ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಸುಮ ಫೌಂಡೇಷನ್‌ನ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕುಸುಮಾಂಜಲಿ-೨೦೧೮ರ ಪೂರ್ವಭಾವಿಯಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಾನಕುಸುಮ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ನಾಗೂರು ಕೆ.ಎ.ಎಸ್. ಆಡಿಟೋರಿಯಂನ ’ಬ್ಲಾಸಮ್’ ಸಂಗೀತ ನೃತ್ಯ ಶಾಲೆಯಲ್ಲಿ ಜರುಗಿತು.
ಗಾನಕುಸುಮದ ಅಂತಿಮ ಸುತ್ತಿನಲ್ಲಿ 29 ಸ್ಪರ್ಧಿಗಳು ಭಾಗವಹಿಸಿದ್ದು, ಗಾನಕುಸುಮ 2018 ಪ್ರಥಮ ಸ್ಥಾನವನ್ನು ಸೀನಿಯರ್ ವಿಭಾಗದಲ್ಲಿ ಉಡುಪಿಯ ಸಿ.ಎ. ವಿದ್ಯಾರ್ಥಿ ವಿ. ಪಿ. ಶ್ರೀಹರಿ ಹೊಳ್ಳ, ಪಡೆದುಕೊಂಡರೆ, ಜೂನಿಯರ್ ವಿಭಾಗದಲ್ಲಿ ಎಸ್.ವಿ. ಪ್ರೌಢಶಾಲೆ ಗಂಗೊಳ್ಳಿಯ ವಿದ್ಯಾರ್ಥಿನಿ ಶ್ರೇಯಾ ಎನ್. ಖಾರ್ವಿ ಪಡೆದುಕೊಂಡರು. ಸಂಗೀತಕಾರ ಚಂದ್ರಶೇಖರ ಕೆದಿಲಾಯ, ಗಾಯಕ ರಾಘವೇಂದ್ರ ಐತಾಳ ಮತ್ತು ಗಾಯಕಿ ಪಲ್ಲವಿ ತುಂಗಾ ಸುರತ್ಕಲ್ ತೀರ್ಪುಗಾರರಾಗಿದ್ದರು.
ಬೈಂದೂರು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾದ ಹೆಚ್. ವಸಂತ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕುಸುಮ ಹೋಮ್ಸ್ ಪ್ರೈ. ಲಿಮಿಟೆಡ್‌ನ ನಿರ್ದೇಶಕರಾದ ಕುಸುಮಾವತಿ ಎಸ್. ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಯು. ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.
ಕುಸುಮ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ನಳಿನ ಕುಮಾರ ಶೆಟ್ಟಿ ಇವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಗಾನಕುಸುಮ ಕಾರ್ಯಕ್ರಮವು ಕೇವಲ ಸ್ಪರ್ಧೆಯಾಗಿರದೇ, ಪ್ರತಿಭಾ ಪ್ರದರ್ಶನದ ವೇದಿಕೆಯಾಗಿದೆ. ಫೈನಲ್‌ಗೆ ಆಯ್ಕೆಯಾದ ಸ್ಪರ್ಧಿಗಳಿಗೆ, ಡಿಸೆಂಬರ್ 22, 23 ರಂದು ನಡೆಯುವ ಕುಸುಮಾಂಜಲಿ-2018ರಲ್ಲಿ ಪ್ರಸಿದ್ಧ ವೃತ್ತಿಪರ ಹಾಡುಗಾರರೊಂದಿಗೆ ಹಾಡಲು ಅವಕಾಶ ಕಲ್ಪಿಸುದರ ಮೂಲಕ ಯುವ ಉದಯೋನ್ಮುಖ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಮಹತ್ವಾಕಂಕ್ಷೆಯ ಸಂಸ್ಥೆಗಿದೆ ಎಂದರು.
ಕುಸುಮ ಫೌಂಡೇಷನ್‌ನ ನಿರ್ದೇಶಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿದ್ಯಾ ವಂದಿಸಿದರು ಹಾಗೂ ಕುಸುಮಾ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
















