಿ ಚಿತ್ರದ ಮಹೂರ್ತ ನಡೆದಿತ್ತು. ಕುಂದಾಪುರದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಕೂಡ ಅದ್ದೂರಿಯಾಗಿ ನಡೆದಿದ್ದರೇ, ಶಿವಮೊಗ್ಗದಲ್ಲಿ ಚಿತ್ರದ ಹಾಡುಗಳ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ಕೂಡ ಯಶಸ್ವಿಯಾಗಿ ನಡೆದಿತ್ತು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರು, ನಟರು ಹಾಗೂ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡುಗಳನ್ನು ಕೇಳಿ ಮೊದಲ ಪ್ರಯತ್ನವನ್ನು ಹುರಿದುಂಬಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
ಕಮಾಲ್ ಮಾಡಿದ ಚಿತ್ರದ ಹಾಡುಗಳು:
ಕತ್ತಲೆಕೋಣೆ ಚಿತ್ರದ ನಾಲ್ಕು ಹಾಡುಗಳ ಧ್ವನಿಸಾಂದ್ರಿಕೆ ಬಿಡುಗಡೆಯ ಬಳಿಕ ಚಿತ್ರ ಸದ್ದು ಮಾಡಿತ್ತು. ಸರಿಗಮಪ ರಿಯಾಲಿಟಿ ಶೋ ರನ್ನರ್‌ಅಪ್ ಆಗಿದ್ದ ಮೆಹಬೂಬ್ ಸಾಬ್ ಅವರ ಕಂಠಸಿರಿಯಲ್ಲಿ ಮೂಡಿಬಂದ ಒಂಟಿ ಕಾನನದಿ ನೀ ಗೀತೆಯಂತೂ ಯೂಟ್ಯೂಬ್‌ನಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದು, ಕೆಲವೇ ದಿನಗಳಲ್ಲಿ ೧೫ ಲಕ್ಷಕ್ಕೂ ಮಿಕ್ಕಿ ವೀಕ್ಷಣೆಯಾಗಿದೆ. ಕಾಡುತಿಹೆ ಎನ್ನುವ ರೋಮ್ಯಾಂಟಿಕ್ ಸಾಂಗ್ ಮತ್ತು ಕನ್ನಡ ನಾಡಿನ ಕುರಿತಾದ ಜರ್ನಿ ಗೀತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಕಥೆಗೆ ಪೂರಕವಾಗಿ ಜಗವೆಂಬ ನೀತಿಯ ಪಾಠ ಎಂಬ ಹಾಡನ್ನು ಸಂದೇಶ್ ಶೆಟ್ಟಿ ಅವರೇ ರಚಿಸಿ ಹಾಡಿದ್ದಾರೆ. ಗಾಯಕಿ ಗೌರಿ ಪಿ.ಟಿ. ಮತ್ತು ಅರುಣ್ ರಾಜ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಕಾಡುತಿಹೇ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನೆಮಾಕ್ಕೆ ಅರುಣ್ ರಾಜ್ ಸಂಗೀತ ನೀಡಿದ್ದಾರೆ.
ನೈಜ ಘಟನೆಯಾಧಾರಿತ ಸಿನೆಮಾಕ್ಕೆ ಎದುರಾಗಿತ್ತು ಆತಂಕ:
ಕತ್ತಲೆಕೋಣೆ ಚಲನಚಿತ್ರದ ಟೈಟಲ್ ತಿಳಿಸುವಂತೆ ಒಂದು ಸೈಕಾಲಾಜಿಕ್ ಹಾರರ್ ಥ್ರಿಲ್ಲರ್ ಸಿನಿಮಾ. ರಾತ್ರಿ ವೇಳೆಯಲ್ಲಿಯೇ ಬಹುತೇಕ ಚಿತ್ರೀಕರಣ ನಡೆದಿದ್ದು, ಹೊಸ ತಂಡದ ಶ್ರಮ ಚಿತ್ರಕ್ಕೆ ಮೆರುಗನ್ನು ನೀಡಿದೆ. ಚಿತ್ರ ನಿರ್ಮಾಣದ ವೇಳೆ ಸಾಕಷ್ಟು ಚಿತ್ರ ವಿಚಿತ್ರ ಘಟನೆಗಳು ನಡೆದ ಚಿತ್ರ ತಂಡವನ್ನು ಭಯ ಭೀತವಾಗಿಸಿತ್ತು. ಕತ್ತಲೆಕೋಣೆ ಎಸ್ಟೇಟ್‌ನಲ್ಲಿ ಶೂಟಿಂಗ್ ಆರಂಭಿಸಿದ ಚಿತ್ರತಂಡಕ್ಕೆ ಯಾವುದೋ ಅಗೋಚರ ಶಕ್ತಿ ಎಸ್ಟೇಟ್‌ನಲ್ಲಿ ಇರುವಂತೆ ಅನುಭವವಾಗಿತ್ತ್ತು. ರಾತ್ರಿ ವೇಳೆ ಶೂಟಿಂಗ್ ನಡೆಸುವಾಗ ಸೆಟ್ ನಲ್ಲಿ ಹಾಕಿದ್ದ ಎಲ್ಲ ಲೈಟ್ ತನ್ನಷ್ಟಕ್ಕೆ ಧಿಗ್ಗನೆ ಬೆಳಗಿಕೊಂಡದ್ದು, ಸದೃಢವಾಗಿ ಬೆಳೆದು ನಿಂತಿದ್ದ ಮರ ಅಚಾನಕ್ ಆಗಿ ಧರೆಗುರುಳಿದ್ದು, ಹಗಲಿನಲ್ಲಿ ಮರವೇರಿದ ನಟನೊಬ್ಬ ಅಂತಿಮ ಶಾಟ್ ಮುಗಿಯುವ ಮುನ್ನವೆ ನೆಲಕ್ಕೆ ಬಿದ್ದಿದ್ದು, ಹೊಸ ಜನರೇಟರ್ ಸುಟ್ಟು ಹೋಗಿದ್ದು, ಕರೆಂಟ್ ಇಲ್ಲದೆ ಇದ್ದರೂ ಫ್ಯಾನ್ ತಿರುಗಿದ್ದು ಹೀಗೆ ಹತ್ತಾರು ವಿಚಿತ್ರ ಘಟನೆಗಳಿಗೆ ಕತ್ತಲೆಕೋಣೆ ಚಿತ್ರ ತಂಡ ಸಾಕ್ಷಿಯಾಗಿದೆ. ಆದರೆ ಎಲ್ಲವನ್ನೂ ಮೀರಿ ದೇವರೆಂಬುದು ನಮ್ಮ ಕೈಬಿಡಲಿಲ್ಲ. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದೆವು ಎನ್ನುತ್ತದೆ ಚಿತ್ರತಂಡ
ಒಟ್ಟಿನಲ್ಲಿ ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರಿಗೆ ಖಂಡಿತವಾಗಿಯೂ ನಿರಾಸೆಯಾಗಲಾರದು. ನೈಜ ಘಟನೆಯಾಧಾರಿತ ಸಿನೆಮಾದೂದಕ್ಕೂ ಕೌತುಕ ಪ್ರೇಕ್ಷಕರನ್ನು ಕಾಡುತ್ತದೆ. ಹಾಸ್ಯ, ಸಂಗೀತ ಖಂಡಿತ ಮನೋರಂಜನೆ ನೀಡಲಿದೆ. ಹೊಸ ಚಿತ್ರತಂಡದೊಂದಿಗೆ ಭಿನ್ನವಾದ ಶೈಲಿಯಲ್ಲಿ ಸಿನೆಮಾ ನಿರ್ಮಿಸಬಹುದು ಎಂಬುದನ್ನು ಸಿನೆಮಾ ನೋಡಿದ ಮೇಲೆಯೇ ತಿಳಿಯುತ್ತೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು./ಕುಂದಾಪ್ರ ಡಾಟ್ ಕಾಂ ವರದಿ/